ಗರ್ಭಕೋಶದ ಬಳಭಾಗದ ಪದರಗಳಲ್ಲಿ ಸ್ಥಾನೀಯವಾಗಿ ಬೆಳೆಯುವ ಗಡ್ಡೆಗಳಿಗೆ ಫೈಬ್ರಾಯ್ಡ್ ಎಂದು ಕರೆಯುತ್ತಾರೆ. ಬಹಳ ನಿಧಾನವಾಗಿ ಬೆಳೆಯುವ ಕ್ಯಾನ್ಸರ್ ಅಲ್ಲದ ಗಡ್ಡೆ ಇದಾಗಿರುತ್ತದೆ. ಇದನ್ನು ಲಿಯೋಮಯೋಮಾ ಅಥವಾ ಮಯೋಮಾ ಎಂದೂ ಕರೆಯುತ್ತಾರೆ. ಹೆಚ್ಚಾಗಿ ಗರ್ಭಾಶಯದ ಮಾಂಸಖಂಡದ ಪದರಗಳಲ್ಲಿ ಇದು ಕಂಡುಬರುತ್ತದೆ. ಫೈಬ್ರಾಯ್ಡ್‍ಗಳ ಗಾತ್ರದಲ್ಲಿ ಬಹಳ ಅಂತರವಿರುತ್ತದೆ. ಸಣ್ಣ ಬಟಾಣಿ ಗಾತ್ರದಿಂದ ಹಿಡಿದು ದೊಡ್ಡ ಕುಂಬಳಕಾಯಿ ಗಾತ್ರದವರೆಗೂ ಬೆಳೆಯಬಹುದು. ಕೆಲವೊಮ್ಮೆ ಗರ್ಭಿಣಿ ಎಂದು ತಪ್ಪು ಗ್ರಹಿಕೆ ಬರುವಷ್ಟು ಈ ಫೈಬ್ರಾಯ್ಡ್‍ಗಳು ಬೆಳೆಯುವ ತಾಕತ್ತೂ ಹೊಂದಿದೆ. ಈ ಮಾಂಸದ ಗಡ್ಡೆಗಳು ಗರ್ಭಕೋಶದ ಮೇಲ್ಪದರ, ಒಳಪದರ ಮತ್ತು ಮಾಂಸದ ಪದರದಲ್ಲಿ ಬೆಳೆಯಬಹುದು. ಒಬ್ಬ ಮಹಿಳೆಯಲ್ಲಿ ಒಂದು ಅಥವಾ ಹೆಚ್ಚಿನ ಫೈಬ್ರಾಯ್ಡ್ ಒಟ್ಟಿಗೆ ಬೆಳೆಯುವ ಸಾಧ್ಯತೆ ಇರುತ್ತದೆ. ಬಹಳ ಕಾಲದ ವರೆಗೆ ಚಿಕ್ಕದಾಗಿದ್ದು, ನೋವಿಲ್ಲದೆ ನಿಧಾನವಾಗಿ ಬೆಳೆಯುವ ಗಡ್ಡೆಯಾಗಿ ಫೈಬ್ರಾಯ್ಡ್‍ಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಅಪರೂಪಕ್ಕೆ ಅಪವಾದ ಎಂಬಂತೆ ಕೆಲವೊಮ್ಮೆ ಕೆಲವೊಂದು ಫೈಬ್ರಾಯ್ಡ್‍ಗಳು ಶೀಘ್ರವಾಗಿ ಬೆಳೆಯಲೂಬಹುದು. ಸಾಮಾನ್ಯವಾಗಿ 30-40 ರ ಪ್ರಾಯದ, ಮಕ್ಕಳು ಆಗುವ ವಯಸ್ಸಿನ ಮಹಿಳೆಯಲ್ಲಿ ಈ ಫೈಬ್ರಾಯ್ಡ್ ಹೆಚ್ಚು ಕಂಡು ಬರುತ್ತದೆ.
ರೋಗದ ಲಕ್ಷಣಗಳು:
- ಋತುಸ್ರಾವದಲ್ಲಿ ಏರುಪೇರು, ದಿನಗಳಲ್ಲಿ ಬದಲಾವಣೆ ಉಂಟಾಗುತ್ತದೆ
- ಹೆಚ್ಚಿನ ದಿನಗಳ ಋತುಸ್ರಾವ ಅಥವಾ ಹೆಚ್ಚಿನ ಪ್ರಮಾಣದ ಋತುಸ್ರಾವ ಉಂಟಾಗುತ್ತದೆ.
- ಋತು ಸ್ರಾವದ ಸಮಯದಲ್ಲಿ ಅತೀ ಹೆಚ್ಚು ಕಿಬ್ಬೊಟ್ಟೆ ನೋವು ಇರುತ್ತದೆ
- ಹೆಚ್ಚಿನ ರಕ್ತಸ್ರಾವದಿಂದ ರಕ್ತ ಹೀನತೆ ಉಂಟಾಗುತ್ತದೆ
- ಋತುಚಕ್ರದ ನಡುವೆ ರಕ್ತಸ್ರಾವ ಆಗುವ ಸಾಧ್ಯತೆಯೂ ಇರುತ್ತದೆ
- ಸೊಂಟನೋವು, ಬೆನ್ನಿನ ಹಿಂಭಾಗದಲ್ಲಿ ನೋವು ಇರುತ್ತದೆ.
- ಒತ್ತಡದ ಪರಿಣಮವಾಗಿ ಪದೇ ಪದೇ ಮೂತ್ರ ಮಾಡಬೇಕೆಂದು ಅನಿಸಿಕೆ, ಮಲಬದ್ಧತೆ, ಹೊಟ್ಟೆನೋವು ಉಂಟಾಗಬಹುದು.
- ದೊಡ್ಡ ಗಾತ್ರದ ಫೈಬ್ರಾಯ್ಡ್ ಇದ್ದಲ್ಲಿ ಹೊಟ್ಟೆ ಭಾರ ಇರುತ್ತದೆ.
- ಪದೇ ಪದೇ ಗರ್ಭಪಾತವಾಗಬಹುದು. ಸಾಮಾನ್ಯವಾಗಿ ಚಿಕ್ಕ ಗಾತ್ರದ ಫೈಬ್ರಾಯ್ಡ್‍ಗಳು ಮಹಿಳೆ ಗರ್ಭವತಿಯಾಗಲು ತೊಂದರೆ ನೀಡುವುದಿಲ್ಲ. ಆದರೆ ದೊಡ್ಡ ಗಾತ್ರದ ಫೈಬ್ರಾಯ್ಡ್‍ಗಳು ಬಂಜೆತನಕ್ಕೆ ಕಾರಣವಾಗಲೂಬಹುದು
- ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ನೋವು ಯಾತನೆ ಇರುವ ಸಾಧ್ಯತೆ ಇರುತ್ತದೆ.
- ಫೈಬ್ರಾಯ್ಡ್‍ಗಳ ಗಾತ್ರ ದೊಡ್ಡದಾದಂತೆ ಮೂತ್ರ ಕೋಶದ ಸೋಂಕಿಗೆ ಕಾರಣವಾಗಬಹುದು.
- ರಕ್ತಹೀನತೆ ಕಾರಣದಿಂದ ಸುಸ್ತು, ನಿರಾಸಕ್ತಿ, ತಲೆನೋವು, ವಾಂತಿ ಉಂಟಾಗಬಹುದು.
- ಅತಿ ವಿರಳ ಸಂದರ್ಭಗಳಲ್ಲಿ ಫೈಬ್ರಾಯ್ಡ್ ಗಡ್ಡೆಗಳು ಕ್ಯಾನ್ಸರ್ ಗಡ್ಡೆಗಳಾಗಿ ಪರಿವರ್ತನೆಯಾಗಲೂಬಹುದು.
ಪತ್ತೆಹಚ್ಚುವುದು ಹೇಗೆ?
ಫೈಬ್ರಾಯ್ಡ್ ಕಂಡುಹಿಡಿಯಲು ರೋಗ ಲಕ್ಷಣಗಳ ತೀವ್ರತೆಯನ್ನು ನೋಡಿಕೊಂಡು, ಹೊಟ್ಟೆ ಮತ್ತು ಯೋನಿಯ ಪರೀಕ್ಷೆಯನ್ನು ನುರಿತ ಸ್ತ್ರೀರೋಗ ತಜ್ಞರು ಮಾಡುತ್ತಾರೆ. ಫೈಬ್ರಾಯ್ಡ್ ಗಡ್ಡೆಯ ಗಾತ್ರಕ್ಕೆ ಅನುಸಾರವಾಗಿ, ರೋಗದ ತೀವ್ರತೆ ಮತ್ತು ಲಕ್ಷಣಗಳು ಕಂಡುಬರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಹೊಟ್ಟೆ ಮತ್ತು ಗರ್ಭಕೋಶದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿ ಫೈಬ್ರಾಯ್ಡ್‍ಗಳನ್ನು ಪತ್ತೆ ಹಚ್ಚಲಾಗುತ್ತದೆ.
ಅಗತ್ಯವಿದ್ದಲ್ಲಿ ಹಿಸ್ಟರೋಸ್ಕೋಪಿ ಎಂಬ ಪರೀಕ್ಷೆಯ ಮುಖಾಂತರ ಗರ್ಭಕೋಶದ ಒಳ ಭಾಗದ ಪರೀಕ್ಷೆ ಮಾಡಿ, ಫೈಬ್ರಾಯ್ಡ್‍ಗಳ ಸಂಖ್ಯೆ ಗಾತ್ರವನ್ನು ತಿಳಿಯುತ್ತಾರೆ. ಇದರ ಜೊತೆಗೆ ರಕ್ತಹೀನತೆಯನ್ನು ಪತ್ತೆ ಹಚ್ಚಲು ರಕ್ತದ ಪರೀಕ್ಷೆಯನ್ನು ಮಾಡಲಾಗುತ್ತದೆ. ರೋಗದ ಲಕ್ಷಣ, ಸ್ಕ್ಯಾನಿಂಗ್‍ನ ವರದಿ ಮತ್ತು ರೋಗಿಯ ಕೂಲಂಕುಷ ಪರೀಕ್ಷೆಯನ್ನು ನಡೆಸಿ ರೋಗ ಪತ್ತೆ ಹಚ್ಚಿ ರೋಗದ ನಿರ್ಣಯವನ್ನು ವೈದ್ಯರು ಮಾಡುತ್ತಾರೆ.
ಚಿಕಿತ್ಸೆ ಹೇಗೆ?
ಎಲ್ಲಾ ಫೈಬ್ರಾಯ್ಡ್‍ಗಳಿಗೆ ಚಿಕಿತ್ಸೆ ಅಗತ್ಯವಿಲ್ಲ. ಯಾವುದೇ ತೊಂದರೆ ಕೊಡದ, ಲಕ್ಷಣಗಳು ಇಲ್ಲದ ಫೈಬ್ರಾಯ್ಡ್‍ಗಳನ್ನು ವೈದ್ಯರು ಮುಟ್ಟುವುದಿಲ್ಲ. ನಿರಂತರ ರೋಗಿಯ ಸಂದರ್ಶನ ಮತ್ತು ಪರೀಕ್ಷೆ ಮಾಡಿ ತೊಂದರೆ ಉಂಟುಮಾಡುವ ಫೈಬ್ರಾಯ್ಡ್‍ಗಳನ್ನು ಮಾತ್ರ ಸರ್ಜರಿ ಮಾಡಿ ತೆಗೆಯಲಾಗುತ್ತದೆ.
ಬಾರಿಗಾತ್ರದ ಫೈಬ್ರಾಯ್ಡ್ ಇದ್ದಲ್ಲಿ ಹೊಟ್ಟೆಯ ಭಾಗದಿಂದ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಬೇಕಾಗುತ್ತದೆ. ಸಣ್ಣ ಗಾತ್ರದ ಫೈಬ್ರಾಯ್ಡ್‍ಗಳನ್ನು ಲ್ಯಾಪರೋಸ್ಕೋಪಿ ಮುಖಾಂತರ ಕೀ ಹೋಲ್ ಸರ್ಜರಿ ಮಾಡಿ ತೆಗೆಯಲಾಗುತ್ತದೆ. ಸುಮಾರು 50 ರಿಂದ 80 ಶೇಕಡಾ ಫೈಬ್ರಾಯ್ಡ್‍ಗಳು ಯಾವುದೇ ರೋಗದ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಅಂತಹಾ ಫೈಬ್ರಾಯ್ಡ್‍ಗಳನ್ನು ಹಾಗೆಯೇ ಬಿಟ್ಟು ಬಿಡಲಾಗುತ್ತದೆ. ನೋವು ಹೆಚ್ಚಾದಾಗ, ಋತುಚಕ್ರ ಏರುಪೇರಾದಾಗ, ಋತು ಸ್ರಾವದ ಸಮಯದಲ್ಲಿ ವಿಪರೀತ ರಕ್ತಸ್ರಾವ ಇದ್ದಲ್ಲಿ, ಕ್ಯಾನ್ಸರ್‍ನ ಬದಲಾವಣೆಯಂತೆ ಲಕ್ಷಣವಿದ್ದಲ್ಲಿ , ಗಡ್ಡೆಗಳು ಅತೀ ಶೀಘ್ರವಾಗಿ ಹೆಚ್ಚು ಬೆಳವಣಿಗೆಯಾದಲ್ಲಿ ಅಥವಾ ಬಂಜೆತನಕ್ಕೆ ಕಾರಣವಾದಲ್ಲಿ ಫೈಬ್ರಾಯ್ಡ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮುಖಾಂತರ ತೆಗೆಯಲಾಗುತ್ತದೆ. ನೆನಪಿರಲಿ ಯಾವುದೇ ಔಷಧಿ ಮುಖಾಂತರ ಫೈಬ್ರಾಯ್ಡ್ ನಿರ್ಮೂಲನ ಸಾಧ್ಯವಿಲ್ಲ. ಆದರೆ ರೋಗದ ಲಕ್ಷಣಗಳನ್ನು ಸರಿಪಡಿಸಲು ಔಷಧಿಗಳನ್ನು ಬಳಸಲಾಗುತ್ತದೆ. ಫೈಬ್ರಾಯ್ಡ್ ಚಿಕಿತ್ಸೆಯಲ್ಲಿ ಔಷಧಿಗಳಿಗೆ ಯಾವುದೇ ನಿರ್ಣಾಯಕ ಪಾತ್ರವಿರುವುದಿಲ್ಲ. ಆದರೆ ಕೆಲವೊಮ್ಮೆ ರಸದೂತಗಳನ್ನು ಬಳಸಿ ಫೈಬ್ರಾಯ್ಡ್ ಬೆಳೆಯದಂತೆ ಮಾಡಲು ಸಾಧ್ಯವಿದೆ.
ಶಸ್ತ್ರ ಚಿಕಿತ್ಸೆಯಲ್ಲಿ ಎರಡು ವಿಧಗಳಿವೆ
- ಮಯೋಮೆಕ್ಟಮಿ: ಈ ರೀತಿಯ ಶಸ್ತ್ರಚಿಕಿತ್ಸೆಯಲ್ಲಿ ಗರ್ಭಕೋಶದ ಮಾಂಸಖಂಡಗಳ ನಡುವೆ ಹುದುಗಿರುವ ಫೈಬ್ರಾಯ್ಡ್‍ಗಳನ್ನು ಶಸ್ತ್ರಚಿಕಿತ್ಸೆ ಮುಖಾಂತರ ಹೊರ ತೆಗೆಯಲಾಗುತ್ತದೆ. ಸಾಮಾನ್ಯವಾಗಿ ಬಂಜೆತನ ಇರುವವರಿಗೆ ಮತ್ತು ಚಿಕ್ಕವಯಸ್ಸಿನ ಮಹಿಳೆಯರಿಗೆ ಈ ವಿಧಾನ ಬಳಸುತ್ತಾರೆ. ಇಲ್ಲಿ ಗರ್ಭಕೋಶಕ್ಕೆ ಯಾವುದೇ ತೊಂದರೆ ಆಗದು ಮತ್ತು ಮತ್ತೆ ಗರ್ಭವತಿಯಾಗಲು ಅವಕಾಶವಿದೆ. ಆದರೆ ಇಲ್ಲಿ ಫೈಬ್ರಾಯ್ಡ್ ಪುನಃ ಬೆಳೆಯುವ ಸಾಧ್ಯತೆ ಇರುತ್ತದೆ.
