ಮಂಗಳೂರು ಯುನೈಟೆಡ್ ತಂಡ ಪ್ರಥಮ, ಪಟ್ರಮೆ ಬ್ರದರ್ಸ್ ಬಿ ತಂಡ ದ್ವಿತೀಯ
ಯುವ ಘಟಕ-ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಮಂಗಳೂರು ಇದರ ವತಿಯಿಂದ ಒಕ್ಕಲಿಗರ ಪ್ರೀಮಿಯಾರ್ ಲೀಗ್ ೨೦೨೪ ಮಂಗಳೂರು (ವಿಪಿಎಲ್) ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವು ಫೆ 18 ಮತ್ತು 19 ರಂದು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ನೆರವೇರಿತು.
ಈ ಪಂದ್ಯಾಟದ ಉದ್ಘಾಟನಾ ಸಮಾರಂಭವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕುರುಂಜಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, “ಯುವ ಸಮುದಾಯದ ಸಂಘಟನೆಗಾಗಿ ಹಮ್ಮಿಕೊಂಡ ಇಂತಹ ಪಂದ್ಯಾಟಗಳಲ್ಲಿ ಯುವಕರು ಮುತುವರ್ಜಿಯಿಂದ ಭಾಗವಹಿಸಿ ಸಮುದಾಯದ ಏಳಿಗೆಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕೈಜೋಡಿಸಬೆಕು, ಯಾವುದೇ ಕಾರ್ಯಕ್ರಮ ಆಯೋಜನೆ ಬಹಳ ಕ್ಲಿಷ್ಟಕರ ಸಮುದಾಯದ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಭಾಗವಹಿಸುವುದರ ಮೂಲಕ ಗೌರವಿಸುವಂತಾಗಬೇಕು ಎಂದರು. ಸಮಾರಂಭದ ಸಭಾಧ್ಯಕ್ಷತೆಯನ್ನು ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಡೆಗುತ್ತು ವಹಿಸಿದ್ದರು. ಗುರುದೇವ್ ಯು.ಬಿ, ರವಿ ಮುಂಗ್ಲಿಮನೆ, ಚಿದಾನಂದ ಬೈಲಾಡಿ ಮಾತನಾಡಿ ಪಂದ್ಯಾಟಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಒಕ್ಕಲಿಗ ಗೌಡ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದರು. ಕು.ಪ್ರಜ್ಞಾ ಕಾಪಿನಡ್ಕ ಪ್ರಾರ್ಥಿಸಿದರು. ಕಿರಣ್ ಹೊಸಳಿಕೆ ವಂದಿಸಿದರು. ಮೋಹನ್ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.
ಈ ಪಂದ್ಯಾಟದಲ್ಲಿ ಒಟ್ಟು ೩೨ ತಂಡಗಳು ಭಾಗವಹಿಸಿದ್ದು ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ನಡೆಯಿತು.
ಫೆ.೧೯ ರಂದು ಸಮಾರೋಪ ಸಮಾರಂಭವು ನಡೆಯಿತು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರನ್ನು ಸ್ಮರಿಸಿದರು. ಯುವಕರನ್ನು ಒಟ್ಟುಗೂಡಿಸುವ ಕಾರ್ಯಕ್ಕೆ ಕ್ರೀಡಾಕೂಟದ ಆಯೋಜನೆ ಅಗತ್ಯವಿದೆ. ಸಮುದಾಯದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕ್ರೀಡೆ ಪ್ರಮುಖ ಪಾತ್ರವಹಿಸುತ್ತದೆ ಎಂದರು. ಪಿ.ಸಿ ಜಯರಾಂ, ಕೆ.ಎಂ ನಾಗೇಶ್ ಕುಮಾರ್, ಡಾ| ಶಿವಕುಮಾರ್ ಹೊಸೋಳಿಕೆ, ವೆಂಕಟ್ ವಳಲಂಬೆ, ಎ.ವಿ.ತೀರ್ಥರಾಮ ಹಾಗೂ ಗುರುದೇವ್ ಯು .ಬಿ. ಉಪಸ್ಥಿತರಿದ್ದರು. ವೇದಿಕೆಯಲ್ಲಿ ಒಕ್ಕಲಿಗ ಸಮಾಜದ ಗಣ್ಯರು, ಉದ್ಯಮಿಗಳು ಉಪಸ್ಥಿತರಿದ್ದರು. ಹರ್ಷಿತ್ ಮರ್ಕಂಜ ನಿರೂಪಿಸಿದರು.
