ಜಾಲ್ಸೂರು ಗ್ರಾಮದ ಕದಿಕಡ್ಕ ಸ.ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾರಿಜ ಬಿ. ಅವರು ಎ.30ರಂದು ತಮ್ಮ 37 ವರ್ಷದ ಸೇವಾವಧಿಯಿಂದ ನಿವೃತ್ತರಾದರು.
ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ದೇವರಗುಂಡ ಮನೆತನದ ಹೊಸಮನೆ ಲಕ್ಷ್ಮಣ ಗೌಡ ಹಾಗೂ ಶ್ರೀಮತಿ ಸೀತಮ್ಮ ದಂಪತಿಯ ಪುತ್ರಿಯಾಗಿರುವ ಶ್ರೀಮತಿ ವಾರಿಜ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಂಜಿಕಲ್ಲು ಶ್ರೀ ವಿಷ್ಣುಮೂರ್ತಿ ಐಡೆನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಪೆರ್ನಾಜೆಯ ಶ್ರೀ ಸೀತಾರಾಘವ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ಬಳಿಕ ಕೊಡಗಿನ ವಿರಾಜಪೇಟೆ ಮಹಿಳಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ತರಬೇತಿ ಪಡೆದರು.
1987ರಲ್ಲಿ ಸುಳ್ಯದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿ, ಸುದೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ, ಬಳಿಕ 2011ರಲ್ಲಿ ಜಾಲ್ಸೂರು ಗ್ರಾಮದ ಕದಿಕಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ವರ್ಗಾವಣೆಗೊಂಡರು.
ಸುಳ್ಯದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೈಡ್ಸ್ ಶಿಕ್ಷಕಿಯಾಗಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ, ರ್ಯಾಲಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸುವಿಕೆ, ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ
ಜಾಲ್ಸೂರಿನ ಕದಿಕಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ 13 ವರ್ಷ ಕಾಲ ಸೇವೆ ಸಲ್ಲಿಸಿದ್ದು, ತಮ್ಮ ಸೇವಾವಧಿಯಲ್ಲಿ ಕದಿಕಡ್ಕ ಶಾಲೆಯಲ್ಲಿ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಅಕ್ಷರ ಕೈತೋಟ, ತೆಂಗಿನತೋಟ, ನಾಲ್ಕು ಶಾಲಾ ಕೊಠಡಿಗಳ ನಿರ್ಮಾಣ ಮತ್ತು ಸರ್ಕಾರದಿಂದ ಅನುದಾನಕ್ಕಾಗಿ ಪ್ರಯತ್ನಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಾಲಾಭಿವೃದ್ಧಿಗೆ ಅನುದಾನ, ಪ್ರತಿಭಾ ಕಾರಂಜಿಗಳಲ್ಲಿ ಕ್ಲಸ್ಟರ್, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ದು, ಬಹುಮಾನ ಪಡೆಯುವಂತೆ ಮಾಡಿದ ಕೀರ್ತಿ ಶ್ರೀಮತಿ ವಾರಿಜ ಅವರಿಗೆ ಸಲ್ಲುತ್ತದೆ. ಜಿಲ್ಲೆ ಮತ್ತು ರಾಜ್ಯಮಟ್ಟದ ಇನ್ಸ್ಫಾಯರ್ ಅವಾರ್ಡ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕದಿಕಡ್ಕ ಶಾಲಾ ವಾರ್ಷಿಕೋತ್ಸವ ಶೌಚಾಲಯಗಳ ನಿರ್ಮಾಣ, ಮುಖ್ಯ ಶಿಕ್ಷಕರ ಕೊಠಡಿ ನಿರ್ಮಾಣ, ಶಾಲಾ ಆವರಣಗೋಡೆ ರಚನೆ, ಹಸ್ತಪ್ರತಿ ತಯಾರಿಕೆ, ಅಕ್ಷರ ಕೈತೋಟ ನಿರ್ಮಾಣದಲ್ಲಿ ಬಹುಮಾನ, ದಾನಿಗಳಿಂದ ಹಾಗೂ ಪೋಷಕರಿಂದ ಶಾಲೆಗೆ ಮೈಕ್ ಸೆಟ್, ಗ್ರೈಂಡರ್, ಪ್ರಿಂಟರ್, ಕಛೇರಿಗೆ ಪೀಠೋಪಕರಣಗಳು ಸೇರಿದಂತೆ ಶಾಲಾಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಯಶಸ್ಸು ಪಡೆದಿದ್ದಾರೆ.
ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಸ್ಕೌಟ್ ಗೈಡ್ ಜಾಂಬೂರಿ ಉತ್ಸವದಲ್ಲಿ ಶಾಲಾ ಮಕ್ಕಳೊಂದಿಗೆ ಭಾಗವಹಿಸುವಿಕೆ, ಪ್ರತೀ ವರ್ಷ ಶಾಲಾ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಿದ ಕೀರ್ತಿ ಶ್ರೀಮತಿ ವಾರಿಜರಿಗೆ ಸಲ್ಲುತ್ತದೆ.
ಸುಳ್ಯದ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ನ್ಯಾಷನಲ್ ಬುಲ್ಡೋಜರ್ ಪ್ರಶಸ್ತಿ, ಪ್ರಣವ ಫೌಂಡೇಶನ್ ಮತ್ತು ಶಿಕ್ಷಣ ಇಲಾಖೆ ಕೊಡಮಾಡುವ ಪ್ರಣವ ಪ್ರಶಸ್ತಿ ಸೇರಿದಂತೆ ಇನ್ನಿತರ ಪ್ರಶಸ್ತಿಗಳು ಇವರ ಶಿಕ್ಷಕ ಸೇವೆಗೆ ಲಭಿಸಿದೆ.
ಇವರ ಪತಿ ಧನಂಜಯ ಎಸ್.ಎಂ. ಅವರು ಸುಳ್ಯ ನಗರ ಪಂಚಾಯತಿ ಉದ್ಯೋಗಿಯಾಗಿದ್ದು, ಪುತ್ರ ಸ್ವಸ್ತಿಕ್ ಬಿ.ಡಿ. ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರಿ ಸ್ವಪ್ನಾ ಬಿ.ಡಿ. ಅವರು ಬಿ.ಇ. ಎಂ.ಟೆಕ್ ಪದವಿ ಪಡೆದಿದ್ದು, ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.