ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಶೀಘ್ರವಾಗಿ ಬೆಳ್ಳಿ ರಥ ಸಮರ್ಪಣೆ

0

ಉತ್ತಮ ಆಡಳಿತ ನೀಡಿದ್ದೇವೆ ಅನ್ನುವ ಸಮಧಾನವಿದೆ, ಇನ್ನಷ್ಟು ಆಗಬೇಕಾದ ಕೆಲಸಗಳಿವೆ : ಮೋಹನ್ ರಾಮ್ ಸುಳ್ಳಿ

ಕುಕ್ಕೆ ದೇವಳದ ನಿರ್ಗಮಿತ ವ್ಯವಸ್ಥಾಪನಾ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ

ಕಳೆದ ಮೂರು ವರ್ಷಗಳಲ್ಲಿ ಎಲ್ಲ ವಿರೋಧಾಭಾಸಗಳ ನಡುವೆಯೂ ಕಾಣುವಂತಹ ಒಂದಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಾಡುವಲ್ಲಿ ಸಫಲರಾಗಿದ್ದೇವೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಹೇಳಿದರು.
ಅವರು ತಮ್ಮ ವ್ಯವಸ್ಥಾಪನಾ ಸಮಿತಿಯ ಅವಧಿ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ದೇವಳದ ಆಡಳಿತ ಕಛೇರಿ ಸಭಾಂಗಣದಲ್ಲಿ ಮಾ.೫ ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಇನ್ನು ಕೆಲವೇ ಸಮಯದಲ್ಲಿ ದೇವಾಲಯಕ್ಕೆ ದಾನಿಗಳಿಂದ ಬೆಳ್ಳಿ ರಥ ಸಮರ್ಪಣೆ ನಡೆಯಲಿದೆ ಎಂದಿದ್ದಾರೆ. ನಮ್ಮ ಅವಧಿಯಲ್ಲಿ ಪ್ರಗತಿಯಲ್ಲಿದ್ದ ಎರಡನೇ ಹಂತದ ಮಾಸ್ಟರ್ ಪ್ಲಾನ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಸರ್ವರ ಸಹಕಾರದಲ್ಲಿ ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದೇವೆ ಎಂದರು.
ದೇವಾಲಯದ ಸಿಬಂದಿಗಳನ್ನು ಗುರುತಿಸುವಿಕೆ ಸುಲಭಗೊಳಿಸಲು ಹಾಗೂ ಕಾರ್ಯಕ್ಷಮತೆ ಹೆಚ್ಚಿಸುವ ದೃಷ್ಟಿಯಿಂದ ಎಲ್ಲ ಸಿಬ್ಬಂದಿಗಳಿಗೆ ಸಮವಸ್ತ್ರ ಹಾಗೂ ಗುರುತಿನ ಚೀಟಿ ನೀಡಲಾಗಿದೆ. ಹಾಜರಾತಿಯನ್ನು ವ್ಯವಸ್ಥಿತಗೊಳಿಸಲು ಮುಖ ಗುರುತಿಸುವ ಹಾಗೂ ಬೆರಳಚ್ಚು ದಾಖಲಿಸುವ ಬಯೋಮೆಟ್ರಿಕ್ ಸಾಧನವನ್ನು ಅಳವಡಿಸಲಾಗಿದೆ ಎಂದರು. ಸರ್ಪಸಂಸ್ಕಾರ ಸೇವೆಯ ನೋಂದಣಿಯಲ್ಲಿನ ಸಂಭವನೀಯ ಗೊಂದಲ ನಿವಾರಣೆಗಾಗಿ ಆನ್ಲೈನ್ ನೋಂದಣಿ ಆರಂಭಿಸಿ ವ್ಯವಸ್ಥಿತಗೊಳಿಸಲಾಗಿದೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪುರುಷರಾಯ ಬೆಟ್ಟದ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸ ಲಾಗಿದೆ. ಸಿಬ್ಬಂದಿ ವೃಂದದವರ ಅನೇಕ ವರ್ಷಗಳ ಬೇಡಿಕೆಯಂತೆ ಎಸ್. ಅಂಗಾರರ ವಿಶೇಷ ಮುತುವರ್ಜಿಯಿಂದ ೧೨೫ ಮಂದಿ ಸಿಬ್ಬಂದಿಗಳ ಸೇವೆಯನ್ನು ಖಾಯಂಗೊಳಿಸಲಾಗಿದೆ. ೧೫೫ ಮಂದಿ ಹಿರಿಯ ಸಿಬ್ಬಂದಿಗಳನ್ನು ಆರನೆಯ ವೇತನ ಆಯೋಗದ ವೇತನ ಶ್ರೇಣಿಗೆ ಒಳಪಡಿಸಲಾಗಿದೆ. ಶ್ರೀ ದೇವಳದ ವತಿಯಿಂದ ಘನತ್ಯಾಜ್ಯ ಘಟಕ ಸ್ಥಾಪನೆಗೆ ಕಡಬ ತಾಲೂಕು ಏನೆಕಲ್ಲು ಗ್ರಾಮದ ಮಲಯಾಳ ಎಂಬಲ್ಲಿ ೧.೫೫ ಎಕ್ರೆ ಹಾಗೂ ಸುಬ್ರಹ್ಮಣ್ಯ ಗ್ರಾಮದಲ್ಲಿ ೦.೪೦ ಎಕ್ರೆ ಸ್ಥಳವನ್ನು ಕಾಯ್ದಿರಿಸಲಾಗಿದೆ. ಕಡಬ ತಾಲೂಕು ಐನೆಕಿದು ಗ್ರಾಮದಲ್ಲಿ ಶ್ರೀ ದೇವಾಲಯದ ಹೆಸರಲ್ಲಿ ಗೋಮಾಳ ನಿರ್ಮಾಣಕ್ಕಾಗಿ ೧೮.೮೫ ಎಕ್ರೆ ಸ್ಥಳವನ್ನು ಕಾಯ್ದಿರಿಸಲಾಗಿದೆ ಎಂದರು.

