ವಿವೇಕಾನಂದ ವೃತ್ತದ ಬಳಿ ರಸ್ತೆ ಬದಿಯಲ್ಲಿ ತುಂಬಿರುವ ಮಣ್ಣು

0

ಸುಳ್ಯ ವಿವೇಕಾನಂದ ವೃತ್ತದಿಂದ ಕಾಂತಮಂಗಲ ಹೋಗುವ ರಸ್ತೆಯ ಬದಿಯಲ್ಲಿ ನೀರಿನ ಪೈಪ್ ದುರಸ್ತಿಗೆ ಅಗೆದು ಹಾಕಿರುವ ಮಣ್ಣು ರಸ್ತೆಯನ್ನು ಆವರಿಸಿದ್ದು ಇದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೈಪ್ ದುರಸ್ತಿಗೊಳಿಸಲು ತೋಡಿರುವ ಮಣ್ಣನ್ನು ರಸ್ತೆಯ ಬದಿಯಲ್ಲಿ ಹಾಕಿದ್ದು ಅದರ ಮೇಲೆ ದೊಡ್ಡ ವಾಹನಗಳು ಚಲಿಸಿ ಮಣ್ಣು ರಸ್ತೆಯಲ್ಲಿ ಆವರಿಸಿದೆ. ಇದೇ ಸ್ಥಳದಲ್ಲಿ ನಿನ್ನೆ ರಾತ್ರಿ ಓರ್ವ ದ್ವಿಚಕ್ರ ಸವಾರ ನಿಯಂತ್ರಣ ತಪ್ಪಿ ಬಿದ್ದಿದ್ದು ಈ ವೇಳೆ ಅದೇ ರಸ್ತೆಯಲ್ಲಿ ಬಂದ ಕೆ ಸೂರ್ಯನಾರಾಯಣ ಭಟ್ ಮುಳ್ಯ ಎಂಬುವವರು ಬೈಕಿನಿಂದ ಬಿದ್ದ ಸವಾರನನ್ನು ಎಬ್ಬಿಸಿ ನಂತರ ಪಕ್ಕದಲ್ಲಿದ್ದ ಗೆಲ್ಲುಗಳನ್ನು ಮುರಿದು ಗುಂಡಿಯ ಭಾಗಕ್ಕೆ ಇಟ್ಟು ಅಪಾಯದ ಸೂಚನೆಯನ್ನು ಹಾಕಿರುತ್ತಾರೆ ಎಂದು ತಿಳಿದುಬಂದಿದೆ.

ಕೆಲವು ಸಂದರ್ಭದಲ್ಲಿ ಪೈಪ್ ದುರಸ್ತಿಗೊಳಿಸಿದ ಬಳಿಕ ಮತ್ತೆ ಅದರಿಂದ ಲೀಕೇಜ್ ಸಂಭವಿಸುವ ಅನುಮಾನದಿಂದ ಎರಡು ಮೂರು ದಿನಗಳವರೆಗೆ ಗುಂಡಿಗಳನ್ನು ಮುಚ್ಚದೆ ಇಡುತ್ತಾರೆ. ಆದರೆ ಸ್ಥಳೀಯರ ಅಭಿಪ್ರಾಯದಂತೆ ಇಂತಹ ಸಂದರ್ಭದಲ್ಲಿ ಬ್ಯಾರಿಕೆಡ್ ಗಳನ್ನು ಇಟ್ಟು ಸೂಚನೆ ನೀಡಬೇಕು. ಅದಲ್ಲದೆ ಈ ರೀತಿ ಮಣ್ಣುಗಳನ್ನು ರಸ್ತೆಯಲ್ಲಿ ಬಿಟ್ಟು ಹೋಗುವುದರಿಂದ ದ್ವಿಚಕ್ರ ವಾಹನಗಳು ಜಾರಿ ಬೀಳುವ ಸಂಭವಗಳು ಉಂಟಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.