ಚೆಂಬು : ಉಂಬಳೆ ಜಲಪಾತಕ್ಕೆ ತೆರಳುವ ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರಿಂದ ಶಾಸಕರಿಗೆ ಮನವಿ

0

ರಸ್ತೆ ಅಭಿವೃದ್ಧಿಪಡಿಸುವ ಭರವಸೆ ನೀಡಿರುವ ಶಾಸಕ ಪೊನ್ನಣ್ಣ

ಚೆಂಬು ಗ್ರಾಮದ ಉಂಬಳೆ ಜಲಪಾತಕ್ಕೆ ತೆರಳುವ ರಸ್ತೆ ಹಾಗೂ ಜಲಪಾತ ಅಭಿವೃದ್ಧಿ ಪಡಿಸಿ, ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕೆಂದು ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರಿಗೆ ಕೊಡಗು ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಜೂ.19ರಂದು ಮಡಿಕೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಚೆಂಬು ಗ್ರಾಮದ ಕಟ್ಟಪ್ಪಳ್ಳಿ ಉಂಬಳೆ ಭಾಗದ ನಿವಾಸಿಗಳ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕ ಪೊನ್ನಣ್ಣ ಅವರು ಪ್ರವಾಸೋದ್ಯಮ ಇಲಾಖೆಯೊಂದಿಗೆ ಚರ್ಚಿಸಿ ರಸ್ತೆ ಹಾಗೂ ಜಲಪಾತ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರೆಂದು ತಿಳಿದುಬಂದಿದೆ.

ಇದೇ ಸಂದರ್ಭದಲ್ಲಿ ಹಲವು ಅಭಿವೃದ್ಧಿ ಕೆಲಸಗಳ ಬೇಡಿಕೆಯನ್ನು ಸಲ್ಲಿಸಿ, ಅರಣ್ಯ ಇಲಾಖೆಯಿಂದ ಗ್ರಾಮಸ್ಥರಿಗೆ ಬರುವ ಒತ್ತುವರಿ ನೋಟಿಸ್ ಕುರಿತು ಶಾಸಕರ ಗಮನ ಸೆಳೆಯಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಕುಮಾರ್ ಕಟ್ಟಪ್ಪಳ್ಳಿ, ಚೆಂಬು ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಕಾಂಗ್ರೆಸ್ ಮುಖಂಡರಾದ ಜಿ.ವಿ. ಗಣಪಯ್ಯ, ಸೋಮಣ್ಣ ಬಾಲಂಬಿ, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.