ಕುಮಾರಧಾರದಿಂದ ರಥಬೀದಿ ತನಕ ರಸ್ತೆಯ ಬದಿಯಲ್ಲಿ ಪರಿಸರ ಸ್ನೇಹಿ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.
ಪ್ರತಿ ಏಕಾದಶಿ ದಿನ ಎರಡು ಗಂಟೆಗಳ ಕಾಲ ದೇವಾಲಯದ ಎಲ್ಲ ಸಿಬ್ಬಂದಿ ವೃಂದದವರ ಪಾಲ್ಗೊಳ್ಳುವಿಕೆಯೊಂದಿಗೆ ದೇವಾಲಯದ ಒಳಗಡೆ ಸ್ವಚ್ಛ ಮಂದಿರ ಎಂಬ ಪರಿಕಲ್ಪನೆಯೊಂದಿಗೆ ಮಂದಿರವನ್ನು ವಿಶೇಷವಾಗಿ ಸ್ವಚ್ಛಗೊಳಿಸಲಾಗುತ್ತಿದೆ. ಅಲ್ಲದೆ ಕುಮಾರಧಾರದಿಂದ ಹಾಗೂ ಇಂಜಾಡಿಯಿಂದ ರಥಬೀದಿ ತನಕ, ಆದಿಸುಬ್ರಹ್ಮಣ್ಯ ಆಸುಪಾಸಿನಲ್ಲಿ ಪ್ಲಾಸ್ಟಿಕ್, ಕಸಕಡ್ಡಿ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.


