ರೈತರ ಕೋವಿ ಡಿಪಾಸಿಟ್ ಆದೇಶಕ್ಕೆ ಅಸಮಾಧಾನ

0

ನಾಳೆ ಸುಳ್ಯದಲ್ಲಿ ರೈತರ ತುರ್ತುಸಭೆ

ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಲ್ಲಿ ಬೆಳೆರಕ್ಷಣೆ ಮತ್ತು ಆತ್ಮರಕ್ಷಣೆಗಾಗಿ ಪರವಾನಿಗೆ ಪಡೆದು ಕೋವಿ ಹೊಂದಿರುವವರೆಲ್ಲರೂ ತಮ್ಮ ಕೋವಿಗಳನ್ನು ಹತ್ತಿರದ ಪೋಲೀಸ್ ಠಾಣೆಗಳಲ್ಲಿ ಅಥವಾ ಮದ್ದುಗುಂಡು ಡೀಲರರ ಬಳಿ ಠೇವಣಿ ಇರಿಸಬೇಕೆಂದು

ಜಿಲ್ಲಾಧಿಕಾರಿಯವರು ಆದೇಶಿಸಿರುವ ಹಿನ್ನೆಲೆಯಲ್ಲಿ ಪೋಲೀಸ್ ಠಾಣೆಯವರು ರೈತರಿಗೆ ಫೋನ್ ಮಾಡಿ ಕೋವಿ ಠೇವಣಿ ಇರಿಸುವಂತೆ ಹೇಳಲಾರಂಭಿಸಿದ್ದು, ಇದು ರೈತರಲ್ಲಿ ತೀವ್ರ ಅಸಮಾಧಾನ ಹುಟ್ಟುಹಾಕಿದೆ.


ಪ್ರತೀ ಬಾರಿ ಚುನಾವಣೆ ಘೋಷಣೆಯಾದಾಗಲೂ ಕೋವಿಗಳನ್ನು ಕೊಂಡೊಯ್ದು ಠೇವಣಿ ಇರಿಸಲಾಗುತ್ತಿದ್ದು, ಈ ರೀತಿ ಮಾಡುವುದರಿಂದ ಆ ಅವಧಿಯಲ್ಲಿ ರೈತರು ಕಾಡುಪ್ರಾಣಿಗಳಿಂದ ಬೆಳೆರಕ್ಷಣೆ ಮಾಡಲಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಕಾನೂನಿನಂತೆ ಕ್ರಿಮಿನಲ್ ಹಿನ್ನೆಲೆಯ ಮತ್ತು ಅಪರಾಧ ಮನೋಭಾವದ ವ್ಯಕ್ತಿಗಳಿಂದ ಮಾತ್ರ ಕೋವಿ ಹಿಂತಿರುಗಿ ಪಡೆಯಬೇಕಾಗಿದ್ದು, ಚುನಾವಣೆಯ ಸಂದರ್ಭ ಈ ನಿಯಮವನ್ನು ಸಾರ್ವತ್ರಿಕಗೊಳಿಸುವುದು ಸರಿಯಲ್ಲವೆಂದು ಹೇಳುತ್ತಿರುವ ರೈತರು, ಈ ಬಗ್ಗೆ ಚರ್ಚಿಸಲು ನಾಳೆ ದಿನಾಂಕ 21.3.2024 ರಂದು ಪೂರ್ವಾಹ್ನ 10 ಗಂಟೆಗೆ ಸುಳ್ಯದ ಶಿವಕೃಪಾ ಕಲಾಮಂದಿರದ ವಠಾರದಲ್ಲಿ ಕೋವಿ ಪರವಾನಗಿದಾರ ರೈತರ ತುರ್ತುಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ಸಮಸ್ಯೆಯ ಬಗ್ಗೆ ಚರ್ಚಿಸಿ ಮುಂದಿನ ನಡೆಯನ್ನು ನಿರ್ಧರಿಸಲಾಗುವುದೆಂದು ತಿಳಿದುಬಂದಿದೆ.