ಸುಳ್ಯ ಗಾಂಧಿನಗರ ಕೆ.ಪಿ.ಎಸ್. ಶಾಲಾ ಪ್ರಾರಂಭೋತ್ಸವ -‌ ಮೆರವಣಿಗೆ – ಮಕ್ಕಳನ್ನು ಬರಮಾಡಿಕೊಂಡ ಶಿಕ್ಷಕರು

0

ಪೋಷಕರ ಸಭೆ – ಶಿಕ್ಷಕರ ಕೊರತೆ ಕುರಿತು ಪ್ರಸ್ತಾಪ : ಜೂ.11ರಂದು ಶಾಸಕರಿಗೆ ಮನವಿಗೆ ನಿರ್ಧಾರ

ಸುಳ್ಯ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಬೆಳಗ್ಗೆ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಮೆರವಣಿಗೆ ನಡೆಸಿ ಬ್ಯಾಂಡ್ ವಾಲಗದೊಂದಿಗೆ ಸ್ವಾಗತಿಸಿದರು.

ಪೋಷಕರ ಸಭೆ : ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಚಿದಾನಂದ ಕುದ್ಪಾಜೆಯವರ ಅಧ್ಯಕ್ಷತೆಯಲ್ಲಿ ಪೋಷಕರ ಸಭೆ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಭವಾನಿ ಕೆ.ಜಿ. ಯವರು ಮಕ್ಕಳಿಗೆ ಲೇಖನ ಸಾಮಾಗ್ರಿಯನ್ನು ಕೊಡುಗೆಯಾಗಿ ನೀಡಿದರು.

ಕಾಲೇಜು ಪ್ರಾಂಶುಪಾಲ ಅಬ್ದುಲ್ ಸಮದ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿಲಕ್ಷ್ಮೀ, ಎಸ್.ಡಿ.ಎಂ.ಸಿ. ಸದಸ್ಯರಾದ ರಾಮ್ ಮೋಹನ್, ವಿಜಯ ಇದ್ದರು.

ಶಿಕ್ಷಕರ ಕೊರತೆ : ಕೆ.ಪಿ.ಎಸ್. ಪ್ರಾಥಮಿಕ ಶಾಲೆಗೆ 16 ಶಿಕ್ಷಕರು ಬೇಕಾದಲ್ಲಿ 8 ಮಂದಿ ಇದ್ದಾರೆ. ಮೂವರು ಅತಿಥಿ ಶಿಕ್ಷಕರನ್ನು ಸರಕಾರ ನೀಡಿದ್ದು, ಇನ್ನೂ ಮೂವರು ಶಿಕ್ಷಕರನ್ನು ಎಸ್.ಡಿ.ಎಂ.ಸಿ. ವತಿಯಿಂದ ನೇಮಿಸಿ, ಅವರಿಗೆ ಸಂಬಳ ನೀಡಬೇಕಾಗುತ್ತದೆ. ಅದಕ್ಕಾಗಿ ಪೋಷಕರು ಸಹಕಾರ ನೀಡಬೇಕು ಎಂದು ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಚಿದಾನಂದರು ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಸರಕಾರದ ಶಾಲೆ ಇಲ್ಲಿ ಸರ್ಕಾರವೇ ಎಲ್ಲ ಶಿಕ್ಷಕರನ್ನು ಕೊಡಬೇಕೆಂದು ಕೆಲವು ಪೋಷಕರು ಒತ್ತಾಯಿಸಿದರು. ಜೂ.11 ರಂದು ಶಾಲೆಗೆ ಶಾಸಕರು ಭೇಟಿ ನೀಡಲಿದ್ದು ಅವರಿಗೆ ಶಿಕ್ಷಕರ ಕೊರತೆ ಸಹಿತ ಇನ್ನಿತರ ಬೇಡಿಕೆ ಕುರಿತು ಅಹವಾಲು ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಶಿಕ್ಷಕಿ ಜಯಶ್ರೀ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪದ್ಮನಾಭ ಅತ್ಯಾಡಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ದಮಯಂತಿ ವಂದಿಸಿದರು. ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.