ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆ ವತಿಯಿಂದ ಸ್ಥಾಪಕರಾದ ದಿ. ಉಪೇಂದ್ರ ಸುಬ್ರಾಯ ಕಾಮತ್ ಅವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಸಲ್ಲಿಕೆ

0

ಕಾಮತರು ಶಾಲೆ ಮತ್ತು ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದ ಧೀಮಂತ ವ್ಯಕ್ತಿ : ಎನ್. ಗೋಪಾಲರಾವ್

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯ ಸ್ಥಾಪಕರಾದ ದಿ. ಕೆ. ಉಪೇಂದ್ರ ಸುಬ್ರಾಯ ಕಾಮತ್ ಅವರಿಗೆ ವಿದ್ಯಾಸಂಸ್ಥೆಯ ವತಿಯಿಂದ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಮೇ.12ರಂದು ಬೆಳಿಗ್ಗೆ ವಿದ್ಯಾಸಂಸ್ಥೆಯ ವಠಾರದಲ್ಲಿ ಜರುಗಿತು.

ಶಾಲಾ ಆಡಳಿತಾಧಿಕಾರಿ ಎನ್. ಗೋಪಾಲರಾವ್ ಅವರು ಮಾತನಾಡಿ 1981ರಲ್ಲಿ ನನಗೆ ಉಪೇಂದ್ರ ಕಾಮತರ ಪರಿಚಯವಾಯಿತು. 2012ರಲ್ಲಿ ನಾನು ಈ ವಿದ್ಯಾಸಂಸ್ಥೆಗೆ ಸೇರಿದ ಮೇಲೆ ನಮ್ಮ ನಡುವಿನ ಬಾಂಧವ್ಯ ಗಟ್ಟಿಯಾಯಿತು. ಕಾಮತರು ಯಾವಾಗಲೂ ಶಾಲೆ, ಮಕ್ಕಳು, ಶಿಕ್ಷಕರ ಬಗ್ಗೆ ನನ್ನಲ್ಲಿ ವಿಚಾರಿಸುತ್ತಿದ್ದರು. ಯಾಕೆಂದರೆ ಶಾಲೆ ಮತ್ತು ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿ ಇಟ್ಟುಕೊಂಡಿದ್ದ ಧೀಮಂತ ವ್ಯಕ್ತಿತ್ವ ಉಪೇಂದ್ರ ಕಾಮತರದ್ದು ಎಂದು ಹೇಳಿ, ನುಡಿನಮನ ಸಲ್ಲಿಸಿದರು.

ಪ್ರಾಥಮಿಕ ಶಾಲಾ ವಿಭಾಗದ ಎಸ್.ಡಿ.ಎಂ.ಸಿ. ಸದಸ್ಯ ಶಿವಪ್ರಸಾದ್ ಉಗ್ರಾಣಿಮನೆ ಮಾತನಾಡಿ ಸಮಾಜದ ಪ್ರತಿಯೊಂದು ವಿಭಾಗದಲ್ಲಿ ಕೊಡುಗೈದಾನಿಯಾಗಿ ಸೇವೆ ಸಲ್ಲಿಸಿದ ಉಪೇಂದ್ರ ಕಾಮತ್ ಅವರು ಸಾವಿರಾರು ಮಂದಿಗೆ ಉದ್ಯೋಗ ಹಾಗೂ ಶಿಕ್ಷಣ ನೀಡಿದವರು ಎಂದು ಹೇಳಿದರು.

ರಾಷ್ಟ್ರೋತ್ಥಾನ ಶಿಶುಮಂದಿರದ ಪೋಷಕ ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಂಮನೆ ಅವರು ಮಾತನಾಡಿ ಉಪೇಂದ್ರ ಕಾಮತರು ಶಾಲೆ ಮತ್ತು ಸಮಾಜಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾದುದಾಗಿದ್ದು, ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ಮಾಡಬೇಕು ಎಂದು ಹೇಳಿದರು.

ಪ್ರಾಥಮಿಕ ಶಾಲಾ ವಿಭಾಗದ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ರವಿರಾಜ್ ಗಬ್ಬಲಡ್ಕ ಅವರು ಮಾತನಾಡಿ ಉಪೇಂದ್ರ ಕಾಮತರು ವಿನೋಬನಗರಕ್ಕೆ ಬಂದು ಅಡ್ಕಾರು ಸುಬ್ರಹ್ಮಣ್ಯ ದೇವಸ್ಥಾನ, ಗೇರುಬೀಜ ಉದ್ಯಮ ಮತ್ತು ವಿವೇಕಾನಂದ ಶಾಲೆಯನ್ನು ಬಹಳಷ್ಟು ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೇಳಿದರು.