ಪ್ರತಿ ವಾರ ನಾಡಿನ ಸುಪ್ರಸಿದ್ಧ ಹಾಗೂ ಉದಯೋನ್ಮುಖ ಕಲಾವಿದರಿಗೆ ಕಲಾಸೇವೆ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಲಕ್ಷ ದೀಪೋತ್ಸವದ ದಿನ ಊರ ಪರವೂರ ಭಜನಾ ತಂಡಗಳಿಂದ ಕುಣಿತ ಭಜನೋತ್ಸವ, ನಂತರ ಊರಿನ ಎಲ್ಲ ಸಂಘಸಂಸ್ಥೆಗಳ ಭಾಗವಹಿಸುವಿಕೆಯಲ್ಲಿ ಲಕ್ಷ ಹಣತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಬ್ರಹ್ಮ ರಥೋತ್ಸವ ಯಶಸ್ವಿಯಾಗಿ ಜರುಗುವಂತೆ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷವಾಗಿ ಗಮನಹರಿಸಲಾಗುತ್ತಿದೆ. ಸ್ಥಳೀಯ ಸಂಘ ಸಂಸ್ಥೆಗಳು, ವಿದ್ಯಾರ್ಥಿಸಮೂಹ, ಆರಕ್ಷಕರು ವ್ಯವಸ್ಥಿತವಾಗಿ ಜರುಗಲು ಸಹಕರಿಸುತ್ತಿದ್ದಾರೆ. ಕಿರುಷಷ್ಟಿ ಸಾಂಸ್ಕೃತಿಕ ಕಾರ್ಯಕ್ರಮ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ಜರುಗಬೇಕೆಂಬ ದೃಷ್ಟಿಯಿಂದ ರಥಬೀದಿಯ ಕೊನೆಯಲ್ಲಿ ವಿಶಾಲವಾದ ಜಾಗದಲ್ಲಿ ತಾತ್ಕಾಲಿಕ ಭವ್ಯವಾದ ಸಭಾಂಗಣದಲ್ಲಿ ನಡೆಸಲಾಯಿತು ಮತ್ತು ಜನಮೆಚ್ಚುಗೆ ಗಳಿಸಿದೆ ಎಂದರು.

ವಿಸ್ಕೃತ ನೀಲ ನಕಾಶೆ ಸಿದ್ಧ:


ಭಕ್ತಾದಿಗಳ ಅನುಕೂಲಕ್ಕಾಗಿ ಮಾಸ್ಟರ್ ಪ್ಲಾನ್ ಮೂರನೇ ಹಂತದ ಕಾಮಗಾರಿ ಕೈಗೊಳ್ಳಬೇಕಾದ ಅನಿವಾರ್ಯತೆಯನ್ನು ಕಂಡುಕೊಂಡು ವಿಸ್ತೃತವಾದ ನೀಲನಕಾಶೆ ತಯಾರಿಸಲಾಗಿದ್ದು, ಸರ್ಕಾರದ ಮಂಜೂರಾತಿ ಬಾಕಿಯಿರುತ್ತದೆ. ದೇವಾಲಯದ ಹೊರ ಭಾಗದಲ್ಲಿರುವ ಒಳಚರಂಡಿ ವ್ಯವಸ್ಥೆಯನ್ನು ಸುಗಮಗೊಳಿಸಲು ದೂರದೃಷ್ಟಿಯ ವಿಸ್ತೃತವಾದ, ವೈಜ್ಞಾನಿಕ ಯೋಜನಾ ವರದಿ ತಯಾರಿಸಲಾಗಿದೆ. ದೇವಾಲಯದ ಖಾತೆಗಳಲ್ಲಿ ಇದೀಗ ಒಟ್ಟಾರೆ ರೂ. ೪೯೬.೧೬ ಕೋಟಿಯಷ್ಟು ಠೇವಣಿಯಿದೆ ಹಾಗೂ ದೇವಾಲಯಕ್ಕೆ ಅಗತ್ಯವಿರುವ ಭಕ್ತಾದಿಗಳ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳನ್ನೊಳಗೊಂಡ ಕೆಲವು ಯೋಜನೆಗಳನ್ನು ಮಾಸ್ಟರ್ ಪ್ಲಾನ್ ಮೂಲಕ ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಗೊಳಿಸಿಡಲಾಗಿದೆ. ಮುಂದಿನ ಆಡಳಿತ ಈ ಹಣವನ್ನು ದೇವಾಲಯದ ಕೆಲಸಕ್ಕೆ ಮಾತ್ರ ಉಪಯೋಗಿಸಬೇಕಾಗಿ ಮತ್ತು ತಯಾರು ಮಾಡಿರುವ ವಿನ್ಯಾಸವನ್ನು ಸರಕಾರದ ಕ್ಯಾಬಿನೇಟ್ ಅಲ್ಲಿ ಇಟ್ಟು ಕಾಮಗಾರಿಯನ್ನು ಆರಂಭಿಸಬೇಕಾಗಿದೆ ಎಂದರು ಅವರು ತಿಳಿಸಿದರು. ದಾನಿಯೊಬ್ಬರ ಕೊಡುಗೆಯೊಂದಿಗೆ ಶ್ರೀ ದೇವಳದ ಉತ್ತರಭಾಗದಲ್ಲಿ ‘ಸಪ್ತಧೇನು’ ಗೋಧಾಮದ ನಿರ್ಮಾಣ ಕಾರ್ಯ ಶೀಘ್ರದಲ್ಲೇ ನಡೆಯಲಿದೆ ಎಂದರು.

