ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣಕ್ಕೆ ಇಲಾಖೆ ಗುರುತಿಸಿದ ಜಾಗ ಪಂಚಾಯತ್ ನಿಂದ ರಿಜೆಕ್ಟ್

0

ಪಂಚಾಯತ್ ಕ್ರಮಕ್ಕೆ ಗ್ರಾಮ ಸಭೆಯಲ್ಲಿ ಅಸಮಾಧಾನ : ಬದಲಿ ಜಾಗ ಗುರುತಿಸಲು ಬರೆದಿದ್ದೇವೆ – ಪಂಚಾಯತ್ ಸ್ಪಷ್ಟನೆ

ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣಕ್ಕೆ ಕಂದಾಯ ಇಲಾಖೆ ಗುರುತಿಸಿದ ಜಾಗವನ್ನು ಪಂಚಾಯತ್ ರಿಜೆಕ್ಟ್ ಮಾಡಿರುವ ವಿಚಾರ ಉಬರಡ್ಕ‌ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾದ ಹಾಗೂ ಬದಲಿ ಜಾಗ ಗುರುತಿಸಲು ಕಂದಾಯ ಇಲಾಖೆಗೆ ಬರೆದಿರುವ ಕುರಿತು ಅಧ್ಯಕ್ಷರು ಸ್ಪಷ್ಟನೆ ನೀಡಿರುವ ಘಟನೆ ನಡೆದಿದೆ.

ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸೂಂತೋಡು ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಜಗದೀಶ್ ರುದ್ರೇಗೌಡ ಪಾಟೀಲ ನೋಡೆಲ್ ಅಧಿಕಾರಿಯಾಗಿದ್ದರು.
ಉಪಾಧ್ಯಕ್ಷೆ ಚಿತ್ರಾ ಕುಮಾರಿ, ಸದಸ್ಯರುಗಳಾದ ಪ್ರಶಾಂತ್ ಪಾನತ್ತಿಲ, ಹರೀಶ್ ರೈ‌ ಉಬರಡ್ಕ, ಅನಿಲ್ ಬಳ್ಳಡ್ಕ, ಮಮತಾ ಕುದ್ಪಾಜೆ, ಭವಾನಿ, ಸಂದೀಪ್, ಪಿಡಿಒ ರವಿಚಂದ್ರ ಇದ್ದರು.‌ ಪಂಚಾಯತ್ ಸಿಬ್ಬಂದಿ ರಜೀಶ್ ವರದಿ ವಾಚಿಸಿದರು.

ಗ್ರಾಮ ಆಡಳಿತಾಧಿಕಾರಿ ‌ಮಾಹಿತಿ ನೀಡುತಿದ್ದಾಗ, ಮಾತನಾಡಿದ ಗ್ರಾ.ಪಂ. ಮಾಜಿ ಅಧ್ಯಕ್ಷ ‌ಪಿ.ಎಸ್.ಗಂಗಾಧರ ರು “ಉಬರಡ್ಕ‌ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದೆ. ಇದಕ್ಕೆ‌ ಕಂದಾಯ ಇಲಾಖೆಯಿಂದ ಜಾಗ ಗುರುತು‌ ಮಾಡಿದ್ದೀರಾ ? ಎಂದು ಪ್ರಶ್ನಿಸಿದರು. ” ನಾವು ಮಿತ್ತೂರಿನಲ್ಲಿ ಒಂದು ಎಕ್ರೆ ಜಾಗ ಗುರುತಿಸಿದ್ದೆವು. ಪಂಚಾಯತ್ ನವರು ಆ ಜಾಗ ಬೇಡ ಎಂದು ಹೇಳಿದ್ದಾರೆ ಹೇಳಿದಾಗ, “ಮಿತ್ತೂರು ಒಳ್ಳೆಯ ಜಾಗ ಅದು ಆಗಬಹುದಿತ್ತು” ಎಂದು ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕ ಹೇಳಿದರು. “ಆ ಜಾಗ ಬೇಡ ಎಂದಾದರೆ ಬೇರೆ ಜಾಗ ಇದೆಯಾ ಬೇರೆ ಜಾಗ ಕೊಡಿ. ಆ ಜಾಗ ಯಾಕೆ ಬೇಡ” ಎಂದು ಪಿ.ಎಸ್.ಗಂಗಾಧರ್ ಪ್ರಶ್ನಿಸಿದಾಗ, “ಆ ಜಾಗಕ್ಕೆ ರಸ್ತೆ ವ್ಯವಸ್ಥೆ ಇಲ್ಲ. ಗುಡ್ಡ ಪ್ರದೇಶ. ಅಲ್ಲಿ ಯಾಕೆ ಹಾಕೋದು. ವಾಹನವೂ ಹೋಗೋದಿಲ್ಲ. ಆದ್ದರಿಂದ ಬೇರೆ ಜಾಗ ಗುರುತಿಸುವಂತೆ ನಾವು ಕಂದಾಯ ಇಲಾಖೆಗೆ ಬರೆದಿದ್ದೇವೆ” ಎಂದು ಪಂಚಾಯತ್ ಅಧ್ಯಕ್ಷರು ಸ್ಪಷ್ಟನೆ ನೀಡಿದರು. ಇದರಿಂದ ಅಸಮಾಧಾನ ಗೊಂಡ ಪಿ.ಎಸ್. ಗಂಗಾಧರರು “ಅದು ಒಳ್ಳೆಯ ಜಾಗವೇ. ಪಂಚಾಯತ್ ಗೆ ಬರುವ ರಸ್ತೆಗಿಂತ ಆ ರಸ್ತೆ ಎಷ್ಟೋ ಚೆನ್ನಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ಸರಕಾರ ಅನುದಾನ ನೀಡಿ ಒಂದು ವರ್ಷವಾದರೂ ಜಾಗ ಗುರುತಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ಅಭಿವೃದ್ಧಿಯಲ್ಲಿ ಯಾಕೆ ನಿರ್ಲಕ್ಷ್ಯ ವಹಿಸುತ್ತೀರಿ. ಆದಷ್ಟು ಬೇಗ ಈ ಕೆಲಸ ಆಗುವಂತೆ ಮಾಡಿ. ಇದು ನಮಗೆ ಸಿಕ್ಕಿದ ಒಂದು ಅವಕಾಶ ಅದರ ಬಗ್ಗೆ ಈ ರೀತಿ ಮಾಡಬೇಡಿ ಎಂದು ಹೇಳಿದರು.

” ಬೇರೆ ಜಾಗಕ್ಕೆ ಬರೆದಿದ್ದೇವೆ” ಎಂದು ಅಧ್ಯಕ್ಷ ರು‌ ಮತ್ತೆ ಹೇಳಿದರು. ಅಲ್ಲಿಗೆ ಚರ್ಚೆಗೆ ತೆರೆ ಬಿತ್ತು.

ಉಬರಡ್ಕ ವಾಣಿಜ್ಯ ಸಂಕೀರ್ಣ, ಪಂಚಾಯತ್ ಹಳೆ ವಸ್ತುಗಳ ಮಾರಾಟ, ಹುಳಿಯಡ್ಕ ರಸ್ತೆ ಅಭಿವೃದ್ಧಿ, ಸುಳ್ಯ ಗೋಮಾಳ ಜಾಗ ಸಹಿತ ಹಲವು ವಿಚಾರಗಳ ಚರ್ಚೆ ನಡೆಯಿತು.