ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಜನಾ ಮಂಗಳೋತ್ಸವ, ಅರ್ಧ ಏಕಹಾ ಭಜನೆ

0

ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಫೆ. 2ರಂದು ಆರಂಭವಾದ 48 ದಿವಸಗಳ ನಿತ್ಯ ಸಂಧ್ಯಾ ಭಜನಾ ಸಂಕೀರ್ತನೆಯ ಮಂಗಳೋತ್ಸವ ಮತ್ತು
ಅರ್ಧ ಏಕಹಾ ಭಜನೆ ಮಾ. 20ರಂದು ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು.


ಬೆಳಿಗ್ಗೆ 6.00 ಗಂಟೆಗೆ ದೀಪ ಪ್ರಜ್ವಲನೆ ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಸಂಜೆ 6.00 ಗಂಟೆಗೆ ಭಜನಾ ಮಂಗಳೋತ್ಸವ ನಡೆಯಿತು. ಶ್ರೀ ಶ್ರೀ ಮಾಣಿಲ ಸ್ವಾಮೀಜಿ ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡುತ್ತಾ ದೇವಸ್ಥಾನದ ಯಾವುದೇ ಕಾರ್ಯವನ್ನು ಭಕ್ತಿಯಿಂದ ಮಾಡಿ. ಭಾವನಾತ್ಮಕವಾಗಿ ಮಾಡಿ. ಆಗ ಇಲ್ಲಿ ವಿಶೇಷ ಶಕ್ತಿ ಬೆಳೆಯುತ್ತದೆ. ನಿಮ್ಮೊಂದಿಗೆ ಕೊನೆಯ ತನಕ ನಾನಿದ್ದೇನೆ. ಈ ಭಾಗದಲ್ಲಿ ಮಕ್ಕಳು ಅತ್ಯುತ್ತಮ ರೀತಿಯಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟಿರುವುದು ಮಕ್ಕಳಿಗೆ ಹೊಸ ಚೈತನ್ಯವನ್ನು ನೀಡಿದೆ. ಶ್ರೀ ದೇವಿ ರಾಜರಾಜೇಶ್ವರಿ ಗರ್ಭಗುಡಿಯಲ್ಲಿ ರಾರಾಜಿಸಬೇಕಾದರೆ ನಿಮ್ಮೆಲ್ಲರ ನಿರಂತರ ಶ್ರಮ, ಭಕ್ತಿ ಬೇಕು ಎಂದರು. ರಾತ್ರಿ ಶ್ರೀ ದೇವಿಯ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡರು.