ಮಂಡೆಕೋಲು : ಮನೆಯಲ್ಲಿ ನೋಡಿಕೊಳ್ಳುತ್ತಿಲ್ಲವೆಂಬ ದೂರು

0

ವೃದ್ಧ ತಾಯಿಯನ್ನು ಮನೆ ಸೇರಿಸಿದ ತಹಶೀಲ್ದಾರ್

ಮನೆಯಲ್ಲಿ ಮಗ ನೋಡಿಕೊಳ್ಳುತ್ತಿಲ್ಲ, ಮನೆ ಸೇರಿಸುತ್ತಿಲ್ಲವೆಂದು ತಹಶೀಲ್ದಾರ್ ರಿಗೆ ವೃದ್ಧೆಯೊಬ್ಬರ ದೂರು‌ ಹೋಗಿ, ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮನೆಗೆ ಹೋಗಿ ಮಗನ ಮನವೊಲಿಸಿ ಮನೆ ಸೇರಿಸಿದ ಘಟನೆ ಇಂದು ನಡೆದಿದೆ.

ಮಂಡೆಕೋಲು ಗ್ರಾಮದ ಕಲ್ಲಡ್ಕ – ಪೆರಾಜೆಯ ಶೇಷಮ್ಮ ಎಂಬವರು ತಹಶೀಲ್ದಾರ್ ರಿಗೆ ಈ ದೂರು ನೀಡಿದ್ದರು. ಸಾಮಾಜಿಕ ಕಾರ್ಯಕರ್ತೆ ಸರಸ್ವತಿ ಕಾಮತ್ ಅವರು ಕೂಡಾ ಈ ಸಮಸ್ಯೆಯ ಕುರಿತು ತಹಶೀಲ್ದಾರ್ ಗಮನಕ್ಕೆ ತಂದಿದ್ದರು.

ನನಗೆ ಅಸೌಖ್ಯವಿದೆ. ನಾನು ಮಗಳ ಮನೆಯಲ್ಲಿದ್ದೇನೆ. ನನಗೆ ನನ್ನ ಮನೆಗೆ ಹೋಗಬೇಕು ಎಂಬಿತ್ಯಾದಿ ವಿಚಾರಗಳಿರುವ ದೂರನ್ನು ಅವರು ನೀಡಿದ್ದರು.

ಈ ದೂರು ಸ್ವೀಕರಿಸಿದ ತಹಶೀಲ್ದಾರ್ ಜಿ. ಮಂಜುನಾಥ್ ಅವರು, ತಾ.ಪಂ. ಇ.ಒ. ಪರಮೇಶ್, ಸಿಡಿಪಿಒ ಶೈಲಜಾ, ಮಂಡೆಕೋಲು ಪಿಡಿಒ ರಮೇಶ್, ಮಂಡೆಕೋಲು ಗ್ರಾಮ ಆಡಳಿತಾಧಿಕಾರಿ ಅಜಯ್ ಹಾಗೂ ಶೇಷಮ್ಮರ ಮೂವರು ಪುತ್ರಿಯರಿದ್ದು ತಾಲೂಕು ಕಚೇರಿಯಲ್ಲಿ ಸಮಾಲೋಚನೆ ನಡೆಸಿದರು.

ತಾಯಿಗೆ ಮನೆಗೆ ಹೋಗಬೇಕಂತೆ, ಅಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಅವರ ಮನೆಗೆ ಹೋದರೆ ಅಲ್ಲಿ ಅವರ ಕೆಲಸ ನಾವೇ ಮಾಡುತ್ತೇವೆ ಎಂದು ಹೆಣ್ಣು ಮಕ್ಕಳು ಹೇಳಿದರು. ಬಳಿಕ ಶೇಷಮ್ಮರನ್ನು ಕರೆದುಕೊಂಡು ತಹಶೀಲ್ದಾರ್ ನೇತೃತ್ವದ ತಂಡ ಮಂಡೆಕೋಲು ಕಲ್ಲಡ್ಕ ಪೆರಾಜೆಯ ಅವರ ‌ಮನೆಗೆ ತೆರಳಿದರು.

ಅಲ್ಲಿ ಶೇಷಮ್ಮರ ಮಗ, ಸೊಸೆ ಇದ್ದರು. ಅಲ್ಲಿ ಸುದೀರ್ಘ ಸಮಾಲೋಚನೆ ನಡೆಯಿತು. ಈ ವಿಚಾರದಲ್ಲಿ ಈ ಮೊದಲೇ ಸಿಡಿಪಿಒ ಹಂತದಲ್ಲಿ ವಿಚಾರಣೆ ನಡೆದಿದೆ. ಯಾಕೆ ಸಮಸ್ಯೆಯಾಯಿತು ಎಂಬುದನ್ನೆಲ್ಲ ಆಗ ಹೇಳಿದ್ದೇವೆ ಎಂದು ಮಗ ಹೇಳಿದರೆ, ನನ್ನ ಮೇಲೆ ಸುಮ್ಮನೆ ಅಪವಾದ ಹೊರಿಸಿದ್ದಾರೆ ಎಂದು ಸೊಸೆ ಹೇಳಿದರು.

ತಹಶೀಲ್ದಾರ್ , ಇ.ಒ ಹಾಗೂ ಸರಸ್ವತಿ ಕಾಮತ್ ವಯೋವೃದ್ಧ ತಾಯಿಯನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಕುರಿತು ತಿಳಿ ಹೇಳಿ ಮನವೊಲಿಸುವ ಕಾರ್ಯ ಮಾಡಿದರಲ್ಲದೆ ಅವರ ಮೂವರು ಸಹೋದರಿಯರಿಗೂ ತಿಳುವಳಿಕೆಯ ಮಾತುಗಳನ್ನಾಡಿದರು. ತಾಯಿಯನ್ನು ಮನೆಯೊಳಗೆ ಕರೆದುಕೊಂಡು ಹೋಗಲಾಯಿತು.

ಅವರ ಆರೈಕೆ ಮಾಡಲು ಮದುವೆಯಾಗಿರುವ ಮೂವರು ಹೆಣ್ಣು ಮಕ್ಕಳು ಮನೆಯಲ್ಲೆ ಒಬ್ಬರಂತೆ ಇದ್ದು ನೋಡಿಕೊಳ್ಳುವುದಾಗಿ ತಹಶೀಲ್ದಾರ್ ಎದುರು ಹೇಳಿದರು.

ಆ ಮೂಲಕ ಕೌಟುಂಬಿಕ ವಿವಾದವೊಂದನ್ನು ‌ಸಮಾಲೋಚನೆ ನಡೆಸಿ ಇತ್ಯರ್ಥ ಪಡಿಸುವಲ್ಲಿ ತಹಶೀಲ್ದಾರ್ ನೇತೃತ್ವದ ತಂಡ ಮುಂದಾಯಿತು.