ಪಂಜ : ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರ ಕುರಿತು ಅಸಭ್ಯವಾಗಿ ಬರೆದು ಸ್ಟೇಟಸ್ ಹಾಕಿದ ಪ್ರಕರಣ

0

ಮುಚ್ಚಿದ ಅಂಗಡಿ ಓಪನ್ ಮಾಡಿಸಿದ ಬಿಜೆಪಿ ನಾಯಕರು

ಪಂಜದ ವಾಚ್ ವರ್ಕ್ಸ್ ಹಾಗೂ ಮೊಬೈಲ್ ಅಂಗಡಿ‌ ಮಾಲಕರೊಬ್ಬರು ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರ ಕುರಿತು ಅಸಭ್ಯವಾಗಿ ಬರೆದು ಹಾಕಿದ ಹಾಗೂ ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿ ರಾಜಿ ಪಂಚಾತಿಕೆಯಲ್ಲಿ ಒಪ್ಪಿಕೊಂಡಂತೆ ಅಂಗಡಿ ಮುಚ್ಚಲ್ಪಟ್ಟಿದ್ದು, ವಿಷಯ ತಿಳಿದ ಬಿಜೆಪಿ ನಾಯಕರು ಬಂದು ಮತ್ತೆ ಅಂಗಡಿ ಓಪನ್ ಮಾಡಿಸಿರುವ ಘಟನೆ ವರದಿಯಾಗಿದೆ.

ಪಂಜದ ಮೊಬೈಲ್ ಹಾಗೂ ವಾಚ್ ವರ್ಕ್ಸ್ ಅಂಗಡಿ ಮಾಲಕರಾದ ವೆಂಕಪ್ಪ ಗೌಡ ಎಂಬವರು ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರ ಕುರಿತು ಅಸಭ್ಯವಾಗಿ ಬರೆದು ಸ್ಟೇಟಸ್ ಹಾಕಿದ್ದರು. ಇದನ್ನು ಕಂಡು ಪಂಜದ ಕಾಂಗ್ರೆಸ್ ನಾಯಕರಾದ ಡಾ.ದೇವಿಪ್ರಸಾದ್ ಕಾನತ್ತೂರು, ಮಹೇಶ್ ಕರಿಕ್ಕಳ, ರಜಿತ್ ಭಟ್ ಮೊದಲಾದವರು ವೆಂಕಪ್ಪರ ಮೇಲೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ದೂರು ನೀಡಿದ್ದರು. ಪೋಲೀಸರು ವೆಂಕಪ್ಪರನ್ನು ಕರೆದು ವಿಚಾರಣೆ ನಡೆಸಿದಾಗ ಅವರು ತಪ್ಪೊಪ್ಪಿಕೊಂಡು ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಕ್ಷಮೆ ಕೇಳಿದ್ದರು. ನಾವು ಇದನ್ನು ಇಲ್ಲಿಗೇ ಬಿಟ್ಟರೂ ಆ ರೀತಿ ಅಸಭ್ಯ ಮೆಸೇಜ್ ಹಾಕುವವರಿಗೆ ಪಾಠವಾಗಬೇಕೆಂದು ಕಾಂಗ್ರೆಸ್ಸಿನವರು ಹೇಳಿ, ಐದು ದಿವಸ ಅಂಗಡಿ ಬಂದ್ ಮಾಡಬೇಕೆಂದು ಶರತ್ತು ವಿಧಿಸಿದ್ದರು. ಮೊದಲು ವೆಂಕಪ್ಪರು ಒಪ್ಪಿಕೊಳ್ಳದಿದ್ದರೂ, ತನ್ನ ಅಣ್ಣ ಶೇಷಪ್ಪ ಗೌಡರು, ” ಪ್ರಕರಣ ವಿಕೋಪಕ್ಕೆ ಹೋಗುವುದು ಬೇಡ. ಮೂರು ದಿನ ಅಂಗಡಿ ಬಂದ್ ಮಾಡಲು ಒಪ್ಪಿಕೊ ” ಎಂದು ಹೇಳಿದ ಕಾರಣ ವೆಂಕಪ್ಪರು ಒಪ್ಪಿಕೊಂಡಿದ್ದರೆನ್ನಲಾಗಿದೆ.


