ಜನರು ಭಯ ಪಡಬಾರದೆಂದು ಪೋಲೀಸ್ ಇಲಾಖೆ ಸ್ಪಷ್ಟನೆ
ಅಜ್ಜಾವರ ಗ್ರಾಮದ ಕಾಟಿಪಳ್ಳದಲ್ಲಿ ಯುವಕನ ಕಿಡ್ನಾಪ್ ಪ್ರಕರಣ ಸುಳ್ಳು ಕತೆ ಎಂದು ಪೋಲೀಸ್ ವಿಚಾರಣೆ ವೇಳೆ ಗೊತ್ತಾಗಿದೆ. ಈ ಕುರಿತು ಪೋಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು ಕಿಡ್ನಾಪ್ ಯತ್ನ ಪ್ರಕರಣ ನಡೆದಿಲ್ಲ. ಜನರು ಭಯ ಪಡಬೇಡಿ ಎಂದು ಮಾಹಿತಿ ನೀಡಿದ್ದಾರೆ.
ಕಾಟಿಪಳ್ಳದ ಕುಶಲ ಎಂಬವರ ಮಗ ಧೀನ್ ರಾಜ್ ಜು.6ರಂದು ಮಧ್ಯಾಹ್ನ ಮನೆಯಿಂದ ಕಾಟಿಪಳ್ಳ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ 800 ಬಿಳಿ ಬಣ್ಣದ ಕಾರಿನಲ್ಲಿ ಬಂದವರು ಕಾರು ನಿಲ್ಲಿಸಿ ಆತನನ್ನು ಕಿಡ್ನಾಪ್ ಮಾಡಲು ಯತ್ನಿಸಿದರೆಂದೂ, ಆತ ಕಾರಿನಲ್ಲಿದ್ದ ಒಬ್ಬನಿಗೆ ಎರಡೇಟು ಬಿಗಿದು ಓಡಿ ತಪ್ಪಿಸಿಕೊಂಡನೆಂದೂ ಹೇಳಲಾಗಿತ್ತು. ಈ ಕುರಿತು ಜು.7 ರಂದು ಧೀನ್ ರಾಜ್ ರ ತಂದೆ ಪೋಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಈ ವಿಚಾರ ಊರಲ್ಲಿ ಪ್ರಚಾರವಾಗಿ ಮಕ್ಕಳ ಕಳ್ಳರಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿತು.
ಕಿಡ್ನಾಪ್ ವಿಚಾರದ ಮಾಹಿತಿ ‘ಸುದ್ದಿ’ಗೆ ತಿಳಿದುದರಿಂದ ಯುವಕ ಧೀನ್ ರಾಜ್ ರನ್ನು ಸಂಪರ್ಕಿಸಿ ಆತನಿಂದ ಮಾಹಿತಿ ಪಡೆಯಲಾಯಿತು. ಈ ವೇಳೆ ಆತ ಕಿಡ್ನಾಪ್ ಯತ್ನ ನಡೆದಿರುವುದು ಮತ್ತು ಅವರ ಕೈಯಿಂದ ತಪ್ಪಿಸಿಕೊಂಡು ಬಂದಿರುವ ಹಾಗೂ ಪೋಲೀಸರಿಗೆ ದೂರು ಕೊಟ್ಟಿರುವ ಕುರಿತು ಆತ ವಿವರಿಸಿದ್ದ.
ಪೋಲೀಸ್ ವಿಚಾರಣೆ
ಜು.8ರಂದು ಸುಳ್ಯ ಪೋಲೀಸರು ಧೀನ್ ರಾಜ್ ರ ತಂದೆ ಕುಶಲರು ನೀಡಿದ ದೂರಿನಂತೆ ತನಿಖೆ ಆರಂಭಿಸಿದರು. ಕಿಡ್ನಾಪ್ ನಡೆಸಿದ್ದರೆನ್ನಲಾದ ಸಮಯದ ಪ್ರಕಾರ ಅಜ್ಜಾವರದಲ್ಲಿ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದಾಗ ಆ ಸಮಯದ ಆಸುಪಾಸಿನಲ್ಲಿ ಎರಡು ಕಾರುಗಳು ಆ ರಸ್ತೆಯಾಗಿ ಹೋಗಿರುವುದು ಕಂಡು ಬಂತು. ಆದರೆ ಅದು ಬಿಳಿ ಬಣ್ಣದ ಕಾರುಗಳಲ್ಲ. ಮತ್ತು 800 ಮಾರುತಿ ಕಾರು ಕೂಡಾ ಆಗಿರಲಿಲ್ಲ. ಪೋಲೀಸರು ಮತ್ತೆ ಮತ್ತೆ ಆ ಯುವಕನನ್ನು ವಿಚಾರಿಸಿದಾಗ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂತೆಂದೂ ಕೊನೆಗೆ ಆತ ನಾನು ಸುಳ್ಳು ಹೇಳಿದ್ದು, ಕಿಡ್ನಾಪ್ ಯತ್ನ ಆಗಿರಲಿಲ್ಲ ಎಂದು ಹೇಳಿದನೆನ್ನಲಾಗಿದೆ. ಪೋಲೀಸರು ಆತನಿಂದ ಮುಚ್ಚಳಿಕೆ ಬರೆಯಿಸಿ, ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟರೆಂದು ತಿಳಿದು ಬಂದಿದೆ.
ಘಟನೆಯ ಕುರಿತು ಮಾಹಿತಿ ನೀಡಿದ ಸುಳ್ಯ ಪೋಲೀಸರು ಕಿಡ್ನಾಪ್ ಪ್ರಕರಣದ ಕುರಿತು ವಿಚಾರಣೆ ನಡೆಸಲಾಗಿದ್ದು ಆ ರೀತಿಯ ಘಟನೆ ನಡೆದಿಲ್ಲ ಎನ್ನುವುದು ಗೊತ್ತಾಗಿದೆ. ಮತ್ತು ಆತ ತಪ್ಪೊಪ್ಪಿಕೊಂಡಿದ್ದು, ಜನರು ಭಯ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.