ಸುಳ್ಯ‌ ನಗರಕ್ಕೆ ಶುದ್ಧ ಕುಡಿಯುವ ನೀರಿನ ಕಾಮಗಾರಿ ಸಂದರ್ಭ

0

ಈಗಿರುವ ನೀರಿನ ಪೈಪ್ ಗೆ ಹಾನಿಯಾಗಿದ್ದರೆ ಅದನ್ನು ತಕ್ಷಣ ಸರಿಪಡಿಸುತ್ತೇವೆ – ರಸ್ತೆಗೆ ಹಾನಿಯಾಗಲಿದ್ದು ಅದನ್ನು ಸರಿಪಡಿಸಲು ಈ ಯೋಜನೆಯಲ್ಲಿ ತಿಳಿಸಿದೆ : ಎ.ಇ.ಇ.

ಅಮೃತ್ 2 ಯೋಜನೆಯಡಿಯಲ್ಲಿ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸರಕಾರದಿಂದ ಮಂಜೂರುಗೊಂಡು ಕಾಮಗಾರಿ ಪ್ರಗತಿಯಲ್ಲಿದೆ.

ಈಗಾಗಲೇ ಕುರುಂಜಿಗುಡ್ಡದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, 7.30MLD ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ಕಾಮಗಾರಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 100 ಕೀಲೋ ಮೀಟರ್ ನಷ್ಟು ಪೈಪು ಲೈನ್ ಕಾಮಗಾರಿಯು ಪ್ರಗತಿಯಲ್ಲಿದೆ.

ಈ ಯೋಜನೆಗೋಸ್ಕರ ನಗರೋತ್ಥಾನ ಯೋಜನೆಯಡಿಯಲ್ಲಿ ನೀರು ಎತ್ತುವ ಸ್ಥಾವರ ಕಲ್ಲಮಟ್ಲು ನಿರ್ಮಾಣಗೊಂಡಿದ್ದು ಪಂಪ್ ಹಾಗೂ ವಿದ್ಯುತ್ ಸಬರಾಜು ಕೆಲಸ ಸದರಿ ಯೋಜನೆಯಲ್ಲಿ ಒಳಗೊಂಡಿದೆ.

ಇದರ ಜೊತೆಯಲ್ಲಿ ಸುಳ್ಯ ನಗರದ ಕಲ್ಲಮಟ್ಲು, ಬೋರುಗುಡ್ಡೆ ಹಾಗೂ ಬೀರಮಂಗಲದಲ್ಲಿ 2.5ಲಕ್ಷ ಲೀಟರ್ ಸಾಮರ್ಥ್ಯದ ಮೂರು ಟ್ಯಾಂಕ್ ಹಾಗೂ ಜಯನಗರದಲ್ಲಿ 5ಲಕ್ಷ ಲೀಟರ್ ಸಾಮರ್ಥ್ಯದ ಒಂದು ಟ್ಯಾಂಕ್ ನಿರ್ಮಾಣವಾಗಬೇಕಾಗಿದೆ. ಇದರಲ್ಲಿ ಜಯನಗರದ ಟ್ಯಾಂಕ್ ನ ಮಾತ್ರ ಸ್ಥಳ ನಿಗದಿಯಾಗಿದ್ದು ಉಳಿದ ಟ್ಯಾಂಕುಗಳ ಸ್ಥಳದ ಹಸ್ತಾಂತರ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.

ಈ ಮಧ್ಯೆ ಪೈಪುಲೈನ್ ಕಾಮಗಾರಿ ಸಂದರ್ಭದಲ್ಲಿ ಪ್ರಸ್ತುತ ಪೈಪ್ ಗಳಿಗೆ ಹಾನಿಯಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು ಅಡಚಣೆಗಾಗಿ ಕ್ಷಮೆಯನ್ನು ಕೋರುತ್ತಿದ್ದೇವೆ. ಇಂತಹ ದೊಡ್ಡ ಮಟ್ಟದ ಶಾಶ್ವತ ಕುಡಿಯುವ ನೀರಿನ ಯೋಜನೆ ಅಳವಡಿಸುವ ಸಂದರ್ಭದಲ್ಲಿ ಅಡಚಣೆಗಳು ಬರುವುದು ಖಂಡಿತಾ ಸಹಜ. ಅದಾಗ್ಯೂ ಸಂಭಂದಪಟ್ಟ ಗುತ್ತಿಗೆದಾರರಲ್ಲಿ ತಕ್ಷಣ ಸರಿಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ಟ್ಯಾಂಕರ್ ನೀರು ತಲುಪಿಸಲು ಕೂಡಾ ಸೂಚನೆ ನೀಡಲಾಗಿದೆ.

ಪೈಪ್ ಅಳವಡಿಸುವ ಸಂದರ್ಭದಲ್ಲಿ ಸದರಿ ರಸ್ತೆಗಳಿಗೆ ಹಾನಿಯಾಗಲಿದ್ದು ಅದನ್ನು ಸರಿಪಡಿಸುವ ಕಾರ್ಯ ಕೂಡಾ ಈ ಯೋಜನೆಯಲ್ಲಿ ಸೇರಿಕೊಂಡಿದ್ದು ಅಗೆದ ಬಾಗದ ಕಾಂಕ್ರೀಟ್ ಅಥವಾ ಥಾರ್ ನ್ನು ಹಿಂದೆ ಇದ್ದಂತೆಯೇ ಸರಿಪಡಿಸಿ ಕೊಡಲಾಗುತ್ತದೆ.

ಆದುದರಿಂದ ಪ್ರತಿಯೊಬ್ಬರ ಸಹಕಾರವನ್ನು ಯಾಚಿಸುತ್ತಾ ಆದಷ್ಟು ಬೇಗನೇ ಯೋಜನೆ ಪೂರ್ಣಗೊಳಿಸುವಂತೆ ಸುಳ್ಯ ನಗರದ ಪ್ರತೀ ಮನೆಗೆ ಶುದ್ಧ ನೀರು ಪೂರೈಕೆ ಮಾಡಲು ಕೈ ಜೋಡಿಸಿ ಎಂದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು
ಮಂಗಳೂರು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ‌ ಅಭಿಯಂತರರಾದ ಅಜಯ್ ಕುಮಾರ್ ತಿಳಿಸಿದ್ದಾರೆ.