ಉಪೇಂದ್ರ ಕಾಮತ್ ಅವರು ಸಂಘಕ್ಕೆ ಸಲ್ಲಿಸಿದ ಕೊಡುಗೆ ಅನನ್ಯ ಅವರು ಸುಳ್ಯಕ್ಕೆ ದೊಡ್ಡ ಶಕ್ತಿಯಾಗಿದ್ದರು : ಡಾ. ಕಲ್ಲಡ್ಕ ಭಟ್
ಗೇರುಬೀಜ ಉದ್ಯಮದ ಮೂಲಕ ನೂರಾರು ನೌಕರರಿಗೆ ಅನ್ನದಾತರಾಗಿದ್ದರು: ಡಾ. ಕೆ.ವಿ. ಚಿದಾನಂದ
ಪ್ರಾಮಾಣಿಕತೆ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರೇ ಉಪೇಂದ್ರ ಕಾಮತ್: ಮೊಗರ್ನಾಡು ಜನಾರ್ಧನ ಭಟ್
ಸುಳ್ಯದ ಹಿರಿಯ ಬಿಜೆಪಿ ಮುಖಂಡ, ಹಿರಿಯ ಉದ್ಯಮಿ ಜಾಲ್ಸೂರು ಗ್ರಾಮದ ವಿನೋಬನಗರದ ಕೆ. ಉಪೇಂದ್ರ ಕಾಮತ್ ಅವರು ವಿಧಿವಶವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆಯು ಉಪೇಂದ್ರ ಕಾಮತ್ ಅವರ ಮನೆಯಲ್ಲಿ ಮೇ.6ರಂದು ಸಂಜೆ ನಡೆಯಿತು.
ಜಾಲ್ಸೂರಿನ ಮಾಜಿ ಮಂಡಲ ಪ್ರಧಾನರಾಗಿದ್ದ ಉಪೇಂದ್ರ ಕಾಮತ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸಲ್ಲಿಸಿದ ಕೊಡುಗೆ ಅನನ್ಯ. ಹಿಂದುತ್ವಕ್ಕೆ ಮನ್ನಣೆ ನೀಡಿದ ಮನೆತನ ಕಾಮತ್ ಅವರದ್ದು, ಯಾವುದೇ ಸಂದರ್ಭದಲ್ಲಿ ಛಲಬಿಡದೆ ಮುನ್ನುಗ್ಗುವ ವ್ಯಕ್ತಿತ್ವದ ಉಪೇಂದ್ರ ಕಾಮತ್ ಅವರು ಅಯೋಧ್ಯೆ ಕರಸೇವಕರಾಗಿ ದುಡಿದು ದೇಶಕ್ಕೆ ಸೇವೆ ಸಲ್ಲಿಸಿದವರು. ಅವರ ಅಗಲುವಿಕೆ ಸಂಘಕ್ಕೆ ತುಂಬಲಾರದ ನಷ್ಟ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ನುಡಿನಮನ ಸಲ್ಲಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ಮಾತನಾಡಿ ‘ಸುಳ್ಯ ಭಾಗದಲ್ಲಿ ಗೇರುಬೀಜ ಉದ್ಯಮ ಪ್ರಾರಂಭಿಸಿ, 800ಕ್ಕೂ ಅಧಿಕ ನೌಕರರಿಗೆ ಉದ್ಯಮ ಕೊಟ್ಟು ಬೆಳೆಸಿ, ಅವರ ಪಾಲಿಗೆ ಅನ್ನದಾತರಾಗಿದ್ದ ಕೀರ್ತಿ ಉಪೇಂದ್ರ ಕಾಮತ್ ಅವರಿಗೆ ಸಲ್ಲುತ್ತದೆ.
ಸುಳ್ಯದಲ್ಲಿ ಸಂಘ ಪರಿವಾರಕ್ಕೆ ಶಕ್ತಿ ತುಂಬುವ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಆ ಮೂಲಕ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಶಕ್ತಿ ತುಂಬಿದವರು ಉಪೇಂದ್ರ ಕಾಮತ್ ಅವರದ್ದು ಎಂದು ಹೇಳಿದರು.
ಉಪೇಂದ್ರ ಕಾಮತ್ ಅವರು ಸಮಾಜಕ್ಕೆ ಸಲ್ಲಿಸಿದ ಕೊಡುಗೆ ಅಪಾರ. ಅವರ ಆದರ್ಶ ಗುಣ ಮುಂದಿನ ಸಮಾಜಕ್ಕೆ ಪ್ರೇರಣೆಯಾಗಿದ್ದು, ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರು ಉಪೇಂದ್ರ ಕಾಮತ್ ಅವರು ಎಂದು ಮೊಗರ್ನಾಡ್ ಜನಾರ್ದನ ಭಟ್ ಹೇಳಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಳೂರು ಚಂದ್ರಶೇಖರ ಅವರು ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಸಹ ಸೇವಾ ಪ್ರಮುಖ್ ನ.ಸೀತಾರಾಮ ಅವರು ಪ್ರಸ್ತಾವನೆಗೈದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕಿನ ವಿವಿಧ ಪಕ್ಷದ ಮುಖಂಡರುಗಳು, ಉಪೇಂದ್ರ ಕಾಮತ್ ಅವರ ಅಭಿಮಾನಿಗಳು, ಕುಟುಂಬಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದು, ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.