ಮೇ. 30ರಂದು ಸುರಿದ ಭೀಕರ ಮಳೆಗೆ ಯೇನೆಕಲ್ಲು ಪೇಟೆಯ ಸಮೀಪದ ಹೊಳೆಯಲ್ಲಿ ಮಳೆನೀರಿನ ಹರಿವಿಗೆ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಕೆಲವು ಕಟ್ಟಡಗಳು ಅಪಾಯದ ಸ್ಥಿತಿಯಲ್ಲಿದೆ.
ಸಂಜೆ 3 ಗಂಟೆಯಿಂದ ಅಂದಾಜು 6 ಗಂಟೆಯ ತನಕ ಸುರಿದ ಈ ಭಾರೀ ಮಳೆಯಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಯೇನೆಕಲ್ಲು ಬಸ್ ನಿಲ್ದಾಣದ ಬಳಿಯಿಂದ ಇಸ್ಮಾಯಿಲ್ ರವರ ಮನೆಯ ತನಕ ಹೊಳೆಯ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಮಹಮ್ಮದ್ ರವರ ಕಟ್ಟಡ, ನಾಳ ಕುಶಾಲಪ್ಪ ಗೌಡರ ಕಟ್ಟಡ, ಗಂಗಾಧರ ಪೈಲಾಜೆಯವರ ಕಟ್ಟಡ, ಇಸ್ಮಾಯಿಲ್ ರವರ ಮನೆಯ ಹಿಂಭಾಗದ ತನಕ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ಎಲ್ಲಾ ಕಟ್ಟಡಗಳು ಅಪಾಯದ ಸ್ಥಿತಿಯಲ್ಲಿರುವುದಾಗಿ ತಿಳಿದುಬಂದಿದೆ.
ಅದಲ್ಲದೆ ಯೇನೆಕಲ್ಲು ಸರಕಾರಿ ಪ್ರೌಢಶಾಲೆಯ ಗೇಟ್ ಬಳಿ ಹರಿಯುವ ಸಣ್ಣ ತೋಡಿನಲ್ಲಿ ನೀರಿನ ಮಟ್ಟ ಏರಿಕೆಯಾಗಿ ರಸ್ತೆ ಸಂಪರ್ಕ ಕಡಿದುಹೋಗಿತ್ತು. ಕೋಟಿಗೌಡನಮನೆ, ಮಾದನಮನೆ, ಕಡಿಂಬಿಲ ಬೈಲಿನ ಭಾಗಗಳಲ್ಲಿ ನೀರು ತೊಟಕ್ಕೆ ನುಗ್ಗಿ ತೋಟ ಗದ್ದೆಯಂತಾಗಿ ಮಾರ್ಪಾಟಾಗಿತ್ತು. ಲಿಂಗಪ್ಪ ಗೌಡ ಮಲ್ಲಾರ ಎಂಬವರ ಮನೆಯ ಸಮೀಪದ ಮೋರಿ ನೀರಿನಲ್ಲಿ ಕೊಚ್ಚಿ ಹೋಗಿರುವುದಾಗಿ ತಿಳಿದುಬಂದಿದೆ.