ಕನಕಮಜಲು: ರಾಷ್ಟ್ರೀಯ ಹೆದ್ದಾರಿ ಬದಿಯ ಅಪಾಯಕಾರಿ ಮರ ತೆರವಿಗೆ ಆದೇಶ ಆಗಿದ್ದರೂ ತೆರವು ಮಾಡದ ಅರಣ್ಯ ಇಲಾಖೆ

0

ಕನಕಮಜಲು ಗ್ರಾಮದ ಪಂಜಿಗುಂಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ನಾಲ್ಕು ಅಪಾಯಕಾರಿ ಮರಗಳ ತೆರವಿಗೆ ಕಳೆದ ನಾಲ್ಕು ವರ್ಷಗಳ ಹಿಂದೆಯೇ ತೆರವಿಗೆ ಅರಣ್ಯ ಇಲಾಖೆಯ ಆದೇಶ ಆಗಿದ್ದರೂ, ಇಲಾಖೆ ಮಾತ್ರ ಇನ್ನೂ ತೆರವು ಮಾಡದೇ ಇದ್ದು, ಮಳೆಗಾಲದಲ್ಲಿ ಅಪಾಯವನ್ನು ಆಹ್ವಾನಿಸುತ್ತಿದೆ.

ಕಳೆದ 2019-20ರಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯ ಅಪಾಯಕಾರಿ ಮರ ತೆರವು ಮಾಡುವಂತೆ ಕನಕಮಜಲು ಗ್ರಾಮ ಪಂಚಾಯತಿ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ 33 ಕೆ.ವಿ. ವಿದ್ಯುತ್ ಲೈನ್ ಕೂಡ ಬೃಹತ್ ಮರದ ಅಡಿಯಲ್ಲಿ ಇರುವುದರಿಂದ ಮೆಸ್ಕಾಂ ಇಲಾಖೆಗೂ ಮರ ತೆರವಿಗೆ ಸಹಕರಿಸುವಂತೆ ಗ್ರಾಮ ಪಂಚಾಯತಿ ವತಿಯಿಂದ ಮನವಿ ಸಲ್ಲಿಸಲಾಗಿತ್ತು.

ಕನಕಮಜಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಜಿಗುಂಡಿಯಲ್ಲಿ ಮಾವು, ಬೊಳ್ಪಾಲೆ, ಮರುವ ಜಾತಿಯ ನಾಲ್ಕು ಅಪಾಯಕಾರಿ ಮರಗಳಿದ್ದು, ಗ್ರಾ.ಪಂ. ವತಿಯಿಂದ ತೆರವಿಗೆ ಮನವಿ ಸಲ್ಲಿಸಿದ ಮೇರೆಗೆ ವಲಯ ಅರಣ್ಯಾಧಿಕಾರಿ , ಪುತ್ತೂರು ವಲಯ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪುತ್ತೂರು ಉಪವಿಭಾಗದ ಶಿಫಾರಸ್ಸಿನಂತೆ ಅರಣ್ಯ ಇಲಾಖೆಯ ವತಿಯಿಂದ ತೆರವುಗೊಳಿಸಲು ಆದೇಶವಾಗಿದ್ದು, ಈ ಹಿಂದೆಯೇ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಯ ವತಿಯಿಂದ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಲಾಗಿತ್ತು. ಆದರೆ ಮರ ತೆರವಿಗೆ ಇಲಾಖೆಯ ಆದೇಶ ಆಗಿದ್ದರೂ, ಇದುವರೆಗೆ ಮರಗಳ ತೆರವು ಕಾರ್ಯ ಮಾತ್ರ ಆಗಿಲ್ಲ.