ಹೆಚ್ಚುತ್ತಿದೆ ಇ-ಸಿಗರೇಟಿನ ಹುಚ್ಚು
ಧೂಮಪಾನ ವಿಷಪಾನ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸಾಂಪ್ರದಾಯಿಕ ಧೂಮಪಾನದಲ್ಲಿ ಬೀಡಿ, ಸಿಗರೇಟು ಮುಂತಾದವುಗಳ ಮುಖಾಂತರ ತಂಬಾಕು ಉತ್ಪನ್ನಗಳನ್ನು ಉರಿಸಿ ಅದರಿಂದ ಬಂದ ನಿಕೋಟಿನ್ ಸ್ವಾದಯುಕ್ತ ಹೊಗೆಯನ್ನು ಜನರು ಆಸ್ವಾದಿಸುತ್ತಾ ಏನೋ ವಿಚಿತ್ರವಾದ ಸುಖವನ್ನು ಅನುಭವಿಸುತ್ತಾರೆ. ಧೂಮಪಾನದ ಹೊಗೆಯಲ್ಲಿ ಸಾವಿರಾರು ಕ್ಯಾನ್ಸರ್ ಕಾರಕ ವಿಷಾನಿಲಗಳು ಇದೆಯೆಂದು ತಿಳಿದಿದ್ದರೂ ಜನರು ಅಲ್ಪ ಸಮಯದ ಸಂತಸಕ್ಕಾಗಿಯೋ, ಮೋಜಿಗಾಗಿಯೋ ಅಥವಾ ಇನ್ನಾವುದೇ ಕಾರಣಕ್ಕಾಗಿಯೋ ಸಾಂಪ್ರದಾಯಿಕ ಬೀಡಿ ಸಿಗರೇಟಿನ ದಾಸರಾಗುತ್ತಿರುವುದು ಬಹಳ ನೋವಿನ ವಿಚಾರ.
ತಂಬಾಕು ಉತ್ಪನ್ನಗಳಿಂದ ಬಾಯಿ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯಾಘಾತ ಮುಂತಾದ ಮಾರಣಾಂತಿಕ ರೋಗ ಬರುತ್ತದೆ ಎಂದು ಎಂದೋ ಜಗಜ್ಜಾಹೀರಾಗಿದ್ದರೂ ಜನರು “ಇರುಳು ಕಂಡ ಬಾವಿಗೆ ಹಗಲು ಬೀಳುವಂತೆ” ಸಿಗರೇಟಿನ ಚಟಕ್ಕೆ ದಾಸರಾಗುವುದು ಬಹಳ ವಿಷಾದನೀಯ ವಿಚಾರ. ಚಟ ಚಟ್ಟವನ್ನು ಹತ್ತಿಸುತ್ತದೆ ಎಂಬ ಕಹಿ ಸತ್ಯದ ಅರಿವಿದ್ದರೂ ತನ್ನ ಕ್ಷಣಿಕ ಚಪಲಕ್ಕಾಗಿ, ತಂಬಾಕು ಸೇವಿಸುವ ಧೂಮಪಾನಿಗಳ ಸಂಖ್ಯೆ ಬಹಳಷ್ಟು ಇದೆ. ಇಂತಹ ತಂಬಾಕು ನಿಷ್ಟ ಧೂಮಪಾನಿಗಳಿಗೀಗ ಸಿಹಿ ಸುದ್ದಿ ಬಂದಿದೆ. ಅದುವೇ ಇ- ಸಿಗರೇಟು ಎಂಬ ಆಧುನಿಕ ಇಲೆಕ್ಟ್ರಾನಿಕ್ ಸಿಗರೇಟು ಎಂದರೂ ತಪ್ಪಾಗಲಿಕ್ಕಿಲ್ಲ.
ಏನಿದು ಎಲೆಕ್ಟ್ರಾನಿಕ್ ಸಿಗರೇಟು?
ಇದೊಂದು ಇಲೆಕ್ಟ್ರಾನಿಕ್ ಬ್ಯಾಟರಿ ಚಾಲಿತ ಯಂತ್ರವಾಗಿದ್ದು ಅದರೊಳಗಿನ ದ್ರಾವಣವನ್ನು ಬಿಸಿಯಾಗಿಸಿದಾಗ, ದ್ರಾವಣ ಹದೆಯಾಗಿ ಮಾರ್ಪಪಡುತ್ತದೆ. ಯಂತ್ರದೊಳಗಿನ ದ್ರಾವಣವನ್ನು ಇ-ದ್ರಾವಣ ಎಂದೂ ಕರೆಯುತ್ತಾರೆ. ಇ-ದ್ರಾವಣದಲ್ಲಿ ನಿಕೋಟಿನ್, ನೀರು, ಗ್ಲಿಸರೀನ್, ಪಾಪಿಲೀನ್, ಗ್ಲೆಕೋಲ್ ಮತ್ತು ಸುಗಂಧಯುಕ್ತ ವಸ್ತು ಇರುತ್ತದೆ. ಕೆಲವೊಂದು ದ್ರಾವಣಗಳು ನಿಕೋಟಿನ್ ಮುಕ್ತವಾಗಿರುತ್ತದೆ. ದ್ರಾವಣವನ್ನು ಬಿಸಿಯಾಗಿಸಿದಾಗ ಸುಗಂಧಯುಕ್ತ ಹೊಗೆ ಮತ್ತು ನಿಕೋಟಿನ್‍ಯುಕ್ತ ಹೊಗೆ ಬಿಡುಗಡೆಯಾಗಿ, ವ್ಯಸನಿಗಳಿಗೆ ಧೂಮಪಾನ ಮಾಡಿದ ಅನುಭವ ಉಂಟಾಗುತ್ತದೆ.
ಹೇಗೆ ಸೇದುವುದು?
ಈ ಬ್ಯಾಟರಿಚಾಲಿತ ಯಂತ್ರದಲ್ಲಿನ ಅಟೋಮೈಜರ್ ಗೆ ಒಂದು ಸಣ್ಣ ಕಾಯಿಸುವ ಸಾಧನವನ್ನು ಕಾಯಿಲ್‍ನ ರೂಪದಲ್ಲಿ ಅಳವಡಿಸಲಾಗುತ್ತದೆ. ಈ ಯಂತ್ರದ ಮೇಲ್ಗಾಗದಲ್ಲಿರುವ ಸೆನ್ಸಾರ್ ಗುಂಡಿಯನ್ನು ಒತ್ತಿದಾಗ, ಕಾಯಿಲ್ ಕಾದು ಇ-ದ್ರಾವಣದ ಮೇಲೆ ಪರಿಣಾಮ ಬೀರುತ್ತದೆ. ಇ-ದ್ರಾವಣ 100ರಿಂದ 250 ಡಿಗ್ರಿ ಸೆಂಟಿಗ್ರೇಡ್ ವರೆಗೆ ಕಾದಾಗ ಸುಗಂಧಯುಕ್ತ, ನಿಕೋಟಿನ್ ಸ್ವಾದದ ಹಬೆಯನ್ನು ಹೊರಸೂಸುತ್ತದೆ. ಅದನ್ನು ಬಳಕೆದಾರ ಗಂಟಲಿಗೆಳೆದುಕೊಂಡು ಹೊರಕ್ಕೆಉಗುಳಿದಾಗ ದಟ್ಟವಾದ ಹೊಗೆ ಬರುತ್ತದೆ. ಅದು ತಂಬಾಕುವಿನ ಸ್ವಾದ ಅಥವಾ ತಂಬಾಕು ಸೇವಿಸಿದ ತೃಪ್ತಿಯ ಅನುಭವವನ್ನು ನೀಡುತ್ತದೆ.
ಇ-ಸಿಗರೇಟಿನ ಪ್ರಯೋಜನಗಳು ಏನು?