- ಹಿಸ್ಟೆರೆಕ್ಟಮಿ: ಈ ರೀತಿಯ ಶಸ್ತ್ರ ಚಿಕಿತ್ಸೆಯಿಂದ ಸಂಪೂರ್ಣವಾಗಿ ಫೈಬ್ರಾಯ್ಡ್ ಗಡ್ಡೆಯ ಜೊತೆಗೆ ಗರ್ಭಕೋಶವನ್ನು ತೆಗೆಯಲಾಗುತ್ತದೆ. ಮಕ್ಕಳಾದ ಮಹಿಳೆಯರಿಗೆ ಮಾತ್ರ ದೊಡ್ಡಗಾತ್ರದ ಫೈಬ್ರಾಯ್ಡ್ ಗಡ್ಡೆ ಇದ್ದಲ್ಲಿ ಈ ಶಸ್ತ್ರಚಿಕಿತ್ಸೆ ಹೆಚ್ಚಾಗಿ ಮಾಡುತ್ತಾರೆ. ಸಬ್‍ಮ್ಯುಖೋಸಲ್ ಫೈಬ್ರಾಯ್ಡ್ ಇರುವವರಿಗೆ ಈ ರೀತಿಯ ಶಸ್ತ್ರ ಚಿಕಿತ್ಸೆ ಅಗತ್ಯವಿರುತ್ತದೆ.
ಫೈಬ್ರಾಯ್ಡ್‍ಗಳ ಗಾತ್ರ, ಸಂಖ್ಯೆ ಮತ್ತು ಫೈಬ್ರಾಯ್ಡ್‍ಗಳು ಗರ್ಭಕೋಶದ ಒಳಗೆ ಯಾವ ಭಾಗದಲ್ಲಿ ಬೆಳೆದಿದೆ ಎಂಬುದನ್ನು ಅನುಸರಿಸಿ, ಯಾವ ರೀತಿಯ ಸರ್ಜರಿ ಬೇಕು ಎಂದು ನುರಿತ ವೈದ್ಯರು ನಿರ್ಣಯಿಸುತ್ತಾರೆ. ಫೈಬ್ರಾಯ್ಡ್‍ಗಳನ್ನು ತೆಗೆಯುವ ಪ್ರಕ್ರಿಯೆಗೆ ಮಯೋಮೆಕ್ಟಮಿ ಎನ್ನುತ್ತಾರೆ. ಅಬ್ಡೊಮಿನಲ್ ಮಯೋಮೆಕ್ಟಮಿ, ಲ್ಯಾಪರೋಸ್ಕೋಪಿಕ್ ಮಯೋಮೆಕ್ಟಮಿ ಅಥವಾ ಹಿಸ್ಟರೋಸ್ಕೋಪಿಕ್ ಮಯೋಮೆಕ್ಟಮಿ ಹೀಗೆ ಮೂರು ವಿಧದ ಶಸ್ತ್ರಚಿಕಿತ್ಸೆ ಇದ್ದು, ಯಾರಿಗೆ, ಯಾರು, ಯಾವಾಗ, ಹೇಗೆ ಮಾಡಬೇಕು ಎನ್ನುವುದನ್ನು ವೈದ್ಯರೇ ನಿರ್ಧರಿಸುತ್ತಾರೆ.
ಪೈಬ್ರಾಯ್ಡ್ ಬರದಂತೆ ತಡೆಯುವುದು ಹೇಗೆ?
ಜೀವನ ಶೈಲಿಯ ಪರಿವರ್ತನೆ ಮಾಡಿಕೊಂಡು ಫೈಬ್ರಾಯ್ಡ್ ಗಡ್ಡೆ ಬೆಳೆಯದಂತೆ ನೋಡಿಕೊಳ್ಳಬೇಕು.
- ಆಲ್ಕೊಹಾಲ್ ಸೇವನೆ ನಿಯಂತ್ರಣದಲ್ಲಿರಬೇಕು, ಧೂಮಪಾನದ ಬಗ್ಗೆ ಜಾಗೃತರಾಗಬೇಕು. ಇವೆರಡೂ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಮೂಲಕಾರಣ, ಫೈಬ್ರಾಯ್ಡ್‍ನಿಂದ ಹಿಡಿದು ಕ್ಯಾನ್ಸರ್ ವರೆಗೂ ಕಾಡುವ ಶಕ್ತಿ ಇವೆರಡು ಚಟಗಳಿಗೆ ಇದೆ.
- ಮೆಡಿಟರೇನಿಯನ್ ಆಹಾರ ಪದ್ಧತಿ ಬಳಸುವುದು ಸೂಕ್ತ ಆಹಾರದಲ್ಲಿ ಹಸಿ ಮತ್ತು ತಾಜಾ ತರಕಾರಿಗಳಿಗೆ ಹೆಚ್ಚು ಆದ್ಯತೆ ಇರಲಿ. ಹಸಿರು ತರಕಾರಿಗಳ ಸೇವನೆ ಎಲ್ಲಾ ರೋಗಗಳಿಗೆ ತಡೆಯನ್ನು ಬಿಡುತ್ತದೆ. ತಾಜಾ ಹಣ್ಣು, ತರಕಾರಿ, ಮೀನು ಎಲ್ಲವೂ ನಿಮ್ಮ ಆರೋಗ್ಯವನ್ನು ಕಾಯುತ್ತದೆ.
- ನಿಮ್ಮ ದೇಹದ ಇಸ್ಟ್ರೋಜನ್ ಹಾರ್ಮೊನ್‍ಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು. ಇದಕ್ಕೆ ವೈದ್ಯರ ಸಲಹೆ ಅತೀ ಅಗತ್ಯ. ಅನಗತ್ಯ ಗರ್ಭಧಾರಣೆ ನಿಯಂತ್ರಣ ಔಷಧಿ ಅಥವಾ ಇನ್ನಾವುದೇ ರಸದೂತ ವೈದ್ಯರ ಸಲಹೆಯಂತೆ ಸೇವಿಸಿ.
- ನಿಮ್ಮ ಆಹಾರದಲ್ಲಿ ಹೆಚ್ಚು ವಿಟಮಿನ್ ಡಿ ಸಿಗುವಂತೆ ನೋಡಿಕೊಳ್ಳಿ
- ನಿಮ್ಮ ದೇಹದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
- ದೈಹಿಕ ವ್ಯಾಯಾಮವುಳ್ಳ ಆರೋಗ್ಯ ಪೂರ್ಣ ಜೀವನ ಶೈಲಿ ಬೆಳೆಸಿಕೊಳ್ಳಬೇಕು.
- ನಿಮ್ಮ ದೇಹದ ತೂಕದ ಮೇಲೆ ನಿಯಂತ್ರಣವಿರಲಿ. ಬೊಜ್ಜುತನ ಮತ್ತು ಅಧಿಕ ದೇಹದ ತೂಕ ಬಂಜೆತನಕ್ಕೆ ಮತ್ತು ಫೈಬ್ರಾಯ್ಡ್‍ಗಳಿಗೆ ಮೂಲಕಾರಣ
- ನಿಮ್ಮ ಆಹಾರದಲ್ಲಿ ಎಲ್ಲಾ ಪ್ರೊಟಿನ್, ಲವಣ, ಶರ್ಕರಪಿಷ್ಟ, ವಿಟಮಿನ್ ಪೋಷಕಾಂಶಗಳಿಗೆ ಆದ್ಯತೆ ಇರಲಿ. ಸಮತೋಲಿತ ಆಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು.
