ಕಾಂಗ್ರೆಸ್ ನಾಯಕರ ಮೊರೆ ಹೋದ ಕಾರ್ಮಿಕರು : ಮಾತುಕತೆ – ಕೆಲಸಕ್ಕೆ ಹಾಜರಾಗಲು ಸೂಚನೆ
ಸುಮಾರು 12 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆ ಎಫ್ ಡಿ ಸಿಯಲ್ಲಿ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ 16 ಮಂದಿ ನೌಕರರನ್ನು ನಿಗಮದ ಅಧಿಕಾರಿಗಳು ಕೆಲಸಕ್ಕೆ ಬಾರದಂತೆ ಮೌಖಿಕವಾಗಿ ತಿಳಿಸದರೆಂದೂ, ಈ ಕುರಿತು ತಮಿಳು ಕಾರ್ಮಿಕ ಮುಖಂಡರು ಮತ್ತು ಕಾರ್ಮಿಕರ ನಿಯೋಗ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್ ಮತ್ತು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ ಯವರನ್ನು ಭೇಟಿಯಾಗಿ ಗಮನಕ್ಕೆ ತಂದ ಬಳಿಕ ಅವರು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮಾತನಾಡಿ, ಆ ಕಾರ್ಮಿಕರನ್ನು ಕೆಲಸಕ್ಕೆ ಬರುವಂತೆ ಅಧಿಕಾರಿಗಳು ಸೂಚಿಸಿದರೆಂದು ತಿಳಿದುಬಂದಿದೆ.
ಕೆಎಫ್ ಡಿಸಿಯಲ್ಲಿ ಹೊರಗುತ್ತಿಗೆ ಯಲ್ಲಿ ದುಡಿಯುವ 16 ಮಂದಿ ನೌಕರರ ಕೆಲಸ ರಿನೀವಲ್ ಆಗಿರಲಿಲ್ಲ. ಎಪ್ರಿಲ್ 1 ರಿಂದ ಕೆಲಸಕ್ಕೆ ಬಾರದಂತೆ ಸೂಚಿಸಿದರೆಂದೂ ಇದರಿಂದ ಕೆಲಸಗಾರರು ಆತಂಕಗೊಂಡರಲ್ಲದೆ, ಕಾರ್ಮಿಕ ಮುಖಂಡರ ಮೂಲಕ ಕಾಂಗ್ರೆಸ್ ನಾಯಕರ ಗಮನಕ್ಕೆ ತಂದರು.
ಕಾಂಗ್ರೆಸ್ ನಾಯಕರು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವ ಬಿ ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರವರ ಗಮನಕ್ಕೆ ತಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿ ನೀಡಿರುವ ಆದೇಶಕ್ಕೆ ತಾತ್ಕಾಲಿಕ ತಡೆ ತಂದು ಕಾರ್ಮಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸಿದರೆಂದು ತಿಳಿದುಬಂದಿದೆ.
ನಿಯೋಗದಲ್ಲಿ ಕಾರ್ಮಿಕ ಮುಖಂಡರಾದ ಚಂದ್ರಲಿಂಗಮ್, ಶಿವಕುಮಾರ್ ಕೌಡಿಚಾರ್, ರಾಮಸ್ವಾಮಿ (ಆನಂದ), ಕಣ್ಣ ದಾಸ್ ಮೊದಲಾದವರು ಇದ್ದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ ಎಸ್ ಗಂಗಾಧರ್, ಪ್ರಮುಖರಾದ ಸುರೇಶ್ ಎಂ ಹೆಚ್, ಗೋಕುಲ್ ದಾಸ್, ಭವಾನಿಶಂಕರ್ ಕಲ್ಮಡ್ಕ, ನಂದರಾಜ್ ಸಂಕೇಶ್, ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.
“ಹೊರಗುತ್ತಿಗೆ ನೌಕರರಿಗೆ ಏಕಾಏಕಿ ಮೌಖಿಕ ಆದೇಶ ನೀಡಿದ್ದರಿಂದ ಕೆಲಸಗಾರರು ಆತಂಕಗೊಂಡಿದ್ದರು. ಬಳಿಕ ನಮ್ಮ ನಾಯಕರ ಗಮನಕ್ಕೆ ತಂದು ಅವರು ಉಸ್ತುವಾರಿ ಸಚಿವರ ಗಮನ ಸೆಳೆದು ನಿರ್ದೇಶಕರ ಮೂಲಕ ಕೆಲಸ ಸಿಗುವಂತೆ ಮಾಡಿದ್ದಾರೆ. ಇಂದು ಆ ಕೆಲಸಗಾರರು ಕೆಲಸಕ್ಕೆ ಹಾಜರಾಗಿದ್ದಾರೆ” ಎಂದು ಕಾರ್ಮಿಕ ಮುಖಂಡ ಚಂದ್ರಲಿಂಗಂ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ.