ಭ್ರಷ್ಟಾಚಾರ ಇಲ್ಲದೇ, ಪ್ರಾಮಾಣಿಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ : ತೀರ್ಥರಾಮ ಹೆಚ್.ಬಿ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸುಳ್ಯ ಶಾಖೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ, ಸುಳ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನಿವೃತ್ತ ಪ್ರಥಮ ದರ್ಜೆ ಸಹಾಯಕ ತೀರ್ಥರಾಮ ಹೊಸೊಳಿಕೆ ಯವರಿಗೆ ತೀರ್ಥರಾಮ ಹೆಚ್.ಬಿ.ಅಭಿನಂದನಾ ಸಮಿತಿ ವತಿಯಿಂದ ಅಭಿನಂದನಾ ಸಮಾರಂಭ ಸುಳ್ಯದ ರಥಬೀದಿಯಲ್ಲಿರುವ ರೋಟರಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದಲ್ಲಿ ತೀರ್ಥರಾಮ ಹೊಸೊಳಿಕೆಯವರನ್ನು ಪತ್ನಿ ಮನೋರಮ, ಪುತ್ರಿ ಅನುಶ್ರೀ ಸಹಿತ ಸನ್ಮಾನಿಸಲಾಯಿತು. ಶ್ರೀಕೃಷ್ಣ ದೇವರ ಮೂರ್ತಿಯನ್ನು ನೆನಪಿನ ಕಾಣಿಕೆಯಾಗಿ ಅಭಿನಂದನಾ ಸಮಿತಿ ವತಿಯಿಂದ ನೀಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ. ಅಧ್ಯಕ್ಷತೆ ವಹಿಸಿ, ತೀರ್ಥರಾಮ ಕೆಲಸ ನಿರ್ವಹಿಸಿದ ಕುರಿತು ವಿವರ ನೀಡಿದರು.
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯರು ಅಭಿನಂದನಾ ಭಾಷಣ ಮಾಡಿದರು. “ಸಮಯಪ್ರಜ್ಞೆ ಮತ್ತು ಬದ್ಧತೆಯಿಂದ ಕೆಲಸ ಮಾಡಿದವರು ತೀರ್ಥರಾಮರು. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕರ್ಮಯೋಗಿಯೆನಿಸಿದವರು ಎಂದು ಹೇಳಿದರು.
ಉಪತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಕೆರೆಮೂಲೆ, ತಾಲೂಕು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಚಿನ್ನಪ್ಪ ಗೌಡ ಪತ್ತುಕುಂಜ, ಸರಕಾರಿ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ದೇವರಾಜ್ ಕೆ.ಎಸ್. ಶುಭಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತೀರ್ಥರಾಮರು, ನನ್ನ 36 ವರ್ಷದಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ ಎಂಬ ತೃಪ್ತಿ ಇದೆ. ಹಣಕಾಸಿನ ವಿಭಾಗ ಆರಂಭದಿಂದಲೂ ನನ್ನಲ್ಲೇ ಇದ್ದರೂ ಭ್ರಷ್ಟಾಚಾರ ವಿಲ್ಲದೆ ಕೆಲಸ ಮಾಡಿದ ಆತ್ಮ ಸಂತೋಷ ನನಗಿದೆ. ನನ್ನ ಸೇವೆಗೆ ಎಲ್ಲರೂ ಸಹಕಾರ ನೀಡಿದ್ದೀರಿ. ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗಿ ಚುನಾವಣೆಯಲ್ಲಿ ಆಯ್ಕೆಯಾಗಲು ಕೂಡಾ ಸಹಕಾರ ನೀಡಿದ್ದಾರೆ. ಅಧ್ಯಕ್ಷ ನಾಗಿ ಎಲ್ಲರನ್ನು ಒಂದೇ ರೀತಿಯಲ್ಲಿ ನೋಡಿಕೊಂಡಿದ್ದೇನೆಂಬ ನೆಮ್ಮದಿ ನಮ್ಮಲ್ಲಿದೆ ಎಂದವರು ಹೇಳಿದರು.
ಸರಕಾರಿ ನೌಕರರ ಸಂಘದ ಪ್ರಭಾರ ಅಧ್ಯಕ್ಷ ಸಿಂಗಾರ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ಯು.ಕೆ., ಅಕ್ಷರದಾಸೋಹ ಅಧಿಕಾರಿ ವೀಣಾ ಎಂ.ಟಿ. ವೇದಿಕೆಯಲ್ಲಿ ಇದ್ದರು.
ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪೃಥ್ವಿ ಕುಮಾರ್ ಟಿ ಸ್ವಾಗತಿಸಿ, ಶಿವಪ್ರಸಾದ್ ಕೆ.ವಿ. ಸನ್ಮಾನ ಪತ್ರ ವಾಚಿಸಿದರು. ಧನಲಕ್ಷ್ಮೀಕುದ್ಪಾಜೆ ವಂದಿಸಿದರು. ಶ್ರೀಮತಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.