- ಇ- ಸಿಗರೇಟಿನಲ್ಲಿ ಇರುವ ಹೊಗೆ ಮಾಮೂಲಿ ಸಿಗರೇಟಿನ ಹೊಗೆಗಿಂತ ಜಾಸ್ತಿ ಇದ್ದರೂ, ಬೇಗನೇ ವಾತಾವರಣದಲ್ಲಿ ಲೀನವಾಗುತ್ತದೆ. ಮತ್ತು ವಾಯುಮಾಲಿನ್ಯ ಉಂಟುಮಾಡುವುದಿಲ್ಲ.
- ಇ-ಸಿಗರೇಟಿನಲ್ಲಿ ನೂರಕ್ಕೂ ಹೆಚ್ಚು ಬಗೆಯ ಸ್ವಾದ ಮತ್ತು ಸುವಾಸನೆಗಳಿರುವುದರಿಂದ ಪರಿಮಳಯುಕ್ತವಾಗಿತುತ್ತದೆ. ನಿಕೋಟಿನ್‍ಮುಕ್ತ ಮತ್ತು ನಿಕೋಟಿನ್‍ಯುಕ್ತ ಇ-ಸಿಗರೇಟುಗಳು ಲಭ್ಯವಿದೆ.
- ಸಾಂಪ್ರದಾಯಿಕ ಧೂಮಪಾನಗಳಿಂದ ಪ್ಯಾಸಿಮ್ ಸ್ಮೊಕರ್ ಗಳಿಗೆ ಬಹಳಷ್ಟು ಕಿರಿ ಕಿರಿ ಯಾಗುತ್ತದೆ. ಆದರೆ ಇ-ಸಿಗರೇಟಿನಿಂದ ಅಷ್ಟು ಕಿರಿ ಕಿರಿಯಾಗುವುದಿಲ್ಲ.
- ಸಾಂಪ್ರದಾಯಿಕ ಸಿಗರೇಟಿಗಿಂತ ಇ-ಸಿಗರೇಟು ಸುರಕ್ಷಿತ. ಆದರೆ ಇ-ಸಿಗರೇಟು ಸಂಪೂರ್ಣ ಸುರಕ್ಷಿತ ಎಂದು ಇನ್ನೂ ಸಾಬಿತಾಗಿಲ್ಲ. ದಿನವೊಂದಕ್ಕೆ 30 ರಿಂದ 40 ಸಿಗರೇಟು ಸೇದುವ ವ್ಯಸನಿಗಳ ಚಟ ಬಿಡಿಸಲು ಇ-ಸಿಗರೇಟು ಬಳಸಬಹುದು ಮತ್ತು ಶ್ವಾಸ ಕೋಶಕ್ಕೆ ಆಗುವ ಹೆಚ್ಚಿನ ಹಾನಿ ತಡೆಯಬಹುದು.
- ಸಾಂಪ್ರದಾಯಿಕ ಸಿಗರೇಟಿಗೆ ಹೆಚ್ಚಿನ ವೆಚ್ಚ ತಗಲುತ್ತದೆ. ದಿನವೊಂದಕ್ಕೆ 20 ಸಿಗರೇಟು ಸೇದುವವನಿಗೆ 200 ರಿಂದ 300 ರೂ ಅಗತ್ಯ. ಆದರೆ ಇ-ಸಿಗರೇಟು ಆರಂಭದಲ್ಲಿ ಒಮ್ಮೆ ದುಬಾರಿ ಎನಿಸಿದರೂ, ಅದರ ಬಳಕೆಯ ವೆಚ್ಚ ಬಹಳ ಕಡಿಮೆ.
