ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಸುಳ್ಯ ತಹಶೀಲ್ದಾರ್ ಮನವಿ

0

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಸುಳ್ಯ ತಹಶೀಲ್ದಾರ್ ಮಂಜುನಾಥ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಮಾಜದಲ್ಲಿ ಶಾಂತಿ ಭಂಗ,ಗುಂಪು ಘರ್ಷಣೆ, ಸಮಾಜದಲ್ಲಿ ದುರ್ವರ್ತನೆ ಮುಂತಾದ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿ ಭಾರತೀಯ ದಂಡ ಸಹಿತೆ ಕಲಂ 107, 109, 110 ಖಾಯ್ದೆಯಡಿ ತಾಲೂಕು ದಂಡಾಧಿಕಾರಿಯವರ ಸಮಕ್ಷಮಕ್ಕೆ ಬರುತ್ತದೆ.

ಈಗಾಗಲೇ ನಮ್ಮ ಇಲಾಖೆಯಲ್ಲಿ ಕಲಂ 107 ರಲ್ಲಿ 80 ಪ್ರಕರಣಗಳು ಇದ್ದು ಈಗಾಗಲೇ 70 ಪ್ರಕರಣಗಳು ಬಾಂಡ್ ಬರೆಸಿಕೊಂಡು ಹೋಗಿರುತ್ತಾರೆ. ಉಳಿದ 10 ಪ್ರಕರಣಗಳು ತನಿಖೆಯಲ್ಲಿ ಮುಂದುವರಿಯುತ್ತಿದೆ. ಕಲಂ109, 110 ರಲ್ಲಿ 27 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 22 ಪ್ರಕರಣಗಳು ಬಾಂಡ್ ಬರೆಸಿಕೊಂಡಿವೆ. ಐದು ಪ್ರಕರಣಗಳು ತನಿಖೆಯಲ್ಲಿ ಇದೆ.

ಈ ಪ್ರಕರಣಗಳಿಗೆ ದಂಡವನ್ನು ವಿಧಿಸುವ ಅಧಿಕಾರ ತಾಲೂಕು ದಂಡಾಧಿಕಾರಿಗಳಿಗೆ ಇದ್ದು ಚುನಾವಣೆಗಳಂತ ಸಂದರ್ಭದಲ್ಲಿ ಆರೋಪಿಗಳನ್ನು ತಾಲೂಕು ಕಚೇರಿಗೆ ಕರೆಸಿ ಅಲ್ಲಿ ವಿಧಿಸುವ ಬಾಂಡ್ ಪೇಪರ್ ಗಳಿಗೆ ಸಹಿ ಹಾಕಿ ಮುಂದಿನ ದಿನಗಳಲ್ಲಿ ಯಾವುದೇ ಸಮಾಜಘಾತುಕ ಚಟುವಟಿಕೆಗಳಿಗೆ ಮುಂದಾಗುವುದಿಲ್ಲವೆಂಬ ಮುಚ್ಚುಳಿಕೆಯನ್ನು ಬರೆಸಿ ಕಳುಹಿಸಲಾಗುವುದು.ಬಳಿಕ ನಿಬಂಧನೆಗಳನ್ನು ಪಾಲಿಸದೆ ಇದ್ದಲ್ಲಿ ಅಂತಹ ವ್ಯಕ್ತಿಗಳ ಮೇಲೆ ಪೊಲೀಸ್ ಠಾಣೆಗಳಲ್ಲಿ ಬೇರೆ ಯಾವುದೇ ಪ್ರಕರಣಗಳು ದಾಖಲಾದರೆ ಕಡ್ಡಾಯವಾಗಿ ಅವರು ಸಹಿ ಹಾಕಿರುವಂತಹ ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ದಂಡವನ್ನು ಅವರಿಂದ ಪಡೆಯಲಾಗುವುದು.ತಪ್ಪಿದ್ದಲ್ಲಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುವ ಕಾರ್ಯಗಳು ಕೂಡ ನಡೆಯುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಚುನಾವಣೆ ಅಥವಾ ಚುನಾವಣೇತ್ತರ ಸಂದರ್ಭಗಳಲ್ಲಿಯೂ ಕಾನೂನು ಕಾಯ್ದೆಗಳನ್ನು ಅನುಸರಿಸಿ ಅದಕ್ಕೆ ತಲೆಬಾಗಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವಿಸಿ ಶಾಂತಿ ಮತ್ತು ಸದೃಢ ಸಮಾಜ ನಿರ್ಮಿಸಲು ಮುಂದಾಗಬೇಕೆಂದು ಅವರು ಕರೆ ನೀಡಿದರು