ಗೀತಾಜ್ಞಾನ ಯಜ್ಞ ಬಾಳಿಲ ಘಟಕದಿಂದ ಗೀತಾಭ್ಯಾಸ ಸಮಾರೋಪ, ಮಾತೃಪೂಜನಾ ಮತ್ತು ಯೋಧರಿಗೆ ಗೌರವಾರ್ಪಣೆ

0

ಗೀತಾಜ್ಞಾನ ಯಜ್ಞ ಬಾಳಿಲ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸಂಸ್ಕೃತಿ ಸಂಸ್ಕಾರ ಗೀತಾಭ್ಯಾಸ ಶಿಬಿರದ ಸಮಾರೋಪ ಸಮಾರಂಭ ಬಾಳಿಲ ವಿಶ್ವೇಶ್ವರ ಪುರೋಹಿತರ ಮನೆಯಲ್ಲಿ ನಡೆಯಿತು.

ಗೀತಾಜ್ಞಾನ ಯಜ್ಞ ಬಾಳಿಲ ಘಟಕದ ವತಿಯಿಂದ ಭಗವದ್ಗೀತೆ ಪಾರಾಯಣದ ಶಾಸ್ತ್ರೀಯ ಕ್ರಮವನ್ನು ಕಲಿಸುವ ಉದ್ದೇಶದಿಂದ ವಿಶ್ವೇಶ್ವರ ಪುರೋಹಿತರ ಮನೆಯಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು 20 ದಿನಗಳ ಕಾಲ ನಡೆದ ಶಿಬಿರದಲ್ಲಿ 20 ಮಕ್ಕಳು ಭಾಗವಹಿಸಿದ್ದರು. ಮಾತಾಜಿ ತ್ರಿವೇಣಿ ವಿಶ್ವೇಶ್ವರ ಪುರೋಹಿತರು ಗೀತಾ ಪಾರಾಯಣದ ಕ್ರಮವನ್ನು ಮಕ್ಕಳಿಗೆ ಕಲಿಸಿಕೊಟ್ಟಿದ್ದು, ಸಮಾರೋಪ ಸಮಾರಂಭದ ದಿನ ಗೀತೆಯ ಎರಡು ಅಧ್ಯಾಯಗಳನ್ನು ಸರಿಯಾದ ಕ್ರಮದಲ್ಲಿ ಮಕ್ಕಳು ಪಾರಾಯಣ ಮಾಡಿದರು.

ಇದೇ ಸಂದರ್ಭದಲ್ಲಿ ತಾಯಂದಿರ ತ್ಯಾಗಸೇವೆಯ ಅರಿವನ್ನು ಮೂಡಿಸಿದ ಮೌನೇಶ್ ಶರ್ಮ ಅವರ ಮಾರ್ಗದರ್ಶನದಲ್ಲಿ ಮಕ್ಕಳು ತಮ್ಮ ತಮ್ಮ ತಾಯಂದಿರ ಪಾದಪೂಜೆ ಮಾಡುತ್ತಾ ಮಾತೃಪೂಜನಾ ಕಾರ್ಯಕ್ರಮ ನೆರವೇರಿಸಿದರು.

ತಾಯಿ ಮತ್ತು ತಾಯ್ನಾಡು ಅನ್ನುವ ಪರಿಕಲ್ಪನೆಯನ್ನು ಹೊಂದಿದ್ದ ಈ ಕಾರ್ಯಕ್ರಮದಲ್ಲಿ ತಾಯ್ನಾಡಿನ ರಕ್ಷಣೆ ಮಾಡುತ್ತಿರುವ ವೀರಯೋಧ ರತ್ನಾಕರ ರೈಯವರನ್ನು ಗೌರವಿಸಲಾಯಿತು. ಆ ಬಳಿಕ ದೇಶಪ್ರೇಮ ಮತ್ತು ಸಂಸ್ಕಾರದ ಕುರಿತಾಗಿ ಯತೀಶ್ ಆರ್ವಾರ್ ಇವರು ಬೌದ್ಧಿಕ್ ನೀಡಿದರು.

ಮಾತಾಜಿ ತ್ರಿವೇಣಿ ವಿಶ್ವೇಶ್ವರ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಾಹ್ನವಿ ಕಾಂಚೋಡು ಧನ್ಯವಾದ ಸಮರ್ಪಿಸಿದರು.
ಲೋಕೇಶ್ ಮಾಸ್ತರ್, ಹರಿಣಾಕ್ಷಿ ಬರೆಮೇಲು ಹಾಗೂ ಸತ್ಯಸಾಯಿ ಸಮಿತಿಯವರು ಸಹಕಾರ ನೀಡಿದರು. ಹಿರಿಯ ಸ್ವಯಂ ಸೇವಕರಾದ ನಾರಾಯಣ ಆಚಾರ್ಯ, ವಿಶ್ವೇಶ್ವರ ಪುರೋಹಿತ್ ಮತ್ತು ಶಿಬಿರಾರ್ಥಿಗಳ ತಾಯಂದಿರು ಉಪಸ್ಥಿತರಿದ್ದರು.