ಕಳಂಜದ ಮಣಿಮಜಲು ಸೇತುವೆ ಸಮಸ್ಯೆಗೆ ಪರಿಹಾರ- ಸಂಚಾರಕ್ಕೆ ಅವಕಾಶ ಕಲ್ಪಿಸಿದ ಸುಳ್ಯ ತಹಶಿಲ್ದಾರ್

0

ಶಿಥಿಲಗೊಂಡ ಕಾಲು ಸಂಕದಲ್ಲಿ ಸಂಚರಿಸದಂತೆ ಸೂಚನಾ ಫಲಕ ಅಳವಡಿಕೆಗೆ ಸೂಚನೆ

ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣಿಮಜಲು ಎಂಬಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಿರ್ಮಿಸಲಾದ ಹೊಸದಾದ ಸೇತುವೆಯಲ್ಲಿ ಸ್ಥಳೀಯ ರೊಬ್ಬರು ತನ್ನ ವರ್ಗ ಜಾಗದಲ್ಲಿ ರಸ್ತೆಗೆ ಜಾಗ ಬಿಟ್ಟುಕೊಡದೆ ಸೇತುವೆಗೆ ಮುಳ್ಳಿನ ಬೇಲಿ ಹಾಕಿ ಅಡಚಣೆ ಮಾಡಿದ್ದರು.
ಇದರಿಂದಾಗಿ ಈ ಭಾಗದ ನಾಗರಿಕರು ಶಾಲಾ ವಿದ್ಯಾರ್ಥಿಗಳು ಪಕ್ಕದಲ್ಲಿ ಇರುವ ಹಳೆಯ ಶಿಥಿಲಗೊಂಡಿರುವ ಅಪಾಯಕಾರಿ ಕಾಲು ಸಂಕದಲ್ಲಿ ಸಂಚರಿಸುತ್ತಿದ್ದರು.

ಅದರಂತೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಜೂ.28 ರಂದು ಸ್ಥಳಕ್ಕೆ ಭೇಟಿ ನೀಡಿದ ಸುಳ್ಯ ತಹಶಿಲ್ದಾರ್ ಮಂಜುನಾಥ ಹಾಗೂ ತಾಲೂಕು ಪಂಚಾಯತ್ ಇ.ಒ ರಾಜಣ್ಣ ರವರು ಸೇತುವೆ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದ ಸ್ಥಳೀಯ ಜಾಗದವಾರಸುದಾರ ಅಶ್ರಫ್ ರೊಂದಿಗೆ ಮಾತುಕತೆ ನಡೆಸಿ ಸೇತುವೆಗೆ ಹಾಕಿದ್ದ ಬೇಲಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟು ಕಳೆದ 5 ವರ್ಷಗಳಿಂದ ತೊಡಕಾಗಿದ್ದ ಸಮಸ್ಯೆಯನ್ನು ಇತ್ಯರ್ಥಪಡಿಸಿದ ಘಟನೆ ವರದಿಯಾಗಿದೆ.

ಮಣಿಮಜಲು ಭಾಗದಲ್ಲಿ ಸುಮಾರು 60 ರಿಂದ 65 ‌ಮನೆಗಳಿದ್ದು ಇವರೆಲ್ಲರೂ ಶಿಥಿಲಗೊಂಡಿರುವ ಕಾಲು ಸಂಕದಲ್ಲಿ ನಡೆದಾಡುತ್ತಿದ್ದರು.
ಈ ಸೇತುವೆಯನ್ನು ವೀಕ್ಷಿಸಿದ ತಹಶಿಲ್ದಾರ್ ರವರು ಅಪಾಯದ ಮುನ್ಸೂಚನೆಯನ್ನು ಅರಿತು ಕಾಲು ಸಂಕವನ್ನು ಬಂದ್ ಮಾಡಿ ಹೊಸ ಸೇತುವೆಯಲ್ಲಿ ಸಂಚರಿಸುವ ವ್ಯವಸ್ಥೆ ಮಾಡುವಂತೆ ಪಂಚಾಯತ್ ಅಧಿಕಾರಿಯವರಿಗೆ ಆದೇಶಿಸಿದರು.

