ಸಂಸದ ಕ್ಯಾ. ಬೃಜೇಶ್ ಚೌಟ ಭಾಗಿ – ವಿದ್ಯಾರ್ಥಿಗಳಿಗೆ ಬಟ್ಟೆ ಕೈಚೀಲ ವಿತರಣೆ
ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ರಿ. ಮಂಗಳೂರು ಇದರ ವತಿಯಿಂದ ಪ್ರವರ್ತಿಸಲ್ಪಟ್ಟ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇದರ ಆಶ್ರಯದಲ್ಲಿ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ರಿ. ಜಾಲ್ಸೂರು ಇದರ ಸಹಯೋಗದೊಂದಿಗೆ ಹಾನಿಕಾರಕ ಪ್ಲಾಸ್ಟಿಕ್ ಮತ್ತು ಅದರ ನಿರ್ವಹಣೆ ಬಗ್ಗೆ ಮಾಹಿತಿ -ಸಂವಾದ ಕಾರ್ಯಕ್ರಮ ಜು. ೧೦ರಂದು ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯಲ್ಲಿ ನಡೆಯಿತು. ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್ ರೈ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಂಮನೆ ಅಧ್ಯಕ್ಷತೆ ವಹಿಸಿದ್ದರು. ಪರಿಸರ ತಜ್ಞ ಹಾಗೂ ಕೃಷಿಕ ಗೋಪಾಲ ಪೆರಾಜೆ ಸಂಪನ್ಮಲ ವ್ಯಕ್ತಿಗಳಾಗಿ ಮಾತನಾಡಿ, ತಂತ್ರಜ್ಞಾನದ ಉಪ ಉತ್ಪನ್ನವಾದ ಪ್ಲಾಸ್ಟಿಕ್ ಕೇವಲ ತ್ಯಾಜ್ಯವಾಗಿ ನಮ್ಮ ಕಣ್ಣಿಗೆ ಕಾಣಿಸುವುದು ಮಾತ್ರವಲ್ಲ ಒಟ್ಟಾರೆ ಪರಿಸರ ಮತ್ತು ಮಾನವನ ಆರೋಗ್ಯಕ್ಕೆ ಅತ್ಯಂತ ಹಾನಿಕರವಾಗಿ ಪರಿಣಮಿಸುತ್ತಿದೆ. ಪ್ರಸ್ತುತ ಪ್ಲಾಸ್ಟಿಕ್ ತ್ಯಾಜ್ಯಗಳ ನಿರ್ವಹಣೆ ಸವಾಲಿನ ಸಂಗತಿಯಾಗಿದ್ದು ಪ್ರತಿಯೊಬ್ಬರು ಈ ಬಗ್ಗೆ ಗಂಭೀರವಾಗಿ ಕಾರ್ಯತತ್ಪರಾಗಬೇಕಾಗಿದೆ. ನಮ್ಮ ಮನೆಯು ಸೇರಿದಂತೆ ಸಾರ್ವಜನಿಕ ಸ್ಥಳಗಳು ರಸ್ತೆಗಳು ಬೆಟ್ಟ ಗುಡ್ಡಗಳು ಅಂತಿಮದಲ್ಲಿ ಸಮುದ್ರ ಕೂಡ ಕಸದ ತ್ಯಾಜ್ಯಗಳಿಂದ ತುಂಬಿ ಮಾನವ ಮತ್ತು ಜೀವ ಜಾಲಕ್ಕೆ ತೀವ್ರ ಸ್ವರೂಪದ ಹಾನಿ ಮಾಡುತ್ತಿರುವುದು ಕಂಡುಬರುತ್ತದೆ. ಸಾಮೂಹಿಕ ಜಾಗೃತಿ ಮತ್ತು ಎಚ್ಚರಿಕೆಯಿಂದ ಮಾತ್ರ ಪ್ಲಾಸ್ಟಿಕ್ ತ್ಯಾಜ್ಯಗಳ ನಿರ್ವಹಣೆ ಸಾಧ್ಯ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಅಡ್ಡಂತ್ತಡ್ಕ ದೇರಣ್ಣ ಗೌಡ, ಸುಳ್ಯ ಬ್ಯಾಂಕ್ ಆಫ್ ಬರೋಡ ಶಾಖಾ ಹಿರಿಯ ವ್ಯವಸ್ಥಾಪಕ ವಿಜಯ್ ಎಂ. ಉಪಸ್ಥಿತರಿದ್ದರು. ವೇದಿಕೆಯಲ್ಲಿ ಶಾಲಾ ಮುಕ್ಯ ಶಿಕ್ಷಕಿ ಶ್ರೀಮತಿ ಜಯಲತಾ, ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಇದ್ದರು. ಶಾಲಾ ಶಿಕ್ಷಕ ಶಿವಪ್ರಕಾಶ್ ಕುದ್ಪಾಜೆ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ಶಿವಪ್ರಸಾದ್ ವಂದಿಸಿದರು. ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಸಹಕರಿಸಿದರು.
ಸಂಸದ ಕ್ಯಾ.ಬೃಜೇಶ್ ಚೌಟ ಭಾಗಿ
ಸುಳ್ಯದಲ್ಲಿ ಕೆಡಿಪಿ ಸಭೆಗೆ ಆಗಮಿಸಿ ಮಂಗಳೂರಿಗೆ ತೆರಳುತ್ತಿದ್ದ ಸಂಸದ ಕ್ಯಾ. ಬ್ರಿಜೇಶ್ ಚೌಟರವರು ಕಾರ್ಯಕ್ರಮಕ್ಕೆ ಆಗಮಿಸಿ ಶಾಲಾ ಆವರಣದಲ್ಲಿ ಗಿಡ ನೆಟ್ಟು ಸಮಿತಿಯ ವತಿಯಿಂದ ಶಾಲಾ ಮಕ್ಕಳಿಗೆ ನೀಡಿದ ಬಟ್ಟೆ ಕೈಚೀಲವನ್ನು ಸಾಂಕೇತಿಕವಾಗಿ ಶಾಲಾ ನಾಯಕಿಗೆ ವಿತರಿಸಿ ಶುಭ ಹಾರೈಸಿದರು.