ವರ್ಷದ ಹನ್ನೆರಡು ತಿಂಗಳುಗಳ ಪೈಕಿ ಪರಮ ಶ್ರೇಷ್ಠವಾದ ತಿಂಗಳು ಪವಿತ್ರ ರಂಝಾನ್. ಈ ತಿಂಗಳ ಪ್ರತಿಯೊಂದು ಆರಾಧನಾ ಕರ್ಮಗಳಿಗೂ ದುಪ್ಪಟ್ಟು ಪ್ರತಿಫಲ.ಮನುಷ್ಯ ಶರೀರ,ಸಂಪತ್ತು ಸರ್ವಸ್ವವನ್ನೂ ಶುದ್ಧೀಕರಿಲು ಸುವರ್ಣಕಾಲ. ಮನುಷ್ಯ ಹೃದಯದಲ್ಲಿನ ಅಹಂಭಾವ, ಅಹಂಕಾರ, ದ್ವೇಷ, ಹಗೆತನ, ಅಸೂಯೆ,ದುಶ್ಚಿಂತೆ ಇತ್ಯಾದಿಗಳನ್ನು ಹೊರ ತೆಗೆದು ಬಿಸಾಕಿ ಶಾಂತಿ, ಸಹನೆ, ಸ್ನೇಹ, ಪ್ರೀತಿ,ಕರುಣೆ,ವಿಶ್ವಾಸ, ಭಕ್ತಿ,ಪರ ಸಹಾಯ, ಇತ್ಯಾದಿ ಸದ್ಗುಣಗಳಿಂದ ಆತ್ಮವನ್ನು ಶುದ್ಧೀಕರಿಸುವ ರಂಝಾನ್ ಪುಣ್ಯಗಳ ಕೊಯ್ಲುಕಾಲವಾಗಿದೆ.ಪರದೂಷಣೆ,ಪರನಿಂದನೆ,ಪರಿಹಾಸ,ಅಸತ್ಯ,ಅಸಭ್ಯ ಮಾತುಗಳಿಂದ ನಾಲಗೆಯನ್ನು ಹಿಡಿತದಲ್ಲಿಟ್ಟು, ಅಕ್ರಮ, ಅನೈತಿಕತೆ,ಅಶ್ಲೀಲತೆ,ಅಧಾರ್ಮಿಕತೆ ಗಳಿಂದ ಶರೀರವನ್ನು ರಕ್ಷಿಸಿ, ಪರೋಪಕಾರ,ಸತ್ಕರ್ಮ,ಉದಾರತೆ,ದಾನ ಧರ್ಮ ಗಳಿಂದ ಸತ್ಪ್ರಜೆ ಯಾಗಿ ಬಾಳಲು ಪ್ರೇರಣೆ ನೀಡುವ ತಿಂಗಳಾಗಿದೆ ರಂಝಾನ್.ತಿಂದು ತೇಗಿ ಐಷಾರಾಮಿಯಾಗಿ ಬದುಕುವವನಿಗೆ ತಿಳಿಯಲಾಗದ ಬಡವನ ಹಸಿವಿನ ರುಚಿಯನ್ನು ಉಪವಾಸದ ಮೂಲಕ ಮನದಟ್ಟಾಗಿಸುವುದು ರಂಝಾನ್ ಉಪವಾಸದ ವಿಶೇಷ ಗುಣಗಳಲ್ಲೊಂದು.ದಾನ ಧರ್ಮಾದಿ ಕರ್ಮಗಳಿಂದ ಧನ್ಯ ಗೊಳಿಸಲು ಮೀಸಲಿಟ್ಟ ತಿಂಗಳೇ ರಂಝಾನ್.ಕಡ್ಡಾಯ ಆರಾಧನಾ ಕರ್ಮಗಳೊಂದಿಗೆ ಐಚ್ಛಿಕ ಕರ್ಮಗಳನ್ನೂ ಜೊತೆಗೂಡಿಸಿ ಸಂಪನ್ನ ಗೊಳ್ಳಲಿದೆ ಈ ರಂಝಾನ್.ಸ್ವರ್ಗದ ಬಾಗಿಲು ತೆರದಿಟ್ಟು ಜನರನ್ನು ಒಳಿತಿನತ್ತ ಆಹ್ವಾನಿಸುವ ಪವಿತ್ರ ರಂಝಾನ್ ಅಲ್ಲಾಹನ ಸಂಪ್ರೀತಿ ಗಳಿಸಲು ಜಗದ್ರಕ್ಷಕನು ಕರುಣಿಸಿದ ರಾಜ ಮಾರ್ಗ.ಸಂಭವಿಸಿದ ಪಾಪಗಳನ್ನು ಮನ್ನಿಸಲು ಹಾಗೂ ಇಹಪರ ವಿಜಯಕ್ಕಾಗಿ ಹಗಲಿರುಳು ಬೇಡಿ ಪ್ರಾರ್ಥನೆ ಮೂಲಕ ರಂಝಾನನ್ನು ಸದುಪಯೋಗ ಗೊಳಿಸಲು ವಿಶ್ವಾಸಿಗಳು ಪ್ರಯತ್ನ ಪಡುವರು.ವಿಶ್ವಾಸಿ ಸಮೂಹವು ಪವಿತ್ರ ರಂಝಾನನ್ನು ಆದರದಿಂದ ಸ್ವಾಗತಿಸುವರು. ಪವಿತ್ರ ರಂಝಾನಿನ ಪುಣ್ಯ ದಿನಗಳ ಪ್ರಾರ್ಥನೆಯಲ್ಲಿ ದೇಶದ ನಾಡಿನ ಕ್ಷೇಮಾಭಿವೃದ್ಧಿಗಾಗಿ , ಒಳಿತಿಗಾಗಿ ಪ್ರಾರ್ಥಿಸೋಣ.ಸರ್ವರಿಗೂ ಒಳಿತಾಗಲಿ….
ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