ಹಾಲೆಮಜಲು: ವಿವಿಧ ಸಂಘ-ಸಂಸ್ಥೆಗಳಿಂದ ಮಳೆನೀರು ಕೊಯ್ಲು ಪ್ರಾತ್ಯಕ್ಷಿಕೆ ಹಾಗೂ ಹಣ್ಣಿನ ಗಿಡ ವಿತರಣೆ

0

ತಾಪಮಾನ ಏರಿಕೆಯಿಂದ ಅಂತರ್ಜಲ ಮಟ್ಟ ಕಡಿಮೆ: ಉಪ ವಲಯಾರಣ್ಯಾಧಿಕಾರಿ ಸದಾಶಿವ ಸಿಂದಿಗಾರ್

ಮಳೆ ಕೊಯ್ಲುನಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧ್ಯ : ಡಾ. ಯು.ಪಿ. ಶಿವಾನಂದ

ಬ್ಯಾಂಕ್ ಆಫ್ ಬರೋಡ ವತಿಯಿಂದ ಪ್ರವರ್ತಿಸುತ್ತಿರುವ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ನಾಲ್ಕೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ನಾಲ್ಕೂರು ಒಕ್ಕೂಟ, ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ, ಸುದ್ದಿ ಕೃಷಿ ಸೇವಾ ಕೇಂದ್ರ ಸುಳ್ಯ, ಅರಣ್ಯ ಇಲಾಖೆ ಸುಬ್ರಮಣ್ಯ, ಆತ್ಮರೈತ ಮಿತ್ರ ಮಹಿಳಾ ಸ್ವಸಹಾಯ ಸಂಘ (ರಿ) ನಾಲ್ಕೂರು ಹಾಗೂ ಇತರ ಸಂಘ ಸಂಸ್ಥೆಗಳ ನೆರವಿನೊಂದಿಗೆ ಮಳೆ ನೀರು ಕೊಯ್ಲು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ ಮತ್ತು ಹಣ್ಣಿನ ಗಿಡ ವಿತರಣಾ ಕಾರ್ಯಕ್ರಮ ಜೂನ್ ೯ ರಂದು ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಾಲ್ಕೂರು ಶಾಖೆಯ ಉಪ ವಲಯಾರಣ್ಯಾಧಿಕಾರಿ ಸದಾಶಿವ ಸಿಂದಿಗಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರುತ್ತಿರುವ ತಾಪಮಾನದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಪ್ರಕೃತಿ ನಾಶ ಹೊಂದಲು ಇದು ದೊಡ್ಡ ಕಾರಣವಾಗುತ್ತಿದೆ. ಸುದ್ದಿ ಕೃಷಿ ಸೇವಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿರುವ ಮಳೆ ನೀರು ಕೊಯ್ಲು ಕಾರ್ಯಕ್ರಮ ಬಹಳ ಉತ್ತಮ ಕಾರ್ಯಕ್ರಮವಾಗಿದೆ. ಎಲ್ಲಾ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೇಳಿಕೊಂಡರು. ಈ ಸಂದರ್ಭದಲ್ಲಿ ಅವರು ಪರಿಸರ ಉಳಿವಿಗಾಗಿ ಸಾರ್ವಜನಿಕರು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ ಎಂದು ಹೇಳಿದರು. ಬಳಿಕ ಅವರು ಕಾರ್ಯಕ್ರಮದಲ್ಲಿ ಹಣ್ಣಿನ ಗಿಡಗಳ ವಿತರಣಾ ಕಾರ್ಯಕ್ರಮ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ

ರು.

ಸುದ್ದಿ ಕೃಷಿ ಅರಿವು ಕೇಂದ್ರ ಸ್ಥಾಪಕರು ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು ಪಿ ಶಿವಾನಂದರವರು ಮಳೆ ನೀರು ಕೊಯ್ಲು ಬಗ್ಗೆ ಮಾತನಾಡಿ, ಕುಡಿಯಲು ಯೋಗ್ಯವಾದ ಮತ್ತು ಶುದ್ಧ ಮಳೆಯ ನೀರನ್ನು ಶೇಖರಿಸುವ ವಿಧಾನಗಳನ್ನು ಕುರಿತು ಮಾಹಿತಿಯನ್ನು ನೀಡಿದರು. ಸಾರ್ವಜನಿಕರು ತಮ್ಮ ತಮ್ಮ ಮನೆಯ ಮಾಡು ಅಥವಾ ಮೇಲ್ಚಾವಣಿಯಿಂದ ಬರುವ ಮಳೆಯ ನೀರನ್ನು ದಂಬೆಗಳ ಮೂಲಕ ಅದನ್ನು ಭೂಮಿಯ ಮೇಲ್ಭಾಗಕ್ಕೆ ಬಿಟ್ಟು ಅದು ಎಲ್ಲೆಂದರಲ್ಲೇ ಹರಿದು ಹೋಗುವುದಕ್ಕಿಂತ ನಮ್ಮ ನಮ್ಮ ಮನೆಯ ನೀರಿನ ಟ್ಯಾಂಕ್, ಬೋರ್ ವೆಲ್, ಬಾವಿಗಳಲ್ಲಿ ಸಂಗ್ರಹಿಸುವ ಮೂಲಕ ಶುದ್ಧ ನೀರನ್ನು ಶೇಖರಿಸಲು ಸಾಧ್ಯವಾಗುತ್ತದೆ. ಇದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಇದಕ್ಕೆ ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಪ್ರೋತ್ಸಾಹಗಳು ಸಿಗುತ್ತಿದ್ದು, ಸಾರ್ವಜನಿಕರು ಅದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು. ಪ್ರತಿ ಗ್ರಾಮ ಪಂಚಾಯತ್, ಸಹಕಾರಿ ಸಂಘಗಳು ಮಳೆ ಕೊಯ್ಲು ಕಾರ್ಯಕ್ರಮವನ್ನು ಮಾಡಿದರೆ ಮುಂದಿನ ದಿನಗಳಲ್ಲಿ ನಾವುಗಳು ನೀರಿಗಾಗಿ ಬೇರೆಡೆಯಿಂದ ಆಶ್ರಯಿಸುವ ಪರಿಸ್ಥಿತಿ ಬರುವುದಿಲ್ಲ ಎಂದು ಹೇಳಿದರು. ಸಭಾಧ್ಯಕ್ಷತೆಯನ್ನು ನಾಲ್ಕೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಆರ್. ಉದಯ ಕುಮಾರ್ ವಹಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ಅರಿವು ಕೃಷಿ ಕ್ಲಿನಿಕ್ ಇದರ ಮುಖ್ಯಸ್ಥ ಹೊನ್ನಪ್ಪ ಗೌಡ ಬನ್ನೂರು ಭಾಗವಹಿಸಿ ಮಳೆ ನೀರನ್ನು ಶೇಖರಿಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಅರಿವು ಮಾಹಿತಿ ನೀಡಿದರು.


ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ಸುದ್ದಿ ಪತ್ರಿಕೆ ಹಮ್ಮಿಕೊಂಡಿರುವ ಸುದ್ದಿ ಜನಾಂದೋಲನ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.


ವೇದಿಕೆಯಲ್ಲಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ಅಧ್ಯಕ್ಷರು, ಯುವಜನ ಸಂಯುಕ್ತ ಮಂಡಳಿ (ರಿ), ಸುಳ್ಯ ಆತ್ಮ ರೈತ ಮಹಿಳಾ ಸ್ವಸಹಾಯ ಸಂಘ ನಾಲ್ಕೂರು ಇದರ ಅಧ್ಯಕ್ಷೆ ಶ್ರೀಮತಿ ಗೀತಾ, ನಾಲ್ಕೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಕಾರ್ಯದರ್ಶಿ ದಿನೇಶ್ ಹಾಲೆಮಜಲು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘಟನೆಯ ವತಿಯಿಂದ ೨೦೨೨ – ೨೩ನೇ ಶೈಕ್ಷಣಿಕ ವರ್ಷದ ಬಿ ಕಾಂ ಅಂತಿಮ ವರ್ಷದಲ್ಲಿ ೧೦ನೇ ರ್‍ಯಾಂಕ್ ಪಡೆದ ಗುತ್ತಿಗಾರು ಗ್ರಾಮದ ಕು. ಶ್ರಾವ್ಯ ಮುತ್ಲಾಜೆಯವರನ್ನು ಸನ್ಮಾನಿಸಿ ಸನ್ಮಾನ ಪತ್ರವನ್ನು ನೀಡಿ ಗೌರವಿಸಲಾಯಿತು.


ದಿನೇಶ್ ಹಾಲೆಮಜಲು ಸ್ವಾಗತಿಸಿ ವಂದಿಸಿದರು. ಚರಣ್ ದೇರಪ್ಪಜ್ಜನಮನೆ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಮಿತಿಯ ಸದಸ್ಯರು,ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಪದಾಧಿಕಾರಿಗಳು ಸದಸ್ಯರು, ಸ್ಥಳೀಯ ಹಿರಿಯ ಕಿರಿಯ ಕೃಷಿಕರು ಭಾಗವಹಿಸಿದ್ದರು.
ಪುತ್ತೂರು ಕೃಷಿ ಕೇಂದ್ರದ ಚೈತ್ರ ಮಧುಚಂದ್ರ, ಕುಶಾಲಪ್ಪ ಗೌಡ, ಹಾಗೂ ಸಂಘಟಕರು ಸಹಕರಿಸಿದರು.