ಸುಳ್ಯ ತಾಲೂಕಿನ 15 ಕ್ಕೂ ಹೆಚ್ಚು ಮಸೀದಿಗಳ ಖಾಝಿ ಕೂರತ್ ತಂಙಳ್

0

ಧಾರ್ಮಿಕ ವಿದ್ವಾಂಸ ನಿಲುಕದ ವ್ಯಕ್ತಿತ್ವದ ನಗು ಮುಖದ ಆದರ್ಶ ನಾಯಕ ಇನ್ನು ನೆನಪು ಮಾತ್ರ

ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಕೂರತ್ ನಿಧನರಾಗಿದ್ದಾರೆ.

ಉಳ್ಳಾಲ ತಂಙಳ್ ಎಂದೇ ಪ್ರಸಿದ್ಧರಾದ ತಾಜುಲ್ ಉಲಮಾ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ ಅವರ ಪುತ್ರರೂ ಆಗಿರುವ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್.
ಪ್ರಸ್ತುತ ಉಳ್ಳಾಲ ಖಾಝಿಯಾಗಿದ್ದರು.ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಸಂಯುಕ್ತ ಖಾಝಿಯೂ ಕೂಡ ಆಗಿದ್ದ ಮಹಾನರು ನಮ್ಮ ಸುಳ್ಯದ ಸುಮಾರು 15 ಕ್ಕೂ ಹೆಚ್ಚು ಮಸೀದಿಗಳ ಖಾಝಿ ಪಟ್ಟವನ್ನು ಅಲಂಕರಿಸಿ ಕೊಂಡವರು.ಮೂಲತ: ಕೇರಳದ ಎಟ್ಟಿಕ್ಕುಳಂ ಪ್ರದೇಶದ ಇವರು ಕಳೆದ 3 ದಶಕಗಳಿಂದ ಪುತ್ತೂರು ತಾಲೂಕಿನ ಸವಣೂರು ಬಳಿ ಕೂರ ಎಂಬಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆದರಿಂದ ದಕ್ಷಿಣ ಕನ್ನಡ, ಕಾಸರಗೋಡು,ಕೊಡಗು ಭಾಗದ ಜನತೆಯ ಮನೆ ಮಾತಾಗಿ ಬೆಳೆದು ಬಂದವರು.

ತಮ್ಮ ತಂದೆಯವರ ಬಳಿ ಉಳ್ಳಾಲದಲ್ಲಿ ಶಿಷ್ಯನಾಗಿ ಮದನಿ ಪದವಿಯನ್ನು ಪಡೆದವರು.
ಪವಿತ್ರ ಇಸ್ಲಾಮ್ ಧರ್ಮದ ಆದರ್ಶ ತತ್ವಗಳನ್ನು ಮೈ ಗೂಡಿಸಿ ಕೊಂಡಿದ್ದ ತಂಗಳ್ ರವರು ಮಹಾನ್ ಪಂಡಿತರು ಆಗಿದ್ದರು.ಇವರ ಸರಳ ನಡತೆ,ಇವರ ಬಳಿ ಇದ್ದ ಆಧ್ಯಾತ್ಮಿಕ ಚಿಂತನೆಗಳಿಂದ ದೊಡ್ಡ ದೊಡ್ಡ ಪಂಡಿತರುಗಳ ಇವರ ಮಾರ್ಗಧರ್ಶನವನ್ನು ಪಡೆವಂತೆ ಮಾಡಿತ್ತು.ಅವರು ಭಾಗವಹಿಸಿದ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಘಂಟೆಗಳ ಕಾಲ ಈ ಜಗತ್ತಿನ ಪ್ರತಿಯೊಂದು ಆಗು ಹೋಗುಗಳ ಬಗ್ಗೆ ತೀಕ್ಷಣವಾಗಿ ನುಡಿಯುವ ಮೂಲಕ ಸರ್ವ ಶಕ್ತನಾದ ಅಲ್ಲಾಹನಿಂದ ರಕ್ಷಣೆ ಕೋರಿ ಪ್ರಾಥನೆಯನ್ನು ಮಾಡುವಾಗ ನೆರೆದ ಜನಸ್ತೋಮ ಮನದಿಂದ ಆಮೀನ್ ಎಂಬ ಪದವನ್ನು ಉಚ್ಛರಿಸುತ್ತಿದ್ದರು.

