ಅಸಾಮಾನ್ಯ ಶ್ರೀ ಸಾಮಾನ್ಯ ರಿಚರ್ಡ್ ಕ್ರಾಸ್ತಾ

0
  • ಜಯಮ್ಮ ಚೆಟ್ಟಿಮಾಡ

ಮನುಷ್ಯರಲ್ಲಿ ಸಂಪತ್ತು, ದೊಡ್ಡ ಉದ್ಯೋಗ, ಅಧಿಕಾರ ಇರಬಹುದು. ಆದರೆ ಹೃದಯವಂತಿಕೆ ಎಂಬ ಸರ್ವ ಶ್ರೇಷ್ಠ ಮನುಷ್ಯ ಧರ್ಮ ಇರುವುದು ಅತಿ ವಿರಳ. ಅವರು ಪ್ರತಿಷ್ಠಿತ ಅಥವಾ ಪ್ರಸಿದ್ಧ ವ್ಯಕ್ತಿಗಳಾಗಿರಬೇಕಿಲ್ಲ. ಸಾಮಾನ್ಯರಾದರೂ ಅವರ ಒಳ್ಳೆಯ ಮನಸ್ಸು ಅವರನ್ನು ಅಸಾಮಾನ್ಯರನ್ನಾಗಿಸುತ್ತದೆ. ಅಂಥ ಒಬ್ಬ ವ್ಯಕ್ತಿ ರಿಚರ್ಡ್ ಕ್ರಾಸ್ತಾ.
ಅವರು ಯಾರು, ಅವರ ಹೆಸರೇನು, ಅವರು ಯಾವ ಧರ್ಮದವರು ಇದೆಲ್ಲಾ ನನಗೆ ಗೊತ್ತಾದದ್ದು ಅವರ ನಿಧನದ ಅನಂತರ.

ಮಾರ್ಗದ ಬದಿಯಲ್ಲಿ ಆಟೋಗಾಗಿ ಕಾದು ನಿಲ್ಲುವಾಗ ಅವರ ನೆನಪಾಗುತ್ತದೆ. ಈಗ ಅವರ ಆಟೋ ನಿಧಾನವಾಗಿ ಬಂದು ನನ್ನೆದುರು ನಿಲ್ಲುತ್ತದೆ ಮತ್ತು ಎಷ್ಟೇ ಜನರಿದ್ದರೂ ನನಗೊಂದಿಷ್ಟು ಜಾಗ ಹೊಂದಿಸಿ ಕೊಡುತ್ತಾರೆ ಎಂಬ ಭಾವ ಮೂಡುತ್ತದೆ.

ಆದರೆ ಅವರಿಲ್ಲ.ಇನ್ನೂ ಹತ್ತಿಪ್ಪತ್ತು ವರ್ಷ ಬದುಕಬಹುದಾದವರು. ಏನಾಯ್ತೋ? ಕಾಲಂಗೆ ಗುಣಂ ಅಣಮಿಲ್ಲ.


ಆಟೋ ಹತ್ತಿದ ಹಾಗೆ ಒಂದೆರಡು ಮಾತಿನ ಕ್ಷೇಮ ಸಮಾಚಾರ. ಒಬ್ಬಳೇ ಆದರೆ ಸಮಕಾಲೀನ ವಿದ್ಯಮಾನಗಳ ಬಗ್ಗೆ ನಾನಿಳಿಯುವ ವರೆಗೆ ಸಂಭಾಷಣೆ. ಪೇಟೆಯಿಂದ ಬರುವುದಾದರೆ “ಪ್ರಾಯದವರಿಗೆ ಮಾರ್ಗ ದಾಟುವುದು ಕಷ್ಟ” ಎನ್ನುತ್ತಾ ರಾಂಗ್ ಸೈಡಿಗೆ ಬಂದು ಗಾಡಿ ನಿಲ್ಲಿಸುವ ಮಾನವೀಯ ಕಾಳಜಿ ನನ್ನ ಮನಸ್ಸನ್ನು ತಟ್ಟಿತ್ತು.
ಇದೇ ಸುಳ್ಯದಲ್ಲಿ ಉಡಾಫೆ ಮಾತಾಡುವ ಆಟೋ ಚಾಲಕರ ಮಾತಿನ ಅನುಭವವೂ ನನಗಾಗಿದೆ. ಅಂಥವರ ನಡುವೆ ಮನುಷ್ಯ ಧರ್ಮವನ್ನು ಪಾಲಿಸುವ ರಿಚರ್ಡ್ ಕ್ರಾಸ್ಟಾ ದೇವತಾ ಮನುಷ್ಯ. ತನ್ನ ಉದ್ಯೋಗವನ್ನು ಸೇವೆಯೆಂದೆ ಪರಿಗಣಿಸಿ ನಡೆದ ಮಹಾನುಭಾವ. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

—–ಜಯಮ್ಮ ಚೆಟ್ಟಿಮಾಡ