ವೈದ್ಯರ ಮೇಲೆ ಕೆಆರ್‌ಎಸ್ ಪಕ್ಷ ಅನುಚಿತ ವರ್ತನೆ ತೋರಿದೆಯೆಂದು ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆ ಖಂಡನೆ

0

ಕೆಆರ್‌ಎಸ್ ಪಕ್ಷದ ಕಾರ್ಯಕರ್ತರೆಂದು ಹೇಳಿಕೊಂಡು ಕೆಲವರು ಸುಳ್ಯ ಸರಕಾರಿ ಆಸ್ಪತ್ರೆಗೆ ಬಂದು ಆಸ್ಪತ್ರೆಯ ಕರೆಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಹೆರಿಗೆ ತಜ್ಞೆ ಡಾ.ವೀಣಾರವರಿಗೆ ನಿಂದನೆಯ ಮಾತುಗಳನ್ನಾಡಿ ಅನುಚಿತ ವರ್ತನೆ ತೋರಿದ್ದಾರೆಂದು ಸುಳ್ಯ ಐಎಂಎ ಖಂಡನೆ ವ್ಯಕ್ತಪಡಿಸಿದೆ.

ಮೇ. ೨೦ರಂದು ತುರ್ತು ಸಭೆ ಸೇರಿದ ಐಎಂಎ ಸದಸ್ಯರು ಖಂಡನಾ ನಿರ್ಣಯ ಕೈಗೊಂಡಿದ್ದು, “ಭಾರತೀಯ ವೈದ್ಯಕೀಯ ಸಂಘವು ವೃತ್ತಿಪರರ ಸಂಘವಾಗಿದ್ದು, ಎಲ್ಲಾ ಸದಸ್ಯರು ವೃತ್ತಿ ನಿಷ್ಠೆಯಿಂದ ವೃತ್ತಿ ನಿರ್ವಹಿಸುತ್ತಿದ್ದಾರೆ. ವೈದ್ಯಕೀಯ ವೃತ್ತಿಯ ನಿಯಂತ್ರಣಕ್ಕಾಗಿ ಕರ್ನಾಟಕ ವೈದ್ಯಕೀಯ ಪರಿಷತ್ ಕಾರ್ಯನಿರ್ವಹಿಸುತ್ತಿದೆ. ವೈದ್ಯರ ಮೇಲಿನ ಆರೋಪಗಳಿದ್ದಲ್ಲಿ ವೈದ್ಯಕೀಯ ಪರಿಷತ್‌ಗೆ ದೂರು ಸಲ್ಲಿಸಬೇಕೆ ಹೊರತು ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಸುವುದು ಸರಿಯಲ್ಲ. ಈ ರೀತಿಯ ಪ್ರಕರಣಗಳಿಂದ ರೋಗಿಗಳಿಗೆ ವೈದ್ಯರ ಮೇಲೆ ವಿಶ್ವಾಸ ಕುಗ್ಗಲಿದೆ.

ಅಲ್ಲದೆ ಚಿಕಿತ್ಸೆ ನೀಡುವ ವೈದ್ಯರಿಗೆ ಮಾನಸಿಕ ಹಿಂಸೆಯೂ ಆಗುತ್ತದೆ. ಸುಳ್ಯದಲ್ಲಿ 25 ವರ್ಷಗಳಿಂದ ಹಾಗೂ ೧೦ ವರ್ಷಗಳಿಂದ ಸರಕಾರಿ ಆಸ್ಪತ್ರೆಯಲ್ಲಿ ಕರೆಯ ಮೇರೆಗೆ ಸೇವೆ ಸಲ್ಲಿಸುತ್ತಿರುವ ಹಿರಿಯ ಸ್ತ್ರೀರೋಗ ತಜ್ಞರ ಮೇಲೆ ಮಾಡಿರುವ ಈ ಆಧಾರ ರಹಿತ ಆರೋಪವನ್ನು ಐಎಂಎ ಸದಸ್ಯರು ಖಂಡಿಸುತ್ತೇವೆ” ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ತುರ್ತುಸಭೆಯಲ್ಲಿ ಡಾ. ಕರುಣಾಕರ ಕೆ.ವಿ. ಡಾ. ಸದಾಶಿವ ರಾವ್, ಡಾ. ಜಯಪ್ರಸಾದ್ ಪಾರೆ, ಡಾ. ಭವಾನಿಶಂಕರ್, ಡಾ. ಅಮಿತ್‌ಕುಮಾರ್, ಡಾ. ಕೆ.ಕೆ. ಗಣೇಶ್, ಡಾ. ರವಿಕಾಂತ್, ಡಾ. ಗೀತಾ ದೊಪ್ಪ, ಡಾ. ಸೌಮ್ಯ, ಡಾ. ಅರ್ಚನಾ, ಡಾ. ರಜನಿ, ಡಾ. ಸುಬ್ರಹ್ಮಣ್ಯ ಎಂ.ಪಿ., ಡಾ. ರೋಶನ್ ಎಸ್.ಡಿ., ಡಾ. ಮಹೇಶ್ ಬಾಬು, ಡಾ. ವಿಫುಲ್‌ಚಂದ್ರ ವೈ, ಡಾ. ಭವ್ಯ ಉಪಸ್ಥಿತರಿದ್ದರು.