ಅಂತಿಮ ಫೈನಲ್ ಪಂದ್ಯಾಟದಲ್ಲಿ ಮಂಗಳೂರು ಯುನೈಟೆಡ್ ಮತ್ತು ಪಟ್ರಮೆ ಬ್ರದರ್ಸ್ ಬಿ. ತಂಡಗಳ ಮಧ್ಯೆ ಸೆಣೆಸಾಟ ನಡೆದು ಮಂಗಳೂರು ಯುನೈಟೆಡ್ ತಂಡವು ವಿಜಯಿಯಾಯಿತು.
ಪ್ರಥಮ ಬಹುಮಾನ 55,555/- ಮತ್ತು ಟ್ರೋಫಿ ಮಂಗಳೂರು ಯುನೈಟೆಡ್ ತಂಡವು ಪಡೆದರೆ, ದ್ವಿತೀಯ ಬಹುಮಾನ 33,333/- ಮತ್ತು ಟ್ರೋಫಿಯನ್ನು ಪಟ್ರಮೆ ಬ್ರದರ್ಸ್ ಬಿ ತಂಡವು ಗಳಿಸಿತು. ತೃತೀಯ ಬಹುಮಾನ 15,555/- ಒಕ್ಕಲಿಗ ಯುವ ವೇದಿಕೆ ಸೋಮವಾರ ಪೇಟೆ ಹಾಗೂ ಟೀಮ್ ಗೌಡಾಸ್ ಗೋಣಿಕೊಪ್ಪ ಚತುರ್ಥ ಬಹುಮಾನಗಳನ್ನು ಗಳಿಸಿದರು.
ಫೈನಲ್ ಪಂದ್ಯಾಟದ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಉತ್ತಮ ದಾಂಡಿಗ ಪ್ರಶಸ್ತಿಯನ್ನು ಮಂಗಳೂರು ಯುನೈಟೆಡ್ ತಂಡದ ಆಟಗಾರ ಲೋಕೇಶ್ ಪುತ್ತೂರು ಪಡೆದರು. ಉತ್ತಮ ಎಸೆತಗಾರ ಮತ್ತು ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಪಟ್ರಮೆ ಬ್ರದರ್ಸ್ ಬಿ ತಂಡ ಆಟಗಾರ ರೋಹಿತ್ ಸುಬ್ರಮಣ್ಯ ಪಡೆದರು.
ಉತ್ತಮ ಫೀಲ್ಡರ್ ಪ್ರಶಸ್ತಿಯನ್ನು ಒಕ್ಕಲಿಗ ಯುವ ವೇದಿಕೆ ಸೋಮವಾರಪೇಟೆ ತಂಡದ ಆಟಗಾರ ವಿಕ್ರಮ ಸಾಗರ್ ಪಡೆದುಕೊಂಡರು. ಪ್ರಶಸ್ತಿ ವಿತರಣಾ ಸಂದರ್ಭದಲ್ಲಿ ಕಿರಣ್ ಬುಡ್ಡೆಗುತ್ತು, ಬಾಲಕೃಷ್ಣ ಡಿ.ಬಿ., ಸುರೇಶ್ ಬೈಲು, ಡಾ| ಪುರುಷೋತ್ತಮ ಉಪಾಧ್ಯಕ್ಷರು, ಶಿವರಾಮ ನಿನ್ನಿಕಲ್ಲು, ಕಿರಣ್ ಹೊಸಳಿಕೆ, ರಕ್ಷಿತ್ ಪುತ್ತಿಲ , ಸುನಿಲ್ ಕೆರ್ನಡ್ಕ, ಕ್ರಿಕೆಟ್ ಪಂದ್ಯಾಟದ ಸಂಚಾಲಕರು ಹಾಗೂ ಯುವ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.