ಎಣ್ಮೂರು ಆದಿಬೈದರ್ಕಳ ಗರಡಿಯ ಕೋಟಿ ಪಾತ್ರಿ ಗಿರೀಶ್ ಮೃತದೇಹ ನದಿಯಲ್ಲಿ ಪತ್ತೆ

0

ಎಣ್ಮೂರು ಶ್ರೀ ನಾಗಬ್ರಹ್ಮ ಆದಿ ಬೈದರ್ಕಳ ಗರಡಿಯ ಕೋಟಿ ಚೆನ್ನಯ ನೇಮೋತ್ಸವದ ಸಂದರ್ಭ ಕೋಟಿ ಪಾತ್ರಿಯಾಗಿ ಸೇವಾ ಕೈಂಕರ್ಯ ನಡೆಸುತ್ತಿದ್ದ ಬಂಟ್ವಾಳ ತಾಲೂಕು ಕುಕ್ಕಿಪ್ಪಾಡಿ ಗ್ರಾಮದ ಗಿರೀಶ್ ಪೂಜಾರಿಯವರ ಮೃತದೇಹ ಅಡ್ಡೂರು -ಪೊಳಲಿಯ ಫಲ್ಗುಣಿ ನದಿಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ.

ಬಂಟ್ವಾಳದ ಕುಕ್ಕಿಪ್ಪಾಡಿ ಗ್ರಾಮದ ನೇಲ್ಯಕುಮೇರು ಬಾಬು ಪೂಜಾರಿಯವರ ಪುತ್ರ ಗಿರೀಶ್ ಪೂಜಾರಿಯವರು ಎಣ್ಮೂರಿನಲ್ಲಿ ಕೋಟಿ ಪಾತ್ರಿಯಾಗಿದ್ದು, ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು.
ಜು.3 ರಂದು ತಡರಾತ್ರಿ, ಬಜಪೆ ವಿಮಾನ ನಿಲ್ದಾಣಕ್ಕೆ ಬಾಡಿಗೆ ಇದೆ ಎಂದು ಹೇಳಿ ರಿಕ್ಷದಲ್ಲಿ ಹೋಗಿದ್ದರು. ಮರುದಿನ ಮುಂಜಾನೆ ವೇಳೆಗೆ ಪೊಳಲಿಯ ಅಡ್ಡೂರು ಸೇತುವೆಯಲ್ಲಿ ಚಾಲೂಸ್ಥಿತಿಯಲ್ಲಿ ನಿಂತಿದ್ದ ರಿಕ್ಷಾವೊಂದನ್ನು ರಾತ್ರಿ ಗಸ್ತು ತಿರುಗುತ್ತಿದ್ದ ಬಜ್ಪೆ ಪೋಲೀಸರ ಗಮನಕ್ಕೆ ಬಂದಿತು. ಆದರೆ ರಿಕ್ಷಾ ಚಾಲಕ ಪತ್ತೆಯಾಗಿರಲಿಲ್ಲ. ಬಳಿಕ ರಿಕ್ಷಾದಲ್ಲಿ ದೊರೆತ ದಾಖಲೆ ಪತ್ರಗಳ ಆಧಾರದಲ್ಲಿ ಅವರ ಮನೆಗೆ ಮಾಹಿತಿ ನೀಡಿದರು.


ಗಿರೀಶರ ಸಂಬಂಧಿಕರು ಮತ್ತು ಪೋಲೀಸರು, ಅಡ್ಡೂರು – ಪೊಳಲಿ ನಿವಾಸಿಗಳು ಫಲ್ಗುಣಿ ನದಿಯಲ್ಲಿ ಗಿರೀಶರಿಗಾಗಿ ಹುಡುಕಾಟ ನಡೆಸಿದರು. ಗುರುವಾರ ಸಂಜೆಯ ವರೆಗೂ ಅವರ ಸುಳಿವು ಸಿಗಲಿಲ್ಲ.
ಜು.5 ರ ಶುಕ್ರವಾರ ಬೆಳಿಗ್ಗೆಯಿಂದ ನುರಿತ ಈಜುಗಾರರ ನೆರವಿನಿಂದ ಅಗ್ನಿಶಾಮಕ ದಳದವರು, ಪೋಲೀಸರು, ಸ್ಥಳೀಯರು ಸೇರಿ ಮತ್ತೆ ಹುಡುಕಾಟ ಆರಂಭಿಸಿದರು. ಮಧ್ಯಾಹ್ನದ ವೇಳೆಗೆ ನದಿಯಲ್ಲಿ ಮೃತದೇಹ ಪತ್ತೆಯಾಯಿತು.

ಪತಿ ನಾಪತ್ತೆಯಾಗಿರುವ ಬಗ್ಗೆ ಜು.4 ರಂದು ಅವರ ಪತ್ನಿ ತಾರಾರವರು ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದರು. ಬಜ್ಪೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಮೃತದೇಹ ದೊರೆತಿರುವುದರಿಂದ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಅವಳಿ ಸೋದರರಾದ ಗಿರೀಶ್ ಹಾಗೂ ಹರೀಶ್ ರವರು ಸುಮಾರು 7 ವರ್ಷಗಳಿಂದ ಎಣ್ಮೂರು ಶ್ರೀ ನಾಗಬ್ರಹ್ಮ ಆದಿಬೈದರ್ಕಳ ಗರಡಿಯಲ್ಲಿ ಕೋಟಿ ಚೆನ್ನಯ ಪಾತ್ರಿಗಳಾಗಿ ಸೇವೆ ಮಾಡುತ್ತಿದ್ದರು. ಅವರಿಬ್ಬರೂ ಅಕ್ಕ ತಂಗಿಯರನ್ನೇ ವಿವಾಹವಾಗಿದ್ದರೆನ್ನಲಾಗಿದೆ. ಗಿರೀಶ್ ಪೂಜಾರಿಯವರ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ.