ವಿದ್ಯಾರ್ಥಿಗಳಿಗೆ ಮಾನಸಿಕ ಸಾಮರ್ಥ್ಯ ಕೌಶಲ್ಯ ವೃದ್ಧಿ ಕುರಿತು ಕಾರ್ಯಾಗಾರ

0

ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮ, ಆತ್ಮಹತ್ಯೆ, ಒತ್ತಡ ಹೀಗೆ ವಿವಿಧ ವಿಚಾರಗಳನ್ನಿಟ್ಟುಕೊಂಡು ವಿದ್ಯಾರ್ಥಿಗಳಲ್ಲಿ ಮಾನಸಿಕ ಸಾಮರ್ಥ್ಯ ಕೌಶಲ್ಯಗಳ ಅರಿವು ನೀಡುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಕಾಲೇಜುಗಳಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳುವ ಕುರಿತು ಸುಳ್ಯದ ಯುವಕರ ತಂಡವೊಂದು ಯೋಜನೆಯೊಂದನ್ನು ಹಮ್ಮಿಕೊಂಡಿದ್ದು ಇದರ ಪೂರ್ವಭಾವಿ ಸಭೆಯು ಸುಳ್ಯದಲ್ಲಿ ಎ.12ರಂದು‌ ನಡೆಯಿತು.

ಜೆಡಿಎಸ್ ವಿದ್ಯಾರ್ಥಿ ಘಟಕದ ಮುಂದಾಳು ನಿಹಾಲ್ ಎಸ್.ಕೋಡ್ತುಗುಳಿಯವರು ಈ ಯೋಜನೆಯ ಕುರಿತು ಯೋಜನೆ ರೂಪಿಸಿದ್ದಾರೆ. ಇದಕ್ಕೆ ಬೆಂಗಳೂರಿನ ಎಂ.ಹೆಚ್.ಎ.ಐ. (ಮೆಂಟಲ್ ಹೆಲ್ತ್ ಅಕಾಡೆಮಿ ಇಂಡಿಯಾ) ಸಂಸ್ಥೆಯು ಸಹಕಾರ ನೀಡುತಿದ್ದು, ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ರಂಜಿತಾರೊಂದಿಗೆ ಸಮಾಲೋಚನೆ ನಡೆಸಲಾಯಿತು. ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ, ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿರುವ ಕುರಿತು, ಮೊಬೈಲ್ ಹೆಚ್ಚು ಬಳಕೆ ಇತ್ಯಾದಿ ಕುರಿತು ಚರ್ಚೆಗಳು ನಡೆದವು.

ಸುಧೀರ್ಘ ಚರ್ಚೆ ಬಳಿಕ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆಯ ಜತೆ ಚರ್ಚಿಸಿ ಸಹಕಾರ ಪಡೆದು ಕಾರ್ಯಾಗಾರ ನಡೆಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಜೆಡಿಎಸ್ ವಿದ್ಯಾರ್ಥಿ ಘಟಕದ ಪ್ರಣಮ್ ಸಿ.ಬಿ., ಶ್ರೇಯಸ್ ಕುಕ್ಕುಜೆ ಇದ್ದರು.