ಕೊನೆಮಾತು
ಇತ್ತೀಚಿನ ದಿನಗಳಲ್ಲಿ, ತಂಬಾಕುವಿನ ಸಿಗರೇಟು ಸೇವನೆಯ ಚಟದಿಂದ ಮುಕ್ತರಾಗಲು ಇ-ಸಿಗರೇಟಿನ ಮೊರೆ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಇದರ ಮಾರಾಟಕ್ಕೆ ನಿಷೇಧವಿದ್ದರೂ, ಯುವ ಜನರು ಆನ್‍ಲೈನ್ ಮುಖಾಂತರ ತರಿಸಿ ಕೊಳ್ಳುತ್ತಿದ್ದಾರೆ. 2003 ರಲ್ಲಿ ಚೈನಾದ ಹಾನ್‍ಲಿಕ್ ಎಂಬ ಪಾರ್ಮಸಿಸ್ಟ್ (ಔಷಧಿ ವಿಜ್ಞಾನಿ) ಇ-ಸಿಗರೇಟನ್ನು ಕಂಡುಹಿಡಿದ. 2004 ರಿಂದ ಜಗತ್ತಿನಾದ್ಯಂತ ಇದರ ಲಭ್ಯತೆ ಆರಂಭವಾಗಿದ್ದರೂ ಹೆಚ್ಚಿನ ಎಲ್ಲಾ ಇ-ಸಿಗರೇಟು ಉತ್ಪಾದನೆ ಚೈನಾ ದೇಶದಲ್ಲಿಯೇ ಆಗುತ್ತಿದೆ. ಶೇಕಡಾ 90 ರಷ್ಟು ಉತ್ಪಾದನೆ ಚೈನಾ ದೇಶವೊಂದರಲ್ಲಿಯೇ ಆಗುತ್ತದೆ.
ಆದರೆ ಇ-ಸಿಗರೇಟಿನ ಅತೀ ಹೆಚ್ಚು ಬಳಕೆದಾರರು ಅಮೇರಿಕಾ ಮತ್ತು ಇಂಗ್ಲೆಡ್ ದೇಶದಲ್ಲಿ ಕಂಡುಬರುತ್ತದೆ. ಹಣ ಉಳಿತಾಯ, ಸಾಂಪ್ರದಾಯಿಕ ಧೂಮಪಾನದ ಚಟ ಬಿಡುವುದಕ್ಕಾಗಿ ಮತ್ತು ದೇಹದ ಆರೋಗ್ಯದ ಹಿತ ದೃಷ್ಟಿಯಿಂದ ಹೆಚ್ಚು ಹೆಚ್ಚು ಯುವ ಜನರು ಮತ್ತು ಸಾಂಪ್ರದಾಯಿಕ ಧೂಮಪಾನಿಗಳು ಇ-ಸಿಗರೇಟಿನ ಮೊರೆ ಹೋಗುತ್ತಿದ್ದಾರೆ. 2017 ರ ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ ವಿಶ್ವದೆಲ್ಲೆಡೆ ಸುಮಾರು 500 ಬ್ರಾಂಡ್‍ಗಳ ಇ-ಸಿಗರೇಟು, ಲಭ್ಯವಿದ್ದು ವಾರ್ಷಿಕ ಸರಾಸರಿ ಸುಮಾರು 7 ಬಿಲಿಯನ್ ಅಮೇರಿಕ ಡಾಲರ್ ಗಿಂತಲೂ ಜಾಸ್ತಿ ಇ-ಸಿಗರೇಟ್ ವಹಿವಾಟು ನಡೆಯುತ್ತದೆ. ಇ-ಸಿಗರೇಟ್‍ನಿಂದಾಗಿ ಉಂಟಾಗುವ ಹಾನಿಗಳ ಬಗ್ಗೆ ಯಾವುದೇ ದೀರ್ಘಕಾಲಿಕ ಸಂಶೋಧನೆಗಳ ಫಲಿತಾಂಶ ಲಭ್ಯವಿಲ್ಲದಿದ್ದರೂ ಸಾಂಪ್ರದಾಯಿಕ ಧೂಮಪಾನಕ್ಕಿಂತ ಇದು ಹೆಚ್ಚು ಸುರಕ್ಷಿತ ಎಂಬುವುದಂತೂ ಸತ್ಯ. ಅದೇನೇ ಇರಲಿ ಅತಿಯಾದ ಧೂಮಪಾನದ ಚಟವಿರುವವರಿಗೆ, ಚಟದ ದಾಸ್ಯದಿಂದ ಮುಕ್ತರಾಗಲು ಇ-ಸಿಗರೇಟು ಹೆಚ್ಚು ಉಪಯುಕ್ತ ಎಂಬುವುದಂತೂ ಸಾರ್ವಕಾಲಿತ ಸತ್ಯ.