ಕೈಗೊಳ್ಳುವ ಕಾರ್ಯ ದೇವರ ಪ್ರೀತಿಗೆ ಅರ್ಹವಾಗುವಂತಿರಲಿ- ರಾಮಕೃಷ್ಣ ಭಟ್
ಸುಳ್ಯ: ನಾವು ಮಾಡುವ ಎಲ್ಲಾ ಕೆಲಸಗಳು ಭಗವಂತನ ಪ್ರೀತಿಗೆ ಅರ್ಹವಾಗುವಂತಿರಬೇಕು. ಹಾಗಿದ್ದರೆ ಮಾತ್ರ ಪಡೆದಿರುವ ಶ್ರೇಷ್ಠ ಜನ್ಮಕ್ಕೆ ನೈಜ ಅರ್ಥ ದೊರಕಲು ಸಾಧ್ಯ ಎಂದು ಬೆಳ್ತಂಗಡಿಯ ಗಮಕ ಕಲಾ ಪರಿಷತ್ ನ ಅಧ್ಯಕ್ಷ ರಾಮಕೃಷ್ಣ ಭಟ್ ತಿಳಿಸಿದರು.
ಅವರು ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಆಯೋಜನೆಗೊಂಡ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು. ದೇವರು ಇರುವ ಸ್ಥಾನವೇ ದೇವಸ್ಥಾನ. ಅದರಲ್ಲಿ ಸಣ್ಣದು, ದೊಡ್ಡದು ಎನ್ನುವ ಭೇದ ಭಾವಗಳಿಲ್ಲ. ಸಮರ್ಪಣಾ ಭಾವದಿಂದ ಯಾವುದೇ ಕೆಲಸ ಮಾಡಿದರೆ ಆ ಕೆಲಸದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಾವು ಕೈಗೊಳ್ಳುವ ಎಲ್ಲಾ ಕಾರ್ಯಗಳು ಸಾಗಬೇಕು ಎಂದವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ ಭಕ್ತಿಯಿಂದ, ಶ್ರದ್ಧೆಯಿಂದ ಭಗವಂತನನ್ನು ಸ್ತುತಿಸಿದರೆ ಆತನ ಆಶೀರ್ವಾದ ಸದಾ ಇರುತ್ತದೆ. ಇತ್ತೀಚೆಗೆ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಸಂತ ಪೈ ಮಾತನಾಡಿ ಜೀವಿತ ಕಾಲದ ಪಾಪ ಪುಣ್ಯಗಳಿಗೆ ತಕ್ಷಣವೇ ಫಲಿತಾಂಶ ಒದಗುವ ಕಾಲಘಟ್ಟದಲ್ಲಿ ನಾವಿರುವ ಕಾರಣ ಪ್ರತಿಯೊಬ್ಬರೂ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ವಹಿಸಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ವೆಂಕಟ್ರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ. ಸಿ ಜಯರಾಮ, ಸಿ. ಎ ಬ್ಯಾಂಕ್ ನ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ನ್ಯಾಯವಾದಿ ಶ್ರೀಕಾಂತ್, ಅಡ್ಕಾರು ಗಣೇಶ್ ಕ್ಯಾಶ್ಯೂಸ್ ನ ಮಾಲಕ ಸುಧಾಕರ ಕಾಮತ್, ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ ಉಪಸ್ಥಿತರಿದ್ದರು.
ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ ಅತಿಥಿಗಳನ್ನು ಸ್ವಾಗತಿಸಿದರು.ಬ್ರಹ್ಮಕಲಶೋತ್ಸವದ ಆರ್ಥಿಕ ಸಮಿತಿಯ ಸಂಚಾಲಕ ಉದಯಕುಮಾರ್ ಆಚಾರ್ ವಂದಿಸಿದರು. ಅಚ್ಯುತ ಅಟ್ಲೂರು ಹಾಗೂ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಂದ ಪ್ರದರ್ಶಿಸಲ್ಪಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನೃತ್ಯ ವಿದುಷಿ ಕು. ಅಪೂರ್ವ ಪಾವೂರು ಮತ್ತು ಬಳಗದವರಿಂದ ನಡೆದ ನೃತ್ಯ ವೈವಿಧ್ಯ ಕಾರ್ಯಕ್ರಮ ನೆರೆದವರ ಮನರಂಜಿಸಿತು.
ಎಸ್ ಯುಎಲ್-ಎಪ್ರಿಲ್೨೮-ನಿತ್ಯಾನಂದ: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಆಯೋಜನೆಗೊಂಡ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಇಂದು (ಸೋಮವಾರ) ಗ್ರಂಥಾಲಯದ ಪುಟಾಣಿಗಳಿಂದ ಯಕ್ಷಗಾನ
ಕಳೆದ ಕೆಲ ತಿಂಗಳುಗಳಿಂದ ಊರಿನ ಪುಟಾಣಿ ಮಕ್ಕಳು
ಯಕ್ಷ ಗುರುಗಳಾದ ಯೋಗೀಶ್ ಶರ್ಮ ಅಳದಂಗಡಿ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ನಾಟ್ಯ ಕಲಿಯುತ್ತಿದ್ದು, ಸೋಮವಾರ ರಾತ್ರಿ 8.30 ಕ್ಕೆ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಏಕಾದಶಿ ದೇವಿ ಮಹಾತ್ಮೆ’ ಎಂಬ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ. ಬಳಿಕ ಮಂಗಳಾ ದೇವಿ ಮೇಳದ ಕಲಾವಿದರಿಂದ ‘ಸಾರ್ಲಪಟ್ಟೊದ ಸತ್ಯ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.