ಆದರೂ ಎಲ್.ಕೆ.ಜಿ, ಯು.ಕೆ.ಜಿ ಆರಂಭಿಸುವ ಬಗ್ಗೆ ಮಾತು
ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಅಂಗನವಾಡಿ ಕೇಂದ್ರಕ್ಕೆ ಟರ್ಪಾಲು ಭಾಗ್ಯ ದೊರೆತಿದೆ.
ಎಂಟು ವಿದ್ಯಾರ್ಥಿಗಳನ್ನು ಹೊಂದಿರುವ ಮೆಟ್ಟಿನಡ್ಕ ಅಂಗನವಾಡಿ ಕೇಂದ್ರ ಕಳೆದ ಕೆಲ ದಿನಗಳಿಂದ ವೇದಿಕೆಯೊಂದಕ್ಕೆ ಟರ್ಪಾಲು ಅಡ್ಡಗಟ್ಟಿ, ಎರಡು ಬಾಗಿಲುಗಳಿಲ್ಲದ ವೇದಿಕೆಯೊಂದರಲ್ಲಿ ನಡೆಯುತ್ತಿದೆ.
ಅತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ , ಯು.ಕೆ.ಜಿ ಆರಂಭಿಸುವುದಾಗಿ ಘೋಷಣೆ ಮಾಡುತಿದ್ದರೆ, ಇತ್ತ ಹಳ್ಳಿಯ ಅಂಗನವಾಡಿ ಕೇಂದ್ರಕ್ಕೆ ಇದ್ದ ಕಟ್ಟಡ ಶಿಥಿಲಗೊಂಡು ಯಾವುದೇ ಸಂದರ್ಭ ರೀಪು ಅಥವಾ ಹಂಚು ಬೀಳುವ ಸ್ಥಿತಿಯಲ್ಲಿದ್ದ ಕಟ್ಟಡದಲ್ಲಿ ಇರಲಾರದೆ ಭಯಬೀತಿಯಿಂದ ಅಂಗನವಾಡಿಯಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಬಂದಿದೆ . ಇದನ್ನರಿತ ಸ್ಥಳೀಯ ಆಡಳಿತ, ಇಲಾಖಾಧಿಕಾರಿಗಳ ಸೂಚನೆಯಂತೆ ಪಕ್ಕದ ಶಾಲಾ ವೇದಿಕೆಯಲ್ಲಿ ಮಕ್ಕಳನ್ನು ಕುಳ್ಳಿರಿಸಿ ಪಾಠ ಮಾಡುವಂತೆ ತಿಳಿಸಿದೆ.
ಆದರೆ ವೇದಿಕೆಗೆ ಕಟ್ಟಿದ ಟರ್ಪಾಲು ಸಣ್ಣ ಗಾಳಿ ಬಂದರೂ ಆ ಕಡೆ ಈ ಕಡೆ ತೇಲಾಡುತ್ತದೆ. ಗಾಳಿ, ಮಳೆಗೆ ನೀರು ಮಕ್ಕಳು ಕುಳಿತಲ್ಲಿಗೆ ಬೀಳುತ್ತದೆ. ಅತ್ತ ಇದ್ದ ಕಟ್ಟಡಕ್ಕೂ ತೆರಳಲಾರದೆ, ಇತ್ತ ಟರ್ಪಾಲಿನಡಿಯಲ್ಲೂ ನಿಲ್ಲಲಾಗದಂತಹ ಪರಿಸ್ಥಿತಿ ಇಲ್ಲಿನ ಮಕ್ಕಳದ್ದು. ಇದರಿಂದ ಒಬ್ಬ ಪೋಷಕರಂತು ತನ್ನ ಮಗುವಿನ ಭದ್ರತೆ ಕಾರಣ ಹೇಳಿ ಬೇರೆ ಅಂಗನವಾಡಿಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಯಾರನ್ನೂ ದೂರ ಬೇಕೆಂದು ಜನರಿಗೆ ಗೊತ್ತಾಗುತ್ತಿಲ್ಲ. ಯಾಕೆಂದರೆ ಇತ್ತ ಸ್ಥಳೀಯಾಡಳಿತದ ಬಳಿ ಕಟ್ಟಡ ದುರಸ್ತಿಗೂ ಹಣವಿಲ್ಲ. ಇಲಾಖಾ ಅನುದಾನ ಬರುತ್ತಿಲ್ಲ. ಇತ್ತ ಬಡವರಿಗೆ ಇರುವ ವ್ಯವಸ್ಥೆಯನ್ನು ಸರ್ಕಾರ ವ್ಯವಸ್ಥೆಗೊಳಿಸದೆ ಖಾಸಗಿ ಶಿಕ್ಷಣದ ಕಡೆ ಮುಖ ಮಾಡುವಂತೆ ಮಾಡಲಾಗುತ್ತಿರುವುದು ವಿಪರ್ಯಾಸವೇ ಸರಿ.