ಸೌಮ್ಯ ಸ್ವಭಾವದ, ನಗುಮುಖದ ತಂಗಳ್ ರವರು ತಮ್ಮ ಬಳಿ ಕಷ್ಟ ನೋವುಗಳನ್ನು ಹೇಳಿ ಬರುವ ಸರ್ವರನ್ನು ಜಾತಿ ಧರ್ಮ ಭೇದವಿಲ್ಲದೆ ಸಮಾನ ಮನಸ್ಸಿನಿಂದ ಕಾಣುತ್ತಿದ್ದರು.ಆಧುನಿಕ ಯುಗದಲ್ಲಿ ನಡೆಯುವ ಕೆಲವು ಅನಿಸ್ಲಾಮಿಕ ಕಾರ್ಯಕ್ರಮಗಳನ್ನು ಕಡಾ ಖಂಡಿತವಾಗಿ ವಿರೋದಿಸುವ ಅವರು ಯಾರೇ ಆಗಿರಲಿ ಕಣ್ಣಿಗೆ ಕೈ ಹಾಕುವ ರೀತಿಯಲ್ಲಿ ಅವರಿಗೆ ಶಾಸಿಸಿ ಅವರಿಗೆ ಒಳಿತು ಮತ್ತು ಕೆಡುಕಿನ ಬಗ್ಗೆ ತಿಳಿ ಹೇಳುತ್ತಿದ್ದರು.
ಹಬ್ಬ ಹರಿದಿನ ಆಚರಣೆಯನ್ನು ಧೀನಿ ರೀತಿಯಲ್ಲಿ ಆಚರಿಸುವ ಬಗ್ಗೆ, ತಂದೆ,ತಾಯಿಗೆ ಮಕ್ಕಳು ನೀಡ ಬೇಕಾದ ಗೌರವಗಳ ಬಗ್ಗೆ,ಸಮಾಜದಲ್ಲಿ ಪರಸ್ಪರ ಸ್ನೇಹ ಜೀವನ ನಡೆಸುವ ಬಗ್ಗೆ,ಇತ್ತೀಚಿನ ಯುವ ಸಮುದಾಯ ವಾಟ್ಸ್ ಆಪ್- ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣ ಗಳಲ್ಲಿ ಹೆಚ್ಚಾಗಿ ಕಾಲ ಕಳೆಯುವ ಬಗ್ಗೆ ತೀಕ್ಷಣವಾಗಿ ನೇರಾ ನೇರವಾಗಿ ಬುದ್ದಿ ಮಾತುಗಳನ್ನು ಹೇಳಿ ಕೊಡುವವರಾಗಿದ್ದರು.ತಮ್ಮ ಬಳಿ ಬರುವವರನ್ನು ಬಡವ ಶ್ರೀಮಂತ ಎಂದು ನೋಡದೆ ಎಲ್ಲರನ್ನು ಸಮಾನ ಮನಸ್ಸಿನಿಂದ ಬರಮಾಡಿ ಕೊಳ್ಳುವ ಮನಸ್ಸಿನ ಮಹಾನ್ ತೇಜಸ್ವಿ ಯಾಗಿದ್ದರು.
ಯಾವುದೇ ಖಾಯಿಲೆಗಳ ಕಷ್ಟವನ್ನು ಹೇಳಿ ಬರುವ ಜನರಿಗೆ ತಮ್ಮ ಬಳಿ ಆಗುವುದಾದರೆ ಮಾತ್ರ ಅದಕ್ಕೆ ಪರಿಹಾರ ನೀಡುತ್ತಿದ್ದರು ಅದಲ್ಲದೆ ಇದ್ದರೆ ವೈದ್ಯಕೀಯದ ಅವಶ್ಯಕತೆ ಇದೆ ಎಂದರೆ ಉತ್ತಮ ವೈದ್ಯರನ್ನು ಸಂಪರ್ಕಿಸುವಂತೆ ಮಾಹಿತಿ ನೀಡಿ ಕಳುಹಿಸುತ್ತಿದ್ದರು.
ಇವರು ಪ್ರಾರ್ಥನೆ ನಡೆಸಿ ಕೊಟ್ಟ ನೀರಿನಿಂದ ಸವಿರಾರು ರೋಗಿಗಳು ಗುಣಮುಖರಾದ ನಿರ್ಧರ್ಶನಗಳು ಕಣ್ಣ ಮುಂದೆ ಇದೆ.
ರಾಜಕೀಯ,ಸಾಮಾಜಿಕ, ಧಾರ್ಮಿಕ ನಾಯಕರುಗಳು ಇವರ ಕೇಂದ್ರಕ್ಕೆ ತೆರಳಿ ತಮ್ಮ ತಮ್ಮ ಕಷ್ಟ ನೋವುಗಳನ್ನು ಹೇಳಿಕ್ಕೊಂಡು ಪರಿಹಾರ ಕಂಡು ಕೊಂಡದ್ದು ನೂರಾರು ಇದೆ.

ತಮ್ಮ ಖಾಝಿ ವ್ಯಾಪ್ತಿಗೆ ಬರುವ ಎಲ್ಲಾ ಮಸೀದಿಗಳ ಸುಪ್ರೀಂ ಇವರಾಗಿದ್ದರು. ನೂರಾರು ಮನೆಗಳ ಕೌಟುಂಭಿಕ ವಿಷಯಗಳಿಗೆ ಮಧ್ಯಸ್ತಿಕೆ ವಹಿಸಿ ಸರಿಯಾದ ಜೀವನ ದಾರಿಯನ್ನು ತೋರಿಸಿ ಕೊಟ್ಟ ಮಹಾನರು.
ಅದೆಷ್ಟೋ ಕಡೆಗಳಲ್ಲಿ ಭಾಷಣದಲ್ಲಿ ತಮ್ಮ ಖಾಝಿ ಸ್ಥಾನದ ಜವಾಬ್ದಾರಿಯ ಬಗ್ಗೆ ಹೇಳುತ್ತಾ ಈ ಸ್ಥಾನವನ್ನು ಅಲಂಕರಿಸಿದ ನನಗೆ ಎಷ್ಟೊಂದು ಭಯ ಇದೆ ಎಂದರೆ ನಾನು ನೀಡುವ ತೀರ್ಪು ಏನಾದರು ತಪ್ಪಾದಲ್ಲಿ ಸರ್ವ ಶಕ್ತನಾದ ಅಲ್ಲಾಹನ ನ್ಯಾಯ ಸ್ಥಾನದಲ್ಲಿ ನಾನು ಹೇಗೆ ನಿಲ್ಲಲೀ ಎಂದು ಭಯಪಟ್ಟು ಹೇಳುತ್ತಿದ್ದ ಮಾತುಗಳು ಇಂದಿಗೂ ಕಿವಿಗೆ ಗೂಜುವಂತಿದೆ.
ಅಷ್ಟೊಂದು ಸೂಕ್ಷ್ಮತೆಯಿಂದ ತಮ್ಮ ಜವಾಬ್ದಾರಿಯನ್ನು ಕಾದುಕ್ಕೊಂಡ ಮಾಹಾನ್ ವ್ಯಕ್ತಿತ್ವ ಅವರದಾಗಿತ್ತು.

ಸಮಯ ಪಾಲನೆ ಎಂಬುಹುದನ್ನು ತನ್ನ ಕರ್ತವ್ಯ ಎಂಬಂತೆ ಪಾಲಿಸುತ್ತಿದ್ದ ತಂಗಳ್ ರವರು ಯಾವುದೇ ಕಾರ್ಯಕ್ರಮಕ್ಕೆ ಅವರನ್ನು ಸಂಘಟಕರು ಆಹ್ವಾನಿಸಿದ್ದರೆ ಅವರು ಹೇಳಿದ ಸಮಯಕ್ಕೆ ಸರಿಯಾಗಿ ಬಂದು ವೇದಿಕೆಯನ್ನೇರಿ ಜನ ಇದ್ದರೂ ಇಲ್ಲದಿದ್ದರೂ ಅವರ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದರು.
ಇಂಥಹಾ ಮಹಾನ್ ಚೇತನ ಧಾರ್ಮಿಕ ನಾಯಕರೊಬ್ಬರು ಅಕಾಲಿಕವಾಗಿ ರಾತ್ರಿ ಬೆಳಗಾಗುವಷ್ಟರಲ್ಲಿ ಈ ನಶ್ವರ ಲೋಕದಿಂದ ವಿಧಾಯ ಹೇಳಿದ್ದು ಅವರ ಲಕ್ಷಾಂತರ ಅಭಿಮಾನಿ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ.
ಸರ್ವ ಶಕ್ತನಾದ ಅಲ್ಲಾಹನು ಅವರ ಸ್ಥಾನವನ್ನು ಇನ್ನೂ ಹೆಚ್ಚಾಗಿಸಲಿ, ಅವರು ತೋರಿದ ಸನ್ಮಾರ್ಗದ ದಾರಿಯಲ್ಲಿ ನಡೆಯಲು ನಮ್ಮೆಲ್ಲರಿಗೂ ಅನುಗ್ರಹಿಸಲಿ ಎಂಬ ಪ್ರಾರ್ಥನೆ ಯೊಂದಿಗೆ.

✍️ಹಸೈನಾರ್ ಜಯನಗರ