ವಿದ್ಯಾಸಂಸ್ಥೆಯ ಅಡುಗೆ ಸಿಬ್ಬಂದಿ ಶ್ರೀಮತಿ ಶಾಲಿನಿ ಅವರು ಮಾತನಾಡಿ ಉಪೇಂದ್ರ ಕಾಮತರು ವಿವೇಕಾನಂದ ವಿದ್ಯಾಸಂಸ್ಥೆಯನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದ್ದಾರೆ ಎಂದು ಹೇಳಿದರು.
ಸಹಶಿಕ್ಷಕಿ ಶ್ರೀಮತಿ ವಾಣಿ ಅವರು ಮಾತನಾಡಿ ಉಪೇಂದ್ರ ಕಾಮತರು ಕಾರ್ಖಾನೆ, ದೇವಸ್ಥಾನ ಹಾಗೂ ವಿದ್ಯಾಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸುವ ಮೂಲಕ ನಮ್ಮಂತಹ ಹಲವಾರು ಮಂದಿಗೆ ಉದ್ಯೋಗ ನೀಡಿದ್ದಾರೆ ಎಂದು ಹೇಳಿದರು. ಇನ್ನೋರ್ವ ಶಿಕ್ಷಕಿ ಶ್ರೀಮತಿ ಪಾವನ ಅವರು ಮಾತನಾಡಿ ಉಪೇಂದ್ರ ಕಾಮತ್ ಅವರು ಶಾಂತಸ್ವಭಾವದ ವ್ಯಕ್ತಿ. ಊರಿನ ಅಭಿವೃದ್ಧಿಗಾಗಿ ಈ ಊರಿನ ಜನರಿಗೆ ಉದ್ಯೋಗ ನೀಡಿ ನಮ್ಮೆಲ್ಲರಿಗೆ ಅನ್ನದಾತರಾಗಿದ್ದರು ಎಂದು ಹೇಳಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಅವರು ಮಾತನಾಡಿ ಕಾಮತರು ಮೃದುಸ್ವಭಾವದ ವ್ಯಕ್ತಿಯಾಗಿದ್ದು, ಸಮಾಜಮುಖಿ ಹೋರಾಟವನ್ನು ಮಾಡಿದವರು. ಶಿಶುಮಂದಿರದಿಂದ ಹಿಡಿದು ಪ್ರೌಢಶಾಲೆಯವರೆಗೆ ವಿದ್ಯಾಸಂಸ್ಥೆ ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ನೀಡಿದ್ದಾರೆ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ಅವರು ಮಾತನಾಡಿ ನಾನು ಶಾಲೆಯ ಕೆಲಸ ಕಾರ್ಯದ ನಿಮಿತ್ತ ಪ್ರತೀಬಾರಿ ಗೇರುಬೀಜ ಫ್ಯಾಕ್ಟರಿಗೆ ಹೋದಾಗ ಅಲ್ಲಿ ಇರುತ್ತಿದ್ದ ಉಪೇಂದ್ರ ಕಾಮತ್ ಅವರು ಶಾಲಾ ಮಕ್ಕಳ ಸಂಖ್ಯೆ ಹೇಗಿದೆ. ತರಗತಿಗಳು ಹೇಗೆ ನಡೆಯುತ್ತಿದೆ ಎಂಬುದನ್ನು ಕೇಳುತ್ತಿದ್ದರು. ಅವರೊಬ್ಬ ಮಿತಭಾಷಿ ವ್ಯಕ್ತಿತ್ವದವರಾಗಿದ್ದರು ಎಂದು ಹೇಳಿದರು.

ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ‌. ಗೋಪಾಲಕೃಷ್ಣ ಭಟ್ ಅವರು ಮಾತನಾಡಿ ಜಾತಿ ಮತ ಬೇಧವಿಲ್ಲದೆ ಎಲ್ಲರೊಂದಿಗೆ ಅತ್ಯಂತ ಆತ್ಮೀಯತೆಯಿಂದ ಇದ್ದ ವ್ಯಕ್ತಿ ಉಪೇಂದ್ರ ಕಾಮತ್ ಅವರಾಗಿದ್ದು, ತಮ್ಮ ನಗುಮುಖದಿಂದಲೇ ಎಲ್ಲರನ್ನು ಮಾತನಾಡಿಸುತ್ತಿದ್ದ ವ್ಯಕ್ತಿ ಎಂದು ಹೇಳಿದರು.

ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉಪೇಂದ್ರ ಕಾಮತ್ ಅವರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಸಂಚಾಲಕರಾದ ಸುಧಾಕರ ಕಾಮತ್ ಅವರು ಮಾತನಾಡಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ ನೂರು ಪ್ರತಿಶತ ಸಾಧನೆ ಮಾಡುವ ಮೂಲಕ ವಿವೇಕಾನಂದ ವಿದ್ಯಾಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ತಾಲೂಕಿನಲ್ಲಿ ವಿದ್ಯಾಸಂಸ್ಥೆಯ ಹೆಸರಿಗೆ ಕೀರ್ತಿ ತಂದಿದ್ದಾರೆ. ಇದುವೇ ಸ್ಥಾಪಕರಾದ ದಿ. ಉಪೇಂದ್ರ ಕಾಮತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ರಾಷ್ಟ್ರೋತ್ಥಾನ ಶಿಶುಮಂದಿರ, ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹಶಿಕ್ಷಕರು, ಶಾಲಾ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ಶಾಲಾ ವಾಹನ ಚಾಲಕರುಗಳು, ಅಡುಗೆ ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ದಿ. ಕೆ. ಉಪೇಂದ್ರ ಸುಬ್ರಾಯ ಕಾಮತ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.