ಸಾಲ ಮನ್ನಾ ಬಾಕಿ ರೈತರ ಪರ ಭಾರತೀಯ ಕಿಸಾನ್ ಸಂಘ ಹೈಕೋರ್ಟ್ ಗೆ ದೂರು

0

ಕರ್ನಾಟಕ ಸರಕಾರ ತ್ವರಿತವಾಗಿ ಕ್ರಮ ಕೈಗೊಳ್ಳಲು ಒತ್ತಾಯ

ಅಡಿಕೆ ಆಮದನ್ನು ನಿಲ್ಲಿಸಲು ಸರಕಾರಕ್ಕೆ ಕಿಸಾನ್ ಸಂಘ ಆಗ್ರಹ

ಸಾಲ ಮನ್ನಾ ಬಾಕಿ ರೈತರ ಪರವಾಗಿ ಭಾರತೀಯ ಕಿಸಾನ್ ಸಂಘ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ದೂರು ನೀಡಿರುತ್ತದೆ. ಈ ಬಗ್ಗೆ ಕರ್ನಾಟಕ ಸರಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು.


ಅಡಿಕೆ ಆಮದನ್ನು ನಿಲ್ಲಿಸಿ, ಅಡಿಕೆಗೆ ಬೆಂಬಲಬೆಲೆ ಘೋಷಣೆ ಮಾಡಬೇಕು ಎಂದು ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಆಗ್ರಹಿಸಿದೆ.
ಇಂದು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿಸಾನ್ ಸಂಘದ ಅಧ್ಯಕ್ಷ ಎನ್.ಜಿ.ಪ್ರಭಾಕರ ರೈ 2018ರಲ್ಲಿ ಆಗಿನ ಕರ್ನಾಟಕ ಸರಕಾರವು ರೈತರ ಸಂಕಷ್ಟ ಪರಿಹರಿಸಲು ರೈತರು ಸಹಕಾರಿ ಸಂಘಗಳಿಂದ ಪಡೆದ ಸಾಲಗಳಲ್ಲಿ ರೂಪಾಯಿ 1 ಲಕ್ಷದವರೆಗಿನ ಮೊಬಲಗನ್ನು ಮನ್ನಾ ಮಾಡಿ ಆದೇಶ ನೀಡಿತು. ಸಾಲವಿರುವ ರೈತರು ಅಗತ್ಯ ದಾಖಲೆಗಳನ್ನು ನೀಡಿ ಈ ಕುರಿತು ಅರ್ಜಿ ಸಲ್ಲಿಸಲು ಸೂಚಿಸಲಾಯಿತು. ಇದನ್ನು ನಂಬಿ ಸರಕಾರ ಸೂಚಿಸಿದ ಅರ್ಹತಾ
ಪಟ್ಟಿಯಲ್ಲಿ ಬರುವ ರೈತರಿಂದ ಒತ್ತಾಯಿಸಿ ಅರ್ಜಿಗಳನ್ನು ಸಹಕಾರಿ ಸಂಘಗಳ ಮೂಲಕ ಸಲ್ಲಿಕೆಯಾಯಿತು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಾಲಮನ್ನಾದ ಮೊಬಲಗು ರೈತರ ಖಾತೆಗಳಿಗೆ ಜಮೆಯಾಗತೊಡಗಿತು. ಎರಡು ವರ್ಷಗಳ ತನಕ ಕೆಲವು ರೈತರಿಗೆ ಹಣ ಬಂದಿದ್ದು, ಆಮೇಲೆ ಈ ಪ್ರಕ್ರಿಯೆ ನಿಂತಿತು.ಇನ್ನೂ ಹಲವಾರು ರೈತರಿಗೆ ಸಾಲಮನ್ನಾ ಮೊಬಲಗು ಬರಲು ಬಾಕಿಯಿದ್ದು ‘ಸಾಲಮನ್ನಾ’ ಸೌಲಭ್ಯ ವಂಚಿತರಾಗಿದ್ದಾರೆ.

ಈ ಕುರಿತು ಹಿಂದಿನ ಅವಿಭಜಿತ ಸುಳ್ಯ ತಾಲೂಕಿನ ರೈತರ ‘ಸಾಲಮನ್ನಾ’ ಮೊಬಲಗು ಬರಲು ಬಾಕಿಯಿರುವ ರೈತರ ವಿವರಗಳನ್ನು ಸಂಗ್ರಹಿಸಿ ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯಕ್ಕೆ ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಸಮಿತಿಯು ಸಾರ್ವಜನಿಕ ಹಿತಾಸಕ್ತಿ ದೂರು ನೀಡಿರುತ್ತದೆ. ಈ ದೂರಿನಲ್ಲಿ 334 ರೈತರು ತಮಗೆ ಇನ್ನೂ ಕೂಡ ಸಾಲಮನ್ನಾದ ಮೊಬಲಗು ಬಂದಿಲ್ಲವೆಂದು ವಿವರ ನೀಡಿದ್ದು ಆ ಮೊಬಲಗು ರೂಪಾಯಿ 3,00.47.435-00 ಆಗಿರುತ್ತದೆ. ರಾಜಕೀಯ ಪಕ್ಷಗಳ ನಾಯಕರು ಈಗಲೂ ಕೂಡ ರೈತರ ಸಾಲಮನ್ನಾ ಮಾಡಬೇಕೆಂದು ಒತ್ತಾಯ ಮಾಡುತ್ತಿರುವುದು ಕಾಣುತ್ತದೆ. ಆದರೆ ಅವರ ಸರಕಾರದ ಅವಧಿಯಲ್ಲಿ ಅದು ಯಾಕೆ ರೈತರಿಗೆ ತಲುಪಿಲ್ಲವೆಂದು ವಿಚಾರಿಸುವ ಗೋಜಿಗೆ ಹೋಗುತ್ತಿಲ್ಲ. ಈ ಪಕ್ಷದ ಆಡಳಿತವಿರುವಾಗ ಆ ಪಕ್ಷದ ನಾಯಕರು, ಆ ಪಕ್ಷದ ಆಡಳಿತವಿರುವಾಗ ಈ ಪಕ್ಷದ ನಾಯಕರು ರೈತರ ಸಾಲ ಮನ್ನಾಕ್ಕಾಗಿ ಬೇಡಿಕೆ ಇಡುವುದು ಕಾಣುತ್ತದೆ. ಆದರೆ ಅದರಲ್ಲಿರುವ ಪ್ರಾಮಾಣಿಕತೆ ಎಷ್ಟು ಎಂದು ನಾವು ಗಮನಿಸಬೇಕಾಗಿದೆ. 2018ರಲ್ಲಿ ಕರ್ನಾಟಕ ಸರಕಾರ ಆದೇಶಿಸಿ ತೆಗೆದಿಟ್ಟ ಸಾಲಮನ್ನಾದ ಮೊಬಲಗುಗಳು ಆದಷ್ಟು ಶೀಘ್ರದಲ್ಲಿ ಸಾಲಮನ್ನಾ ವಂಚಿತ ರೈತರಿಗೆ ಸಿಗಲಿ ಎಂದು ಆಶಿಸಿ ಈ ಬಗ್ಗೆ ಕರ್ನಾಟಕ ಸರಕಾರವು ತ್ವರಿತ ಕ್ರಮ ಕೈಗೊಳ್ಳಲಿ ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ಅವರು ಹೇಳಿದರು.
2024-27ನೇ ಸಾಲಿನ ಭಾರತೀಯ ಕಿಸಾನ್ ಸಂಘದ ಸದಸ್ಯತ್ವ ಅಭಿಯಾನ ಈಗಾಗಲೇ ಪ್ರಾರಂಭಗೊಂಡಿದ್ದು ತಾಲೂಕಿನ ಎಲ್ಲಾ ರೈತ ಬಾಂಧವರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.

ಅಡಿಕೆ ಆಮದಿನಿಂದಾಗಿ ಅಡಿಕೆ ಬೆಲೆ ಕುಸಿದಿದೆ.ಅದನ್ನು ಸರಕಾರ ನಿಲ್ಲಿಸಬೇಕು.ಅಡಿಕೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ಸಂಸ್ಥೆ ರೈತರ ಪರವಾಗಿ ನಿಲ್ಲಬೇಕು.ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡುವ ವ್ಯವಸ್ಥೆ ಸರಕಾರ ಮಾಡಬೇಕು ಎಂದು ಕಾರ್ಯದರ್ಶಿ ಸಾಯಿಶೇಖರ ಕರಿಕ್ಕಳ ಹೇಳಿದರು.

ಸುಳ್ಯದ ವಿದ್ಯುತ್ ಸಮಸ್ಯೆಗಾಗಿ ಇಲ್ಲಿಯ ಕೃಷಿಕರು, ಬಳಕೆದಾರರು ನಮ್ಮೊಂದಿಗೆ ಕೈಜೋಡಿಸಿದರೆ ಹೋರಾಟ ಮಾಡುತ್ತೇವೆ ಎಂದು ಗೌರವಾಧ್ಯಕ್ಷ ನೆಟ್ಟಾರು ಗೋಪಾಲಕೃಷ್ಣ ಭಟ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಿಸಾನ್ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಕೂಜುಗೋಡು,ಈಶ್ವರ ಭಟ್ ಕಾವಿನಮೂಲೆ ಉಪಸ್ಥಿತರಿದ್ದರು.