ಒಂದು ಜೀವಕ್ಕೆ ಉಸಿರು ಕೊಡುವ ಶಕ್ತಿಯನ್ನು ಹೆಣ್ಣು, ಹೆಣ್ಣನ್ನು ತಾತ್ಸಾರವಾಗಿ ಕಾಣಬಾರದು : ನ್ಯಾಯಾಧೀಶೆ ಅರ್ಪಿತಾ
ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ,ವಕೀಲರ ಸಂಘ ಸುಳ್ಯ ಇವರ ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆಯ ಕುರಿತು ಕಾನೂನು ಅರಿವು ಕಾರ್ಯಕ್ರಮ ಹಳೆಗೇಟು ಡಿಆರ್ ಗಾರ್ಮೆಂಟ್ಸ್ ಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ ಆರ್ ಗಾರ್ಮೆಂಟ್ಸ್ ಮಾಲಕರಾದ ರಾಮಚಂದ್ರ ವಹಿಸಿದ್ದರು. ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಇದರ ಸದಸ್ಯ ಕಾರ್ಯದರ್ಶಿ ಸಿವಿಲ್ ನ್ಯಾಯಾಧೀಶೆ ಕು. ಅರ್ಪಿತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,’ ವಿಶ್ರಾಂತಿ ಇಲ್ಲದೆ ದುಡಿಯುವ ಏಕೈಕ ವ್ಯಕ್ತಿ ಎಂದರೆ ಅದು ಒಂದು ಹೆಣ್ಣು ಜೀವವಾಗಿದೆ. ತಾಯಿಯ ರೂಪದಲ್ಲಿ, ಸಹೋದರಿಯ ರೂಪದಲ್ಲಿ, ಪತ್ನಿಯ ರೂಪದಲ್ಲಿ,ಬಿಡುವಿಲ್ಲದೆ ತಮ್ಮವರಿಗಾಗಿ ಹಗಲಿರುಳು ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಒಂದು ಹೆಣ್ಣನ್ನು ತಾತ್ಸಾರ ಮನೋಭಾವದಿಂದ ಯಾರೂ ಕೂಡ ಕಾಣಬಾರದು. ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ತಡೆಯಲು ಕಾನೂನು ಸೇವಾ ಸಮಿತಿಗಳು ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಒಂದು ಜೀವಕ್ಕೆ ಉಸಿರು ಕೊಡುವ ಶಕ್ತಿಯನ್ನು ಆ ಹೆಣ್ಣು ಹೊಂದಿರುತ್ತಾರೆ. ಆದ್ದರಿಂದ ಈ ಸಮಾಜದಲ್ಲಿ ಹೆಣ್ಣನ್ನು ಸರ್ವ ರೀತಿಯಿಂದಲೂ ಗೌರವಿಸಬೇಕು ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲರಾದ ರಾಮಚಂದ್ರ ಶ್ರೀಪಾದ ಹೆಗಡೆ ಮಹಿಳಾ ದಿನಾಚರಣೆಯ ಕುರಿತು ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ ಉಪಸ್ಥಿತರಿದ್ದು, ಕಾನೂನಿನಲ್ಲಿ ಮಹಿಳೆಯರ ರಕ್ಷಣೆಗಿರುವ ಕಾಯ್ದೆಗಳ ಬಗ್ಗೆ ವಿವರಿಸಿದರು. ಸುಳ್ಯ ಪ್ಯಾನಲ್ ವಕೀಲರಾದ ಕು. ಲೋಲಾಕ್ಷಿ, ಶ್ರೀಮತಿ ಪ್ರತಿಭಾ ಪಿ.ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಕೀಲರಾದ ಹರೀಶ್ ಬೂಡುಪನ್ನೆ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಸಿಬ್ಬಂದಿಗಳಾದ ಜಯಶ್ರೀ ಬೆಟ್ಟಂಪಾಡಿ ಸ್ವಾಗತಿಸಿ, ಅನಿತಾ ಸಿ ವಂದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರು ಸಿಬ್ಬಂದಿ ವರ್ಗದವರು, ವಕೀಲರುಗಳು ಉಪಸ್ಥಿತರಿದ್ದರು.