ಈ ಸಂದರ್ಭದಲ್ಲಿ ಹೊಸದಾಗಿ ನಿರ್ಮಿಸಿದ ಸೇತುವೆಯ ಮೂಲಕ ಹೋಗಬೇಕಾದರೆ ಸ್ಥಳೀಯ ನಿವಾಸಿ ಅಶ್ರಫ್ ರವರ ಜಾಗದಲ್ಲಿ ಹಾದು ಹೋಗಬೇಕಾಗಿದ್ದು ಅವರು ತನ್ನ ಜಾಗದಲ್ಲಿ ಹೋಗಬೇಕಾದರೆ ಕಂಪೌಂಡು ನಿರ್ಮಿಸಿಕೊಡಬೇಕು‌ ಎಂದು ಪಟ್ಟು ಹಿಡಿದರು.
ಅದಲ್ಲದೆ ನಾನು ನಾಲ್ಕು ಫೀಟ್ ಮಾತ್ರ ಜಾಗ ಬಿಟ್ಟು ಕೊಡುತ್ತೇನೆ. ಕಂಪೌಂಡು ನಿರ್ಮಿಸಿದ ಯಾವುದೇ ಕಾರಣಕ್ಕೂ ಬೇಲಿ ತೆಗೆಯಲು ಬಿಡುವುದಿಲ್ಲ ಎಂದು ಹಠ ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶಿಲ್ದಾರ್ ಹಾಗೂ ಇ.ಒ ರವರು ರಸ್ತೆಗೆ ಬೇಕಾದ ಜಾಗ ಬಿಟ್ಟು ಕೊಡಿ ಆಮೇಲೆ ಕಾಂಪೌಂಡ್ ನಿರ್ಮಿಸಿಕೊಡುತ್ತೇವೆ‌ ಎಂಬ ಭರವಸೆ ನೀಡುವ ಮೂಲಕ ಒಪ್ಪಿಸಿದರು.
ಅದಕ್ಕೊಪ್ಪಿದ ಜಾಗದ ವಾರಸುದಾರ ಕಂಪೌಂಡು ನಿರ್ಮಿಸಿಕೊಡುವುದಾದರೆ 8 ಫೀಟ್ ಜಾಗ ಬಿಡುತ್ತೇನೆ. ಇಲ್ಲವಾದಲ್ಲಿ 4 ಫೀಟ್ ಮಾತ್ರ ಬಿಡುವುದು ಎಂದು ಹೇಳಿದರು.
ತಹಶಿಲ್ದಾರರ ಸೂಚನೆಯಂತೆ ಪಂಚಾಯತ್ ಸಿಬ್ಬಂದಿ ಗಳು ಸೇತುವೆ ಮೇಲೆ ಹಾಕಿದ್ದ ಮುಳ್ಳು ಬೇಲಿಯನ್ನು ತೆರವುಗೊಳಿಸಿದರು. ಅಧಿಕಾರಿಗಳ ಆದೇಶದ ಮೇರೆಗೆ ಹಳೆಯ ಕಾಲು ಸಂಕದಲ್ಲಿ ಸಂಚರಿಸದಂತೆ ಬ್ಯಾನರ್ ಅಳವಡಿಸಿ ಬೇಲಿ ಹಾಕಿ ಬಂದ್ ಮಾಡುವಂತೆ ಇ.ಒ ರವರು ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬೆಳ್ಳಾರೆ ಪೋಲಿಸ್ ಅಧಿಕಾರಿಗಳು ಹಾಗೂ ಕಳಂಜ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು, ಪಿ.ಡಿ.ಒ,ಕಾರ್ಯದರ್ಶಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.