ತಂಬಾಕು ಸೇವನೆಯಿಂದ ಆರೋಗ್ಯ ಮತ್ತು ಸಮಾಜದ ಮೇಲೂ ದುಷ್ಪರಿಣಾಮ : ನ್ಯಾಯಧೀಶೆ ಕು.ಅರ್ಪಿತಾ
ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸುಳ್ಯ ಹಾಗೂ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ಸಂಯುಕ್ತ ಆಶ್ರಯದಲ್ಲಿ ಜೂ.1ರಂದು ವಿಶ್ವ ತಂಬಾಕು ನಿಷೇಧ ದಿನ ಕುರಿತು ಕಾನೂನು ಅರಿವು ಕಾರ್ಯಕ್ರಮ ಕೆ.ಪಿ.ಎಸ್ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೇರಿಸಿದ ಸಿವಿಲ್ ನ್ಯಾಯಧೀಶರು ಹಾಗೂ ತಾಲೂಕು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಕು.ಅರ್ಪಿತಾ ರವರು ಮಾತನಾಡಿ “ತಂಬಾಕು ಸೇವೆಯಿಂದ ಆರೋಗ್ಯ ಮತ್ತು ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ.
ಇದರ ಸೇವನೆಯಿಂದ ಸೇವಿಸುವ ವ್ಯಕ್ತಿ ಮಾತ್ರವಲ್ಲದೆ ಇನ್ನೊಬ್ಬರ ಜೀವಕ್ಕೂ ಇದು ಮಾರಕವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವು ಯುವಕ ಯುವತಿಯರು ಈ ಚಟಕ್ಕೆ ಬಲಿಯಾಗುತ್ತಿದ್ದು ಇದರಿಂದ ಯುವಸಮುದಾಯ ಎಚ್ಚೆರಿಕೆಯಿಂದ ಇರಬೇಕಾಗುತ್ತದೆ. ಈ ರೀತಿಯ ಚಟಗಳು ಜೀವನದಲ್ಲಿ ಒಮ್ಮೆ ಬಂದರೂ ಮತ್ತೆ ಅದರಿಂದ ಹೊರಬರುವುದು ಕಷ್ಟವಾಗುತ್ತದೆ.
ಉತ್ತಮ ಪರಿಸರ ಮತ್ತು ಉತ್ತಮ ಜನರೊಂದಿಗೆ ಒಡನಾಟ ಬೆರೆಸಿಕೊಂಡಿದ್ದರೆ ಈ ಎಲ್ಲಾ ದುಷ್ಚಟಗಳಿಂದ ದೂರವಿರಲು, ಹಾಗೂ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಅಬ್ದುಲ್ ಸಮದ್ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ., ಕೆ.ಪಿ.ಎಸ್ ಗಾಂಧಿನಗರ ಕಾರ್‍ಯಧ್ಯಕ್ಷ ಚಿದಾನಂದ ಕಾಯರ್ತೋಡಿ, ಉಪಪ್ರಾಂಶುಪಾಲೆ ಜ್ಯೋತಿಲಕ್ಷ್ಮಿ ಟಿ. ಹಾಗೂ ವಕೀಲರಾದ ರಾಜೇಶ್ ಉಪಸ್ಥಿತರಿದ್ದರು. ವಿಶ್ವ ತಂಬಾಕು ನಿಷೇಧದ ಕುರಿತು ಸುಳ್ಯದ ವಕೀಲರಾದ ಪ್ರದೀಪ್ ಬೊಳ್ಳೂರು, ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಪ್ರಾಂಶುಪಾಲ ಅಬ್ದುಲ್ ಸಮದ್ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಉಪಪ್ರಾಂಶುಪಾಲೆ ಜ್ಯೋತಿಲಕ್ಷ್ಮಿ ವಂದಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ರಶ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.