ಅದರಂತೆ ಜೂ.6 ರಂದು ಬೆಳಿಗ್ಗೆ ವೆಂಕಪ್ಪರು ಅಂಗಡಿ ಓಪನ್ ಮಾಡಿರಲಿಲ್ಲ. ಈ ಘಟನೆಯ ಬಗ್ಗೆ ಸುದ್ದಿ ವೆಬ್‌ಸೈಟ್ ನಲ್ಲಿ ಸುದ್ದಿ ಪ್ರಸಾರವಾಯಿತು.
ಕಾಂಗ್ರೆಸ್ ನವರ ಒತ್ತಾಯದಂತೆ ವೆಂಕಪ್ಪರ ಅಂಗಡಿ ಮುಚ್ಚಲಾಗಿದೆ ಎಂಬ ಮಾಹಿತಿ ದೊರೆತು, ಪಂಜ ಆಸುಪಾಸಿನ ಬಿ.ಜೆ.ಪಿ. ಮುಖಂಡರುಗಳಾದ ಲಿಗೋಧರ ಆಚಾರ್ಯ, ಹರ್ಷಿತ್ ಕಾರ್ಜ, ಅನೂಪ್ ಬಿಳಿಮಲೆ, ಕಿರಣ್ ನೆಕ್ಕಿಲ, ಚಂದ್ರಶೇಖರ ಪನ್ನೆ, ನಾರಾಯಣ ಕೃಷ್ಣನಗರ, ಶರತ್ ಕುದ್ವ, ದುರ್ಗಾಪ್ರಸಾದ್, ಪ್ರಶಾಂತ್, ರಮೇಶ್ ಕಾಯಂಬಾಡಿ ಮೊದಲಾದವರು ಸೇರಿ ವೆಂಕಪ್ಪರನ್ನು ಸಂಪರ್ಕಿಸಿ ಅಂಗಡಿ ಓಪನ್ ಮಾಡುವಂತೆ ಹೇಳಿದರೆನ್ನಲಾಗಿದೆ. ಬಳಿಕ ಬಿಜೆಪಿಯವರಿದ್ದು ವೆಂಕಪ್ಪರು ಅಂಗಡಿ ಓಪನ್ ಮಾಡಿದರೆಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜರವರು, ವೆಂಕಪ್ಪರು ಸ್ಟೇಟಸ್ ಹಾಕಿದ್ದಕ್ಕೆ ತಪ್ಪೊಪ್ಪಿಕೊಂಡಿದ್ದಾರೆ. ಅಂಗಡಿ ಬಂದ್ ಮಾಡುತ್ತೇನೆಂದು‌ ಅವರು ಮುಚ್ಚಳಿಕೆ ಬರೆದುಕೊಟ್ಟಿಲ್ಲ. ಕಾಂಗ್ರೆಸ್ ನವರು ಹೇಳುತ್ತಾರೆಂದು ಅಂಗಡಿ ಮುಚ್ಚಲು ಸಾಧ್ಯವಿಲ್ಲ. ಈಗ ನಾವೆಲ್ಲರೂ ಹೇಳಿ ವೆಂಕಪ್ಪರ ಅಂಗಡಿ ಓಪನ್ ಮಾಡಿಸಿದ್ದೇವೆ ” ಎಂದು ಹೇಳಿದರು.

ಅಂಗಡಿ ಮಾಲಕ ವೆಂಕಪ್ಪರನ್ನು ಸಂಪರ್ಕಿಸಿ ವಿಚಾರಿಸಿದಾಗ “ಸ್ಟೇಟಸ್ ಹಾಕಿದ್ದು ತಪ್ಪಾಗಿದೆ. ಅದನ್ನು ಪೋಲೀಸ್ ಠಾಣೆಯಲ್ಲಿ ಬರೆದುಕೊಟ್ಟಿದ್ದೇನೆ. ಬಳಿಕ ಠಾಣೆಯ ಹೊರಗೆ ಕಾಂಗ್ರೆಸ್ ನವರು ಅಂಗಡಿ‌ಮುಚ್ಚುವಂತೆ ಹೇಳಿಸಿದರು. ಆದರೆ ನಾನು ಅಂಗಡಿ‌ ಮುಚ್ಚುತ್ತೇನೆಂದು ಹೇಳಿಲ್ಲ” ಎಂದು ತಿಳಿಸಿದ್ದಾರೆ.