ಸ್ಕಾರ್ಫಿಯೋ ವಾಹನದಲ್ಲಿ ಬಂದು ರಸ್ತೆ ಬದಿ ಮಲಗಿದ್ದ ದನಗಳಿಗೆ ಇಂಜೆಕ್ಷನ್ ಕೊಟ್ಟು ಸಾಗಾಟ ಮಾಡಿದ ಕಿಡಿಗೇಡಿಗಳು
ದನ ಸಾಗಾಟದ ದೃಶ್ಯ ಸ್ಥಳೀಯ ಮನೆಯ ಸಿ.ಸಿ. ಕ್ಯಾಮರಾದಲ್ಲಿ ಸೆರೆ
ರಾತ್ರಿಯ ವೇಳೆಯಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ದನಗಳಿಗೆ ಅಮಲು ಇಂಜೆಕ್ಷನ್ ನೀಡಿದ ಕಿಡಿಗೇಡಿಗಳು ಸ್ಕಾರ್ಫಿಯೋ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡಿದ್ದು, ಈ ದೃಶ್ಯ ಸ್ಥಳೀಯ ವ್ಯಕ್ತಿಯೊಬ್ಬರ ಮನೆಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾದ ಘಟನೆ ದ.ಕ. ಸಂಪಾಜೆ ಗ್ರಾಮದ ಗಡಿಕಲ್ಲಿನಲ್ಲಿ ಜೂ.7ರಂದು ರಾತ್ರಿ ಸಂಭವಿಸಿದೆ.
ಗಡಿಕಲ್ಲು ಮಸೀದಿಯ ಪಕ್ಕದಲ್ಲಿ ಪ್ರತಿನಿತ್ಯ ಹತ್ತಕ್ಕೂ ಹೆಚ್ಚು ದನಗಳು ರಾತ್ರಿ ವೇಳೆ ಮುಖ್ಯರಸ್ತೆ ಪಕ್ಕದಲ್ಲಿ ಮಲುಗುತ್ತಿದ್ದು, ಜೂ.7ರಂದು ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಸುಳ್ಯ ಭಾಗದಿಂದ ಕಪ್ಪು ಬಣ್ಣದ ಸ್ಕಾರ್ಫಿಯೋ ಕಾರಿನಲ್ಲಿ ಬಂದ ಕಿಡಿಗೇಡಿಗಳು ಈ ದನಗಳ ಪೈಕಿ ಎರಡು ದನಗಳಿಗೆ ಅಮಲು ಬರುವ ಇಂಜೆಕ್ಷನ್ ಕೊಟ್ಟು ಬಳಿಕ ತಮ್ಮ ಸ್ಕಾರ್ಫಿಯೋ ವಾಹನದಲ್ಲಿ ತುಂಬಿಸಿಕೊಂಡು ಸುಳ್ಯ ಭಾಗಕ್ಕೆ ತೆರಳಿರುವುದಾಗಿ ತಿಳಿದುಬಂದಿದೆ.
ಗಡಿಕಲ್ಲು ಮಸೀದಿಯ ಬಳಿ ಮುಖ್ಯರಸ್ತೆ ಬದಿಯಲ್ಲಿ ಎರಡು ಲಾರಿಗಳು ನಿಂತಿದ್ದು, ಸ್ಕಾರ್ಫಿಯೋ ವಾಹನದಲ್ಲಿ ಬಂದವರು ತಮ್ಮ ಸ್ಕಾರ್ಫಿಯೋ ವಾಹನವನ್ನು ಎರಡು ಲಾರಿಯ ಮಧ್ಯಭಾಗದಲ್ಲಿ ನಿಲ್ಲಿಸಿ, ದನಗಳನ್ನು ತುಂಬಿಸಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಮಸೀದಿಯ ಬಳಿ ಅನ್ವರ್ ಎಂಬವರ ಮನೆಯಿದ್ದು, ಅವರ ಮನೆಯ ಸಿ.ಸಿ. ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಒಟ್ಟು ಮೂರು ಜನ ವ್ಯಕ್ತಿಗಳು ಬಂದು ದನವನ್ನು ಬಲವಂತವಾಗಿ ಹೊತ್ತು ವಾಹನಕ್ಕೆ ತುಂಬಿಸುತ್ತಿರುವ ವೇಳೆ ಜೋರಾಗಿ ನಾಯಿ ಬೊಗಳುವ ಸದ್ದು ಕೇಳಿಸಿ, ಅನ್ವರ್ ಅವರು ಮನೆಯಿಂದ ಹೊರಬಂದು ನೋಡಿದಾಗ ಸ್ಕಾರ್ಫಿಯೋ ವಾಹನಕ್ಕೆ ದನ ತುಂಬಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಅನ್ವರ್ ಅವರು ಜೋರಾಗಿ ಬೊಬ್ಬೆ ಹೊಡೆದಿದ್ದು, ಆ ವೇಳೆಗೆ ಸ್ಕಾರ್ಫಿಯೋ ವಾಹನ ಸುಳ್ಯದತ್ತ ತೆರಳಿರುವುದಾಗಿ ತಿಳಿದುಬಂದಿದೆ.