ಕ್ಷೇತ್ರ ಮೀಸಲಾತಿ ರೊಟೇಷನ್ ಗಾಗಿ ಸುದ್ದಿಯು ಮಾಧ್ಯಮವಾಗಿ ಬೆಂಬಲ ನೀಡಲಿದೆ: ಡಾ. ಯು.ಪಿ. ಶಿವಾನಂದ
ಮಾ.5ರಂದು ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನ
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಇರುವ ಮೀಸಲಾತಿ ರೊಟೇಷನ್ ಮಾದರಿಯಲ್ಲಿ ದ.ಕ. ಜಿಲ್ಲೆಯ ಇತರೆ ವಿಧಾನಸಭಾ ಕ್ಷೇತ್ರಕ್ಕೂ ಬದಲಾಗಬೇಕು ಎಂಬ ಜನರ ಒಲ್ಕೋರಲ ಬೇಡಿಕೆ ಕುರಿತಂತೆ ಪೂರ್ವಭಾವಿ ಸಭೆಯು ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗಮಯೂರಿ ಕಲಾಶಾಲೆಯಲ್ಲಿ ಫೆ.23ರಂದು ನಡೆಯಿತು.
ಸುದ್ದಿ ಸಮೂಹ ಮಾದ್ಯಮ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಅವರು ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರದ ಮೀಸಲಾತಿ ರೊಟೇಷನ್ ಮೂಲಕ ಬದಲಾವಣೆಯಾಗಲೇ
ಬೇಕೆಂದು ಸಭೆಯಲ್ಲಿದ್ದವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿ ಪತ್ರಿಕೆಯ ಪ್ರದಾನ ವರದಿಗಾರ ಹರೀಶ್ ಬಂಟ್ವಾಳ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ಯು.ಪಿ. ಶಿವಾನಂದರು ಮಾತನಾಡಿ, ಕ್ಷೇತ್ರ ಮೀಸಲಾತಿ ತೆಗೆಯಬೇಕು ಎಂಬುದು ನಮ್ಮ ಉದ್ದೇಶವಲ್ಲ. ಬದಲಾಗಿ ಇಲ್ಲಿರುವ ಮೀಸಲಾತಿಯು ರೊಟೇಷನ್ ಮೂಲಕ ಜಿಲ್ಲೆಯ ಇತರೆ ಕ್ಷೇತ್ರಕ್ಕೂ ಬದಲಾಗಬೇಕು. ಮೀಸಲಾತಿಯಲ್ಲಿ ಮಹಿಳೆಯರಿಗೂ ಪ್ರಾಧಾನ್ಯತೆ ಸಿಗಬೇಕಾಗಿದೆ. ಅದಕ್ಕಾಗಿ ಜನರಿಂದ ಕ್ಷೇತ್ರ ಮೀಸಲಾತಿಯು ಜನಾಂದೋಲನದ ಮೂಲಕ ಬದಲಾಗಬೇಕು. ಈ ನಿಟ್ಟಿನಲ್ಲಿ ಒಂದು ಮೀಸಲಾತಿ ಹೋರಾಟ ಸಮಿತಿಯನ್ನು ರಚಿಸಬೇಕು. ಸುದ್ದಿ ಮಾಧ್ಯಮವು ಮೀಸಲಾತಿ ರೊಟೇಷನ್ ಗಾಗಿ ಬೆಂಬಲ ನೀಡಲಿದೆ ಎಂದು ಹೇಳಿದರು.
ಮೀಸಲಾತಿ ರೊಟೇಷನ್ ಕುರಿತಂತೆ ಇನ್ನಷ್ಟು ಜನರನ್ನು ಒಟ್ಟುಗೂಡಿಸಿ ಸಭೆ ಸೇರಿಸುವ ನಿಟ್ಟಿನಲ್ಲಿ ಮುಂದಿನ ಮಾ.5ರಂದು ಇನ್ನೊಂದು ಸುತ್ತಿನ ಸಭೆ ನಡೆಸುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಡಾ. ಎನ್.ಎ. ಜ್ಞಾನೇಶ್, ಅಶೋಕ ಎಡಮಲೆ, ಉಮೇಶ್ ಕೆ.ಎಂ.ಬಿ. ಪೆರುವಾಜೆ, ಜಿ.ಕೆ. ಹಮೀದ್ ಸಂಪಾಜೆ, ಅಶೋಕ್ ಪೀಚೆ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಕರುಣಾಕರ ಪಲ್ಲತ್ತಡ್ಕ, ಸುಳ್ಯಕೋಡಿ ಮಾದವ ಗೌಡ, ಪದ್ಮನಾಭ ಭಟ್ ಕನಕಮಜಲು, ಶ್ರೀಮತಿ ರೇಣುಕಾ ಸದಾನಂದ ಜಾಕೆ, ಶಶಿಧರ ಎಂ.ಜೆ. ದುಗಲಡ್ಕ, ನಂದರಾಜ ಸಂಕೇಶ, ದಿವಾಕರ ನಾಯಕ್ ಮಜಿಗುಂಡಿ, ಪ್ರಕಾಶ್ ಅರಂತೋಡು ಸೇರಿದಂತೆ ಸುದ್ದಿ ಸಿಬ್ಬಂದಿಗಳು ಉಪಸ್ಥಿತರಿದ್ದರು.