ಮೂರನೆ ಹಂತದ ಮಾಸ್ಟರ್ ಪ್ಲಾನ್ ಯೋಜನೆ ಅಲ್ಲದೆ ಭಕ್ತರ ಅನುಕೂಲಕ್ಕಾಗಿ ನಾವಂದುಕೊಂಡ ಇನ್ನೂ ಒಂದಷ್ಟು ಕೆಲಸ ಕಾರ್ಯಗಳನ್ನು ನಮ್ಮಿಂದ ಪೂರೈಸಲಾಗಲಿಲ್ಲ. ಆ ಬಗ್ಗೆ ಬೇಸರವೂ ಇದೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇವೆ ಬಗ್ಗೆ ವಿಸ್ತೃತ ಸ್ಥಳಾವಕಾಶ, ಊಟೋಪಚಾರದ ಬಗ್ಗೆ ಹೆಚ್ಚಿನ ಅವಕಾಶ ಇರುವ ಅನ್ನ ಛತ್ರ, ಭಕ್ತಾದಿಗಳಿಗೆ ಇನ್ನಷ್ಟು ವಸತಿ ವ್ಯವಸ್ಥೆ, ಒಳ ಚರಂಡಿ ವ್ಯವಸ್ಥೆಯ ಆಧುನೀಕರಣ, ತ್ಯಾಜ್ಯ ನಿರ್ವಹಣಾ ಘಟಕ, ವಿದ್ಯುತ್ ಉಳಿತಾಯಕ್ಕಾಗಿ ಸೌರ ವಿದ್ಯುತ್ ಘಟಕದ ಸ್ಥಾಪನೆ, ವಾಹನ ದಟ್ಟಣೆ ದಿನೇ ದಿನೇ ಹೆಚ್ಚುತ್ತಿರುವ ಸಂಧರ್ಭದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಕುಮಾರಧಾರದಿಂದ ರಥಬೀದಿ ತನಕ ಪ್ರತ್ಯೇಕ ಉರುಳು ಸೇವೆ ಪಥ, ಆನೆಯ ಆರೋಗ್ಯದ ದೃಷ್ಟಿಯಿಂದ ವೈದ್ಯಾಧಿಕಾರಿಗಳ ಸಲಹೆಯಂತೆ ಆನೆ ಶೆಡ್ ನವೀಕರಣ, ಕಾದಿರಿಸಲಾದ ಸ್ಥಳದಲ್ಲಿ ಬೃಹತ್ ಗೋಧಾಮ, ಕುಮಾರಧಾರ ಸ್ನಾನಕ್ಕೆ ನವೀಕರಣ, ನ್ಯಾಯಾಲಯದಲ್ಲಿ ಬಾಕಿಯಿರುವ ದಾವೆಗಳ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಿದರೂ ಕಾರ್ಯಾಂಗದ ಕಡೆಯಿಂದ ಸೂಕ್ತ ಸ್ಪಂದನೆ ದೊರೆಯದ ಕಾರಣ ಇತ್ಯರ್ಥ ಗೊಳಿಸಲಾಗದಿರುವುದು, ವಿದ್ಯಾಸಂಸ್ಥೆಗಳ ಆಡಳಿತವನ್ನು ಸುವ್ಯವಸ್ಥೆ ತರುವಲ್ಲಿ ಕಷ್ಟಸಾಧ್ಯವಾಗಿರುವುದು, ದೇವಾಲಯದ ಸ್ಥಿರ ಆಸ್ತಿಗಳನ್ನು ಸೂಕ್ತ ದಾಖಲೀಕರಣ ಮಾಡಲಾಗದಿರುವುದು ಬೇಸರ ಇದೆ ಎಂದರು. ನಮ್ಮ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಪಿ.ಜಿ.ಎಸ್.ಎನ್.ಪ್ರಸಾದ್, ಲೋಕೇಶ್ ಮುಂಡೋಕಜೆ, ಮನಮೋಹಕ ರೈ, ಶೋಭಾ ಗಿರಿಧರ್, ವನಜಾ ವಿ.ಭಟ್ ಉಪಸ್ಥಿತರಿದ್ದರು.