ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾಂ ಇವರು ಚಿಕ್ಕಬಳ್ಳಾಪುರದ ಎಸ್.ಜೆ.ಸಿ.ತಾಂತ್ರಿಕ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ 23 ನೇ ವಿಟಿಯು ಯುವಜನೋತ್ಸವದಲ್ಲಿ ರಂಗಭೂಮಿ ವಿಭಾಗದ ಸ್ಪರ್ಧೆಯಲ್ಲಿ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಮೂಡುಬಿದ್ರೆ ಇಲ್ಲಿನ ವಿದ್ಯಾರ್ಥಿಗಳು ಅಭಿನಯಿಸಿದ, ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ ಬರ್ಬರೀಕ ನಾಟಕ ಪ್ರಥಮ ಪ್ರಶಸ್ತಿಯನ್ನು ಪಡೆದಿರುತ್ತದೆ.
ಶಶಿರಾಜ್ ರಾವ್ ಕಾವೂರು ರಚಿಸಿದ ಈ ನಾಟಕ ಜೀವನ್ ರಾಂ ನಿರ್ದೇನದಲ್ಲಿ ಈಗಾಗಲೇ ರಾಜ್ಯ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಸ್ಪರ್ಧಿಸಿ ಮೂರು ಬಾರಿ ಪ್ರಥಮ ಪ್ರಶಸ್ತಿ ಪಡೆದು ಅತ್ಯುತ್ತಮ ಏಕಾಂಕ ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದೀಗ ಈ ಯುವಜನೋತ್ಸವದಲ್ಲಿ ಭಾಗವಹಿಸಿದ 20 ನಾಟಕಗಳಲ್ಲಿ ಬರ್ಬರೀಕ ನಾಟಕವು ಪ್ರಥಮ ಸ್ಥಾನ ಪಡೆದು ನಿರ್ಣಾಯಕರು ಸೇರಿದಂತೆ ಪ್ರೇಕ್ಷಕರ ಬಹುಮೆಚ್ಚುಗೆಗೆ ಪಾತ್ರವಾಗಿದೆ. ಸಂಗೀತದಲ್ಲಿ ಜೀವನ್ ರಾಂ ಸುಳ್ಯರ ಜೊತೆ ವಿದುಷಿ ಸುಮನಾ ಪ್ರಸಾದ್, ಸತ್ಯಜಿತ್ ರಾವ್ ಹಾಗೂ ಬೆಳಕು ನಿರ್ವಹಣೆಯಲ್ಲಿ ಶಿಶಿರ ಕೂರಾಡಿ ಸಹಕರಿಸಿದ್ದರು. ಇಡೀ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವರವರು ಅಭಿನಂದಿಸಿದ್ದಾರೆ.