ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿದ್ದು ಈ ಪ್ರಯುಕ್ತ ಊರ ಜನರು ದಿನಂಪ್ರತಿ ಶ್ರಮಸೇವೆಯಲ್ಲಿ ತೊಡಗಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ.
ಊರ ಸುತ್ತಮುತ್ತಲಿನ ಭಾಗದ ಜನರನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಬೈಲುವಾರು ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿಗಳ ಮುಖಾಂತರ ಅಗತ್ಯ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ. ದೇವಸ್ಥಾನದ ಹೊರಭಾಗದ ಪ್ರಾಂಗಣದ ಮೇಲ್ಛಾವಣಿಗೆ ಹಾಸಲು ತೆಂಗಿನ ಮರದ ಮಡಲನ್ನು ಹೆಣೆದು ತಟ್ಟಿ ತಯಾರಿಸುವ ಜವಾಬ್ದಾರಿಯನ್ನೂ ಊರ ಜನರೇ ವಹಿಸಿದ್ದಾರೆ. ಉಳಿದಂತೆ ದೇಗುಲದ ಜೀರ್ಣೋದ್ಧಾರ ಕಾರ್ಯ, ಸ್ವಚ್ಛತೆ, ಪಾಕಶಾಲೆಯ ನಿರ್ಮಾಣ, ಚಪ್ಪರ ನಿರ್ಮಾಣ ಹಾಗೂ ಇನ್ನಿತರ ಸಿದ್ಧತಾ ಕಾರ್ಯಗಳಲ್ಲೂ ಊರ ಜನರು ಮುತುವರ್ಜಿಯಿಂದ ಭಾಗವಹಿಸುತ್ತಿದ್ದಾರೆ.
ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಈಗಾಗಲೇ ಬಿಡುಗಡೆಯಾಗಿದ್ದು ಆರಂಭದಲ್ಲಿ ಊರ ಸನಿಹದ ಗ್ರಾಮಗಳಿಗೆ ಆಮಂತ್ರಣ ಪತ್ರಿಕೆಯ ವಿತರಣಾ ಕಾರ್ಯವೂ ಭರದಿಂದ ಸಾಗುತ್ತಲಿದೆ. ನಿರ್ಧರಿತ ದಿನದಂದು ದೇವಸ್ಥಾನದಲ್ಲಿ ಸೇರಿಕೊಂಡು ಬಳಿಕ ವಿವಿಧ ಗುಂಪುಗಳಾಗಿ ವಿಂಗಡಿಸಿ ಆಮಂತ್ರಣ ಪತ್ರಿಕೆ ವಿತರಣೆಗೆ ಮನೆಮನೆಗೆ ಹೋಗಲಾಗುತ್ತಿದೆ. ಈಗಾಗಲೇ ಪೇರಾಲು ಭಾಗದತ್ತ ಆಮಂತ್ರಣ ಪತ್ರಿಕೆ ವಿತರಣೆಯಾಗಿದ್ದು ಉಳಿದ ಭಾಗಗಳಿಗೆ ಸದ್ಯದಲ್ಲೇ ಬಟವಾಡೆ ಆಗಲಿದೆ.
ಇದಲ್ಲದೆ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದಂತೆ ಪ್ರಚಾರ, ಸ್ಮರಣ ಸಂಚಿಕೆ, ಹೊರೆಕಾಣಿಕೆ, ಅಲಂಕಾರ, ಉಗ್ರಾಣ, ವೇದಿಕೆ ಜೋಡಣೆ, ಸಾಂಸ್ಕೃತಿಕ ಕಾರ್ಯಕ್ರಮಗಳತ್ತಲೂ ಸಂಬಂಧಿತ ಸಮಿತಿಗಳ ಸದಸ್ಯರು ಮುಂದಾಲೋಚಣೆಯಿಂದ ಸಿದ್ಧತೆ ನಡೆಸುತ್ತಿದ್ದಾರೆ. ಕೋಟಿ ಲೇಖನ ಯಜ್ಞದಲ್ಲಿ ಪಾಲು ಪಡೆಯಲು ಊರ ಪ್ರತಿಯೊಂದು ಮನೆಯಲ್ಲೂ ದೇವರ ನಾಮಸ್ಮರಣೆಯ ಉದ್ಘೋಷಗಳು ಮೊಳಗುತ್ತಿದೆಯಲ್ಲದೆ ಅದಕ್ಕೆಂದೇ ವಿತರಿಸಲಾದ ಪುಸ್ತಕದಲ್ಲಿ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ವಿಷ್ಣುವಿನ ಮೂಲ ಮಂತ್ರವನ್ನು ದಾಖಲಿಸುವ ಕಾರ್ಯವೂ ನಡೆಯುತ್ತಿದೆ.