ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದ 6 ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ
ಎ.21 ಮತ್ತು 22 ರಂದು ಮಠದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಹರಿ ಎಳಚಿತ್ತಾಯ ರವರ ಮಾರ್ಗದರ್ಶನದಲ್ಲಿ ನಡೆಯಲಿರುವುದಾಗಿ
ಎ.13 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೃಂದಾವನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಯವರು ತಿಳಿಸಿದರು.
ಎರಡು ದಿನಗಳ ಪರ್ಯಂತ ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ಎ. 21 ರಂದು ಬೆಳಗ್ಗೆ ಗಣಪತಿ ಹವನವಾಗಿ ಸಂಜೆ ಮಠದಲ್ಲಿ ವಿಶೇಷವಾಗಿ ಭಜನಾ ಕಾರ್ಯಕ್ರಮ ಬಳಿಕ ಗಂಟೆ 5.00 ರಿಂದ ಸುಳ್ಯದ ಪ್ರಮುಖ ರಸ್ತೆಯಲ್ಲಿ ವಿಶೇಷ ಚೆಂಡೆ ವಾದ್ಯ ಘೋಷದೊಂದಿಗೆ ಆಕರ್ಷಕ ಕುಣಿತ ಭಜನೆಯೊಂದಿಗೆ ಭಕ್ತ ಸಮೂಹದ ಕಾಲ್ನಡಿಗೆಯ ಯಾತ್ರೆಯ ಮೂಲಕ ಶ್ರೀ ಗುರು ರಾಯರ ಪಲ್ಲಕ್ಕಿಯ ಪಟ್ಟಣ ಸವಾರಿಯು ಸಾಗಿ ಬರಲಿರುವುದು.
ಮರುದಿನ ಪೂರ್ವಾಹ್ನ ಅರ್ಚಕರ ನೇತೃತ್ವದಲ್ಲಿ ಪಂಚ ವಿಂಶತಿ ಕಲಶ ಪೂಜೆ, ಕಲಶಾಭಿಷೇಕ ಶ್ರೀ ರಾಘವೇಂದ್ರ ಅಷ್ಟಾಕ್ಷರೀ ಮಂತ್ರ ಹೋಮ ,ಶ್ರೀ ರಾಮ ತಾರಕ ಮಂತ್ರ ಹೋಮವು ನಡೆಯಲಿದೆ.
ಮಧ್ಯಾಹ್ನ ಅಲಂಕಾರ ಪೂಜೆ ಹಾಗೂ ಅನ್ನ ಸಂತರ್ಪಣೆಯಾಗಲಿರುವುದು. ಸಂಜೆ 5.00 ಕ್ಕೆ ಆಶ್ಲೇಷಾ ಬಲಿ ಪೂಜೆ ರಾತ್ರಿ ವಿಶೇಷವಾಗಿ ರಂಗ ಪೂಜೆಯು ನಡೆದು ಮಹಾಪೂಜೆಯಾಗಿ ಅನ್ನ ಸಂತರ್ಪಣೆಯಾಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಗಂಟೆ 11.30 ರಿಂದ ಸುಬ್ರಹ್ಮಣ್ಯದ ಯಜ್ಞೇಶ್ ಆಚಾರ್ ಮತ್ತು ಬಳಗದವರಿಂದ ಭಕ್ತಿ ಗಾನ ಸಂಗೀತ ಕಾರ್ಯಕ್ರಮ ಸಂಜೆ 4.00 ರಿಂದ ಭಜನಾ ಕಾರ್ಯಕ್ರಮ ಬಳಿಕ ಪುತ್ತೂರು ಧೀಶಕ್ತಿ ಮಹಿಳಾ ಯಕ್ಷ ಬಳಗದವರಿಂದ ಸಮರ ಸೌಗಂಧಿಕ ಎಂಬ ಯಕ್ಷಗಾನ ತಾಳಮದ್ದಳೆ ಪ್ರದರ್ಶನ ವಾಗಲಿರುವುದು. ಉತ್ಸವದ ಸಮಯದಲ್ಲಿ ಭಕ್ತಾದಿಗಳು ತೊಟ್ಟಿಲು ಸೇವೆ, ಪಲ್ಲಕ್ಕಿ ಸೇವೆ, ರಂಗಪೂಜೆ ಹಾಗೂ ಇನ್ನಿತರ ಸೇವೆಗಳನ್ನು ಮಾಡಿಸಲು ಅವಕಾಶವಿರುವುದಾಗಿ ವಿವರ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯದರ್ಶಿ ಗಿರೀಶ್ ಕೇಕುಣ್ಣಾಯ, ಶಿವಳ್ಳಿ ಸಂಪನ್ನದ ಅಧ್ಯಕ್ಷ ರಾಮ್ ಕುಮಾರ್ ಹೆಬ್ಬಾರ್, ಯುವ ಸಂಘದ ಕಾರ್ಯದರ್ಶಿ ಆದಿತ್ಯ ಹೆಬ್ಬಾರ್ ಉಪಸ್ಥಿತರಿದ್ದರು.