ಸುಳ್ಯ ಲಯನ್ಸ್ ಕ್ಲಬ್ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದರಿಯಾಗಿದೆ

0

ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೇಲ್ವಿನ್ ಡಿಸೋಜಾ ರವರಿಂದ ಶ್ಲಾಘನೆ

ಲಯನ್ಸ್ ಕ್ಲಬ್ ಸುಳ್ಯ ಹಲವು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಜನಸೇವೆಯನ್ನು ಮಾಡಿ ಇಡೀ ಜಿಲ್ಲೆ ಗುರುತಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಇದು ಲಯನ್ಸ್ ಸಂಸ್ಥೆಗೆ ಮಾದರಿಯಾಗಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೇಲ್ವಿನ್ ಡಿಸೋಜಾ ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಹಳೆಗೇಟು ಲ.ಜೋನ್ ವಿಲಿಯಂ ಲಸ್ರಾದೋ ರವರ ನಿವಾಸದಲ್ಲಿ ಮಾರ್ಚ್ 16 ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ‘ಸುಳ್ಯ ಲಯನ್ಸ್ ಕ್ಲಬ್ 50 ವರ್ಷವನ್ನು ಪೂರೈಸಿ 51ನೇ ವರ್ಷಕ್ಕೆ ಮುನ್ನಡೆಯುತ್ತಿದ್ದು ಈ 50 ವರ್ಷಗಳಲ್ಲಿ ಅನೇಕ ಸಮಾಜಮುಖಿ ಸೇವೆಗಳನ್ನು ಸುಳ್ಯದ ಜನತೆಗೆ ನೀಡಿದೆ.ಸುಳ್ಯದ ಯಾವುದೇ ಭಾಗಗಳಲ್ಲಿ ನೋಡಿದರು ಲಯನ್ಸ್ ಸಂಸ್ಥೆಯು ನೀಡಿದ ವಿವಿಧ ರೀತಿಯ ಕೊಡುಗೆಗಳನ್ನು ಕಾಣಲು ಸಿಗುತ್ತಿದೆ. ಇದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸುಳ್ಯ ಲಯನ್ಸ್ ಕ್ಲಬ್ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೂ ಜಿಲ್ಲೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಕಣ್ಕಲ್ ‘ಜಿಲ್ಲಾ ಗವರ್ನರ್ ಅವರ ಆಗಮನ ಮತ್ತು ಇಂದು ಸುಳ್ಯಕ್ಕೆ ಬಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ನಮಗೆ ತುಂಬಾ ಸಂತೋಷವನ್ನು ತಂದಿದೆ. ಎಲ್ಲರ ಸಹಕಾರದಿಂದ ಸುಳ್ಯ ಲಯನ್ಸ್ ಕ್ಲಬ್ ಇಷ್ಟೊಂದು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಳ್ಳಲು ಸಹಕಾರಿಯಾಗಿದೆ. ಅದರಲ್ಲಿಯೂ ಮುಖ್ಯವಾಗಿ ಕುಡಿಯಾಲ ಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ ಶಾಲೆಯ ಒಂದು ಎಕರೆ ಸ್ಥಳದಲ್ಲಿ 325 ಅಡಿಕೆ ಗಿಡ 20 ತೆಂಗಿನ ಗಿಡ, ಮಧ್ಯದಲ್ಲಿ ಕರಿಮೆಣಸು ಹಾಗೂ 25 ಹಣ್ಣಿನ ಗಿಡಗಳನ್ನು ನೆಟ್ಟು 4 ವರ್ಷ ಪೋಷಿಸಿ ಬಳಿಕ ಶಾಲಾ ಆಡಳಿತಕ್ಕೆ ಬಿಟ್ಟು ಕೊಡುವ ಮಹತ್ವದ ಯೋಜನೆ ಹಮ್ಮಿಕೊಂಡಿದ್ದು ಇದು ಜನ ಮೆಚ್ಚಿದ ಕಾರ್ಯಕ್ರಮವಾಗಿ ಮೂಡಿಬಂದಿದೆ. ಇತರ ಸಂಘ ಸಂಸ್ಥೆಗಳು ಸಹ ಬೇರೆ ಬೇರೆ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡಲು ಪ್ರೇರಣೆಯಾಗಿದೆ ವಿಶೇಷವಾಗಿ ಆರೋಗ್ಯ ತಪಾಷಣಾ ಶಿಬಿರ ಹಾಗೂ ಕಣ್ಣಿನ ಚಿಕಿತ್ಸೆ ಮತ್ತು ತಪಾಸಣೆ ಕ್ಯಾಂಪ್, ರಕ್ತದಾನ ಶಿಬಿರಗಳು ಸಾರ್ವಜನಿಕರಿಗೆ ತುಂಬಾ ಪ್ರಯೋಜನವನ್ನು ನೀಡುತ್ತಿದೆ. ಅರಂಬೂರು ಸರ್ಕಾರಿ ಶಾಲೆಯ ದ್ವಾರ ಮತ್ತು ಸುಳ್ಯ ಲಯನ್ಸ್ ಕ್ಲಬ್ ನ ಬೃಹತ್ ಫಲಕವನ್ನು ಅಳವಡಿಸುವ ಯೋಜನೆ ಯಶಸ್ವಿಯಾಗಲಿದೆ ಎಂದು ಅವರು ಹೇಳಿದರು. ಅಲ್ಲದೆ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿನಿಯ ವ್ಯಾಸಂಗಕ್ಕೆ ವಾರ್ಷಿಕ ಶುಲ್ಕ 1,4,000 ಮೊತ್ತದಂತೆ 4 ವರ್ಷ ಪಾವತಿಸುತ್ತಿರುವ ವೆಚ್ಚವನ್ನು ಲಯನ್ ಕರುಂಬಯ್ಯ ರೀಟಾ ದಂಪತಿಗಳು ವಹಿಸಿಕೊಂಡಿರುತ್ತಾರೆ. ಬೆಳ್ಳಾರೆ ಕೆಎ ಎಸ್ ಶಾಲೆಗೆ ಸುಮಾರು 1.40.000 ರೂಪಾಯಿಗಳ ಬೆಂಚು ಡೆಸ್ಕ್ಗಳನ್ನು ನಮ್ಮ ಸಂಘದ ಸದಸ್ಯರಾದ ಹರೀಶ್ ಉಭರಡ್ಕ ಮತ್ತು ರಾಜೀವಿ ಹರೀಶ್ ರೈ ಅವರು ಸಹಾಯದಿಂದ ನೀಡಿದ್ದಾರೆ. ಈ ರೀತಿಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸುಳ್ಯ ಲಯನ್ಸ್ ಕ್ಲಬ್ ಇಂದು ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಜಿಲ್ಲಾ ಪದಾಧಿಕಾರಿಗಳಾದ ಓಸ್ವಾಲ್ಡ್ ಡಿಸೋಜಾ, ಸುಧಾಕರ ಶೆಟ್ಟಿ, ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ದೊಡ್ಡಣ್ಣ ಬರಮೇಲು, ಕೋಶಾಧಿಕಾರಿ ಕಿರಣ್ ನೀರ್ಪಾಡಿ, ಪ್ರಾಂತೀಯ ಅಧ್ಯಕ್ಷೆ ಲ.ಶ್ರೀಮತಿ ರೇಣುಕಾ ಸದಾನಂದ ಜಾಕೆ,ಉಪಸ್ಥಿತರಿದ್ದರು.