ಉದ್ಯೋಗ ಸೃಷ್ಠಿಯಾಗಿಲ್ಲ ; ಖಾಸಗೀಕರಣ ಸರಿಯಲ್ಲ
ಅಮರ ಸುಳ್ಯ ನಾಗರಿಕ ವೇದಿಕೆಯಿಂದ ಪತ್ರಿಕಾಗೋಷ್ಠಿ
ಸಂಪಾಜೆ, ಮರ್ಕಂಜ, ಪೆರಾಜೆ, ಮಡಪ್ಪಾಡಿ, ಅರಂತೋಡು, ತೊಡಿಕಾನ ಹೀಗೆ ತಾಲೂಕಿನ ಹಲವು ಭಾಗದಲ್ಲಿ ಅಡಿಕೆ ಎಲೆ ಹಳದಿ ರೋಗ ಹಾಗೂ ಎಲೆಚುಕ್ಕೆ ರೋಗ ಇದೆ. ಅದರ ನಿವಾರಣೆಗೆ ವೈಜ್ಞಾನಿಕ ಸಂಶೋಧನೆಗಳನ್ನು ಮಾಡುವಲ್ಲಿ ಆಳುವ ಪಕ್ಷ ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ ಎಂದು ಅಮರ ಸುಳ್ಯ ನಾಗರಿಕ ವೇದಿಕೆ ಹೇಳಿದೆ.
ಎ.೪ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಮರ ಸುಳ್ಯ ನಾಗರಿಕ ವೇದಿಕೆಯ ಪ್ರಮುಖರಾದ ಗೋಪಾಲ ಪೆರಾಜೆಯವರು ಮಾತನಾಡಿ, “ಈ ಭಾಗದ ಪ್ರಮುಖ ಬೆಳೆ ಅಡಿಕೆ. ಅಡಿಕೆಗೆ ಎಲೆ ಹಳದಿ ರೋಗ ಹಲವು ವರ್ಷಗಳಿಂದ ಇದೆ. ಇಲ್ಲಿಯ ಕೃಷಿಕರು ಇದರ ನಿವಾರಣೆಗೆ ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಆಳುವ ಪಕ್ಷ ಇದನ್ನು ಗಂಭಿರವಾಗಿ ತೆಗೆದುಕೊಳ್ಳದಿರುವುದು ಬೇಸರ ಇದೆ. ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡಿರಬಹದುದು. ಅಂದ ಮಾತ್ರಕ್ಕೆ ಅದು ಅಡಿಕೆಗೆ ಸಮವಲ್ಲ. ಸಂಶೋಧನೆ ಮಾಡಿದರೂ ನಿರೀಕ್ಷಿತ ಫಲ ಕೊಟ್ಟಿಲ್ಲ. ಆದ್ದರಿಂದ ಅಡಿಕೆ ಹಳದಿ ರೋಗ ಇಲ್ಲದೇ ಆಗುವಂತ ಔಷಧಿ ಬರಬೇಕು” ಎಂದವರು ಒತ್ತಾಯಿಸಿದರು.
ಉದ್ಯೋಗ ಸೃಷ್ಠಿ ಇಲ್ಲ : ಇತ್ತೀಚಿನ ವರದಿ ಪ್ರಕಾರ ನಮ್ಮ ದೇಶದ ಉದ್ಯೋಗದ ಸೂಚ್ಯಂಕದ ಆಧಾರದಲ್ಲಿ ಕಳೆದ ೪೫ ವರ್ಷಗಳಲ್ಲೇ ಇಲ್ಲದ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ವಿದ್ಯೆ ಪಡೆದವರಿಗೆ ಅದಕ್ಕೆ ಪೂರಕವಾದ ಉದ್ಯೋಗ ಸಿಗದಂತ ಸ್ಥಿತಿ ಇದೆ. ನಮ್ಮ ಪ್ರಧಾನಿಯವರು ೨೦೧೪ರಲ್ಲಿ ವರ್ಷಕ್ಕೆ ಎರಡೂವರೆ ಕೋಟಿ ಉದ್ಯೋಗವನ್ನು ಕೊಡುತ್ತೇವೆ ಅಂದಿದ್ದರು. ಅವರ ಆ ಮಾತಿಗನುಗುಣವಾಗಿ ಕಳೆದ ೧೦ ವರ್ಷದಲ್ಲಿ ೨೦ ಕೋಟಿ ಉದ್ಯೋಗ ಸೃಷ್ಠಿಯಾಗಬೇಕಿತ್ತು. ಕೇಂದ್ರ ಮತ್ತು ಅರೆಕೇಂದ್ರ ಸರಕಾರಿ ಸೆಕ್ಟರ್‌ಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದು ಇವುಗಳನ್ನು ಭರ್ತಿ ಮಾಡಲು ಎಲ್ಲಾ ಪಕ್ಷದ ಪ್ರತಿನಿಧಿಗಳು ಪ್ರಯತ್ನಿಸಬೇಕು. ಸರಕಾರಿ ಸಂಸ್ಥೆಗಳನ್ನು ಖಾಸಗಿಯವರುಗೆ ಮಾರಾಟ ಮಾಡುತಿದ್ದು ಇದರಲ್ಲಿ ಉದ್ಯೋಗ ಸೃಷ್ಠಿಸಲು ಸಾಧ್ಯವಿಲ್ಲ. ಆದ್ದರಿಂದ ಸಾರ್ವಜನಿಕ ವಲಯಗಳೇ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೋಮು ಸಂಘರ್ಷಗಳು ನಡೆಯುತಿದೆ. ಇದು ಬದಲಾಗಬೇಕು. ಎಲ್ಲರೂ ಒಂದು ಎಂಬಂತೆ ಸೌಹಾರ್ದತೆ ನಿರ್ಮಾಣ ಆಗಬೇಕು ಆ ನಿಟ್ಟಿನಲ್ಲಿ ಮತದಾರರು ಜಾಗೃತಗೊಳ್ಳಬೇಕು ಎಂದು ಹೇಳಿದರು.
ಅಮರ ಸುಳ್ಯ ನಾಗರಿಕ ವೇದಿಕೆ ಜನಪರವಾದ ಕಾರ್ಯ ನಡೆಸಲು ಸಮಾನ ಮನಸ್ಕರು ಸೇರಿಕೊಂಡು ಮಾಡಿಕೊಂಡ ವೇದಿಕೆ. ಮುಂದಿನ ದಿನದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ವೇದಿಕೆ ಮಾಡಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದಿವಾಕರ ಪೈ ಮಜಿಗುಂಡಿ, ಭಾರತಿ ಚೆಂಬು, ಪ್ರಮೀಳಾ ಪೆಲ್ತಡ್ಕ, ಭರತ್ ಕುಕ್ಕುಜಡ್ಕ, ಕರುಣಾಕರ ಪಲ್ಲತಡ್ಕ, ಕೇಶವ ಮೊರಂಗಲ್ಲು, ಲೋಲಜಾಕ್ಷ ಭೂತಕಲ್ಲು, ಸುಳ್ಯಕೋಡಿ ಮಾಧವ ಗೌಡ,, ಶಿವರಾಮ ನಾರ್ಕೋಡು ಕರ್ಲಪ್ಪಾಡಿ ಇದ್ದರು.