ಒಕ್ಕಲಿಗ ಸಮುದಾಯದ ಅವೈಜ್ಞಾನಿಕ ಜನಗಣತಿ ವರದಿಗೆ ರಾಜ್ಯ ಒಕ್ಕಲಿಗ ಸಂಘ ವಿರೋಧ

0

ಈ ವರದಿ ಅಪ್ರಸ್ತುತ : ಡಾ. ರೇಣುಕಾ ಪ್ರಸಾದ್ ಕೆ.ವಿ.

ರಾಜ್ಯ ರಾಜಕಾರಣದಲ್ಲಿ ಚರ್ಚಾ ವಿಷಯವಾಗಿರುವ ಕಾಂತರಾಜು ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಜ. 16ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ ಎಂಬ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಒಕ್ಕಲಿಗರ ಸಂಘದಿಂದ ಡಿ. 10ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ. ಯವರು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ವರದಿಯಲ್ಲಿ ಸಿದ್ಧಪಡಿಸಲಾದ ಈ ವರದಿ ಅವೈಜ್ಞಾನಿಕ. ವರದಿ ತಯಾರಿಸಿ 9 ವರ್ಷವಾಗಿದೆ. 10 ವರ್ಷಕ್ಕೊಮ್ಮೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಬೇಕೆಂಬ ನಿಯಮ ಇರುವುದರಿಂದ ಈ ವರದಿ ಅಪ್ರಸ್ತುತ. 9 ವರ್ಷದಲ್ಲಿ ಸಮಾಜದಲ್ಲಿ ಹಲವು ಬದಲಾವಣೆಗಳಾಗಿವೆ.

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಯ ನೈಜ ಸ್ಥಿತಿಯನ್ನು ವರದಿ ಬಿಂಬಿಸುವುದಿಲ್ಲ. ಆದ್ದರಿಂದ ನಿಖರ ಸತ್ರಾಂಶ ಪಡೆದು ಹೊಸದಾಗಿ ಜಾತಿಗಣತಿ ವರದಿ ತಯಾರಿಸುವುದು ಸೂಕ್ತ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಬಿ. ಕೆಂಚಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ, ಖಜಾಂಚಿ ನೆಲ್ಲಿಗೆರೆ ಬಾಲು, ಸಿ. ಜಯ ಮತ್ತು ಅಂಜನಪ್ಪ, ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಸಂಚಾಲಕ ನಾಗರಾಜ್ ಯಲಚವಾಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.