ಪಂಜ: ಮೊಬೈಲ್ ಸ್ಟೇಟಸ್‌ನಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಹಾಗೂ ಕಾಂಗ್ರೆಸ್ ಮತದಾರರಿಗೆ ಅವಹೇಳನಕಾರಿ ಹೇಳಿಕೆ

0

ಕಾಂಗ್ರೆಸ್ಸಿಗರಿಂದ ಪೋಲೀಸ್ ದೂರು

ಕ್ಷಮೆ ಕೇಳಿದ ಬಳಿಕ ಮಾತುಕತೆಯಲ್ಲಿ ಪ್ರಕರಣ ಇತ್ಯರ್ಥ

ಮೊಬೈಲ್ ಸ್ಟೇಟಸ್ ನಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಹಾಗೂ ಕಾಂಗ್ರೆಸ್ ಮತದಾರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಹಾಕಿಕೊಂಡ. ಕಾರಣಕ್ಕಾಗಿ ಅಂಗಡಿ ಮಾಲಕರೊಬ್ಬರು ಪೋಲೀಸ್ ಠಾಣೆ ಮೆಟ್ಟಿಲೇರಬೇಕಾಗಿ ಬಂದ ಹಾಗೂ ದೂರು ನೀಡಿದ ಕಾಂಗ್ರೆಸ್ ಮುಖಂಡರ ಮುಂದೆ ಕ್ಷಮೆ ಕೋರಿದ್ದಲ್ಲದೆ, ತಪ್ಪಿಗೆ ಪ್ರಾಯಶ್ಚಿತ್ತವಾಗಿ ಮೂರು ದಿನಗಳ ಕಾಲ ತನ್ನ ಅಂಗಡಿ ಮುಚ್ಚಲು ಒಪ್ಪಿದ ಮೇರೆಗೆ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿತೆನ್ನಲಾದ ಘಟನೆ ಜೂ.೫ ರಂದು ಪಂಜದಿಂದ ವರದಿಯಾಗಿದೆ.

ಪಂಜದ ಫ್ಯಾನ್ಸಿ ಅಂಗಡಿಯೊಂದರ ಮಾಲಕ ವೆಂಕಪ್ಪ ರವರು ಅವರ ಮೊಬೈಲ್ ಸ್ಟೇಟಸ್ ನಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಹಾಗೂ ಕಾಂಗ್ರೆಸ್ ಮತದಾರರ ಬಗ್ಗೆ ಅವಹೇಳನಕಾರಿಯಾಗುವಂತಹ ಹೇಳಿಕೆ ಹಾಕಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್ ಮುಖಂಡರಾದ ಮಹೇಶ್ ಕರಿಕ್ಕಳ, ಡಾ.ದೇವಿಪ್ರಸಾದ್ ಕಾನತ್ತೂರು, ರಜಿತ್ ಭಟ್ ಮೊದಲಾದ ಕಾಂಗ್ರೆಸ್ ಮುಖಂಡರು, ವೆಂಕಪ್ಪರ ಮೇಲೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ದೂರು ನೀಡಿದರು.
ಪೊಲೀಸರು ಆರೋಪಿಯಾದ ವೆಂಕಪ್ಪರನ್ನು ಪೋಲೀಸ್ ಠಾಣೆಗೆ ಕರೆಸಿಕೊಂಡು ವಿಚಾರಣೆಗೊಳಪಡಿಸಿದರು.

ಈ ಸಂದರ್ಭ ವೆಂಕಪ್ಪರು ” ಪರಿಣಾಮಗಳನ್ನು ಅರಿಯದೆ ನಾನು ಆ ರೀತಿ ಸ್ಟೇಟಸ್ ಹಾಕಿಕೊಂಡಿದ್ದೆ. ಇನ್ನು ಆ ರೀತಿ ಮಾಡೋದಿಲ್ಲ. ಈ ಬಾರಿ ನನ್ನನ್ನು ಕ್ಷಮಿಸಿಬಿಡಿ,” ಎಂದು ತಪ್ಪು ಒಪ್ಪಿಕೊಂಡರೆನ್ನಲಾಗಿದೆ.


ಆ ಬಳಿಕ ಠಾಣೆಯ ಹೊರಗಡೆ ಇತ್ತಂಡದವರ ಮಾತುಕತೆ ನಡೆದು, ಕೇಸು ಮಾಡದೆ ಬಿಟ್ಟುಬಿಡಬೇಕೆಂದು ವೆಂಕಪ್ಪರು ವಿನಂತಿಸಿಕೊಂಡಾಗ, ” ಹಾಗಿದ್ದರೆ ನೀವು ಮಾಡಿದ ತಪ್ಪು ಜನರಿಗೆ ಗೊತ್ತಾಗಬೇಕು. ಆ ತಪ್ಪಿಗೆ ನೀವು ಐದು ದಿನ ಅಂಗಡಿ ಮುಚ್ಚಿ ಪ್ರಾಯಶ್ಚಿತ್ತ ಅನುಭವಿಸಬೇಕು” ಎಂದು ಕಾಂಗ್ರೆಸ್ ಮುಖಂಡರು ಶರತ್ತು ಹಾಕಿದರೆನ್ನಲಾಗಿದೆ. ಮತ್ತೆ ಮಾತುಕತೆ ನಡೆದು ಮೂರು ದಿನ ಅಂಗಡಿ ಮುಚ್ಚಲು ವೆಂಕಪ್ಪರು ಒಪ್ಪಿ, ತಪ್ಪೊಪ್ಪಿಗೆ ಮುಚ್ಚಳಿಕೆ ಬರೆದುಕೊಟ್ಟ ಮೇರೆಗೆ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತೆನ್ನಲಾಗಿದೆ.