ವಿದ್ಯಾರ್ಥಿ ಸಂಘಗಳು ನಾಯಕತ್ವದ ಜ್ಞಾನ ಬೋಧಿಸುವ ಪುಸ್ತಕಗಳು: ರಾಜಾ ಸುಬ್ರಹ್ಮಣ್ಯ

0

ಗ್ರಾಮೀಣ ಪ್ರದೇಶದಲ್ಲಿ ನಾಯಕತ್ವಗಳು ಹುಟ್ಟಿಕೊಳ್ಳುತ್ತದೆ. ವಿದ್ಯೆ ಜೀವನದ ಅವಿಭಾಜ್ಯ ಅಂಗ. ವಿದ್ಯಾರ್ಥಿ ಸಂಘಗಳು ಯುವಜನಾಂಗಕ್ಕೆ ನಾಯಕತ್ವದ ಜ್ಞಾನವನ್ನು ಬೋಧಿಸುವ ಪುಸ್ತಕಗಳಾಗಿವೆ.ನಾಯಕನ ಗುಣ-ಲಕ್ಷಣ, ಶಿಸ್ತು, ಸ್ಪೂರ್ತಿ ಇತ್ಯಾದಿಗಳು ವಿದ್ಯಾರ್ಥಿ ಸರಕಾರದಿಂದ ದೊರಕುವ ಜ್ಞಾನಗಳಾಗಿವೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಯಲು ವಿದ್ಯಾರ್ಥಿ ಸರಕಾರಗಳು ಸಹಕಾರಿಯಾಗುವುದರೊಂದಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಆಡಳಿತಾತ್ಮಕ ಜ್ಞಾನ ಬೋಧಿಸುತ್ತದೆ. ನಿಸ್ವಾರ್ಥ ಮನೋಭಾವನೆಯಿಂದ ಸಮಾಜಮುಖಿ ಸೇವೆ ನಡೆಸಲು ಕೂಡಾ ಇದು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದೆ ಎಂದು ಅಮೇರಿಕನ್ ಯುನಿವರ್ಸಿಟಿ ಆಫ್ ಶಾರ್ಜಾದ ಬ್ಯಾಡ್ಮಿಂಟನ್ ಮತ್ತು ಸ್ವಿಮ್ಮಿಂಗ್ ಕೋಚ್ ಹಾಗೂ ಅಂತರಾಷ್ಟೀಯ ಬ್ಯಾಡ್ಮಿಂಟನ್ ಅಂಪೈರ್ ರಾಜಾ ಸುಬ್ರಹ್ಮಣ್ಯ ಹೇಳಿದರು.


ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು. ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಜು.12 ರಂದು ನಡೆದ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಸ್ತುಮಯ ವಿದ್ಯಾರ್ಥಿ ಜೀವನವು ಭವಿಷ್ಯಕ್ಕೆ ಉತ್ತಮ.ಜೀವನ ನಿರ್ವಹಣೆಯ ಶಿಕ್ಷಣವು ಗ್ರಾಮೀಣ ಭಾಗದಲ್ಲಿ ಅದ್ಬುತವಾಗಿ ದೊರಕುತ್ತದೆ.ಶ್ರೀ ದೇವರ ವಿದ್ಯಾಸಂಸ್ಥೆಯಲ್ಲಿ ಕಲಿತರೆ ಭಗವಂತ ಎಂದೂ ಕೈಬಿಡುವುದಿಲ್ಲ ಎನ್ನುವುದಕ್ಕೆ ನಾನು ಉದಾಹರಣೆ.ಕಷ್ಟ ಪರಿಶ್ರಮದ ಅಧ್ಯಾಯನವು ಬದುಕಿನ ಔನತ್ಯಕ್ಕೆ ದಾರಿದೀಪವಾಗುತ್ತದೆ ಎಂಬ ಅರಿವಿನೊಂದಿಗೆ ವ್ಯಾಸಂಗ ಮಾಡುವುದು ಅತ್ಯಗತ್ಯ ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್, ಅಧ್ಯಾಪಕ ರಘು ಬಿಜೂರ್, ವಾಣಿ ವನಿತಾ ಸಮಾಜದ ಪೂರ್ವಾಧ್ಯಕ್ಷೆ ಲತಾ ಸರ್ವೇಶ್ವರ ಭಟ್‌ಮುಖ್ಯಅತಿಥಿಗಳಾಗಿದ್ದರು.ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸರಕಾರದ ಸಂಚಾಲಕ ಜಯಪ್ರಕಾಶ್.ಆರ್ ವೇದಿಕೆಯಲ್ಲಿದ್ದರು.


ಕಾಲೇಜಿನ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ವಿದ್ಯಾರ್ಥಿ ಸರಕಾರದ ಸಂಚಾಲಕ ಜಯಪ್ರಕಾಶ್ ಆರ್ ಪ್ರತಿಜ್ಞಾ ವಿಧಿ ಬೋಧಿಸಿದರು.ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಗನ್ ಡಿ.ಕೆ, ಉಪಾಧ್ಯಕ್ಷೆ ಜನನಿ, ಕಾರ್ಯದರ್ಶಿ ಭವಿತ್, ಕ್ರೀಡಾ ಕಾರ್ಯದರ್ಶಿ ಹಿತೇಶ್ ಎಚ್.ಎಸ್, ಸಾಂಸ್ಕೃತಿಕ ಕಾರ್ಯದರ್ಶಿ ಪೃಥ್ವಿನ್ ಎ.ಕೆ ಮತ್ತು ತರಗತಿ ನಾಯಕರು ಹಾಗೂ ನಾಯಕಿಯರು ಪ್ರಮಾಣವಚನವನ್ನು ವಿದ್ಯಾಧಿದೇವತೆ ಸರಸ್ವತಿಯ ಹೆಸರಿನಲ್ಲಿ ಸ್ವೀಕರಿಸಿದರು. ಬಳಿಕ ಗಣ್ಯರು ವಿದ್ಯಾರ್ಥಿ ನಾಯಕರುಗಳಿಗೆ ಅವರ ನಾಮಗಳನ್ನು ಹೊಂದಿರುವ ಪಿನ್‌ಗಳನ್ನು ತೊಡಿಸಿದರು. ಉಪನ್ಯಾಸಕಿ ಶ್ರುತಿ ಯಾಲದಾಳು ಕಾರ್ಯಕ್ರಮ ನಿರೂಪಿಸಿದರು.