ಕೊನೆಮಾತು:
ಫೈಬ್ರಾಯ್ಡ್‍ಗಳು ಹೆಚ್ಚಿನ ಎಲ್ಲಾ ಮಧ್ಯವಯಸ್ಕ ಮಹಿಳೆಯಲ್ಲಿ ಕಂಡುಬರುತ್ತದೆ. ಸುಮಾರು 20 ರಿಂದ 70 ಶೇಕಡಾ ಮಹಿಳೆಯರು ತಮ್ಮ ಜೀವಿತಾವಧಿಯ, ಮಕ್ಕಳು ಆಗುವ ಪ್ರಾಯದಲ್ಲಿ ಈ ಫೈಬ್ರಾಯ್ಡ್ ಸಮಸ್ಯೆ ಅನುಭವಿಸುತ್ತಾರೆ. ಈ ಫೈಬ್ರಾಯ್ಡ್‍ಗಳು ಶೇಕಡಾ 99 ಮಹಿಳೆಯರಲ್ಲಿ ಯಾವುದೇ ತೊಂದರೆ ನೀಡುವುದಿಲ್ಲ. ಇದರರ್ಥ ನೀವು ನಿಮಗೆ ಫೈಬ್ರಾಯ್ಡ್ ಇದ್ದರೆ ನಿರ್ಲಕ್ಷಿಸಬೇಕು ಎಂದಲ್ಲ. ನಿರಂತರವಾಗಿ ನಿಯಮಿತವಾಗಿ ವೈದ್ಯರ ಸಲಹೆ ಮಾರ್ಗದರ್ಶನ ಮತ್ತು ಸಮಾಲೋಚನೆ ಅತೀ ಅಗತ್ಯ. ಎಲ್ಲಾ ಫೈಬ್ರಾಯ್ಡ್‍ಗಳಿಗೆ ಸರ್ಜರಿ ಅಗತ್ಯವಿಲ್ಲ. ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆ ಉಂಟಾಗುತ್ತಿದ್ದಲ್ಲಿ ನಿಮ್ಮ ವೈವಾಹಿಕ ಮತ್ತು ಕೌಟುಂಬಿಕ ಜೀವನಕ್ಕೆ ತೊಂದರೆ ಉಂಟಾಗುವುದಿಲ್ಲ. ವೈದ್ಯರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಯಾವುದೇ ಔಷಧ ಮುಖಾಂತರ ಫೈಬ್ರಾಯ್ಡ್ ಗಡ್ಡೆಗಳನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಸಾಧ್ಯವಾಗುವುದಿಲ್ಲ.ಹಳ್ಳಿ ಮದ್ದು, ಮಂತ್ರತಾಯಿತ ಅಥವಾ ಇನ್ನಾವುದೇ ಚಿಕಿತ್ಸಾ ಪದ್ಧತಿಗೆ ಫೈಬ್ರಾಯ್ಡ್ ಜಗ್ಗುವುದಿಲ್ಲ. ಆದರೆ ಎಲ್ಲಾ ಔಷಧಿಗಳು ಕೇವಲ ತಾತ್ಕಾಲಿಕ ಶಮನ ನೀಡಬಲ್ಲದು. ಈ ಎಲ್ಲಾ ಕಾರಣಗಳಿಂದ ಫೈಬ್ರಾಯ್ಡ್ ಗಡ್ಡೆಯ ರೋಗದ ಲಕ್ಷಣಗಳನ್ನು ಎಲ್ಲ ಮಹಿಳೆಯರು ತಿಳಿದುಕೊಂಡು, ಸಕಾಲಿಕ ವೈದ್ಯಕೀಯ ತಪಾಸಣೆ ಮಾಡಿಸಿ, ವೈದ್ಯರ ಸಲಹೆಯನ್ನು ಪಾಲಿಸಿಕೊಂಡು ನಿಶ್ಚಿಂತೆಯಾಗಿರುವುದರಲ್ಲಿಯೇ ಜಾಣತನ ಅಡಗಿದೆ.
ಡಾ|| ಮುರಲೀ ಮೋಹನ್‍ಚೂಂತಾರು