ಅಪ್ಪ – ಅಮ್ಮನನ್ನು ಕರೆದುಕೊಂಡು ಬರಬೇಕೆಂದು ರಿಕ್ಷಾ ಬಾಡಿಗೆ ಮಾಡಿಕೊಂಡು ಸ್ಮಶಾನಕ್ಕೆ ಹೋದ ವ್ಯಕ್ತಿ…!

0

ನನ್ನ ಅಪ್ಪ – ಅಮ್ಮನನ್ನು ಕರೆದುಕೊಂಡು ಬರಬೇಕೆಂದು ರಿಕ್ಷಾ ಏರಿದ ವ್ಯಕ್ತಿಯೊಬ್ಬ ಸೀದಾ ಸುಳ್ಯದ ಕೊಡಿಯಾಲಬೈಲು ಸ್ಮಶಾನಕ್ಕೆ ಕರೆದುಕೊಂಡು ಹೋದ ಘಟನೆ ಜು.೧೩ರಂದು ವರದಿಯಾಗಿದೆ.


ಸುಳ್ಯ ಬಸ್ ನಿಲ್ದಾಣ ಬಳಿ ಅಟೋ ನಿಲ್ದಾಣಕ್ಕೆ ಬಂದ ವ್ಯಕ್ತಿಯೊಬ್ಬ ರಿಕ್ಷಾವೊಂದನ್ನು ಏರಿ, `ನಾನು ಅಜ್ಜಾವರ ಹೋಗಬೇಕು. ಬಾಡಿಗೆ ಎಷ್ಟಾಗುತ್ತದೆ ಎಂದು ಕೇಳಿದನೆಂದೂ, ಆಗ ಅಟೋ ಚಾಲಕ ೨೦೦ ರೂ ಬಾಡಿಗೆ ಆಗುತ್ತದೆ ಎಂದು ಹೇಳಿದನೆನ್ನಲಾಗಿದೆ. ಆಗ ಆ ವ್ಯಕ್ತಿ ಆಯಿತು. ಹೋಗೋಣ ಎಂದು ಹೇಳಿ ರಿಕ್ಷಾ ಸುಳ್ಯ ಜಟ್ಟಿಪಳ್ಳ ಕ್ರಾಸ್ ತಲುಪುತ್ತಿದ್ದಂತೆ ಇಲ್ಲೇ ಪಕ್ಕದಲ್ಲಿ ನನ್ನ ತಂದೆ ತಾಯಿ ಇದ್ದಾರೆ ಅವರನ್ನು ಕರೆದುಕೊಂಡು ಹೋಗಬೇಕು. ಈ ರಸ್ತೆಯಲ್ಲಿ ಹೋಗಿ ಎಂದು ಜಟ್ಟಿಪಳ್ಳ- ಕೊಡಿಯಾಲಬೈಲು ರಸ್ತೆಯ ದಾರಿ ತೋರಿಸಿದನೆಂದೂ, ಆ ವ್ಯಕ್ತಿ ಹೇಳಿದಂತೆ ಅಟೋ ಚಾಲಕ ರಿಕ್ಷಾವನ್ನು ಕೊಡಿಯಾಲಬೈಲಿಗೆ ಹೋದ. ರಿಕ್ಷಾ ಕೊಡಿಯಾಲಬೈಲು ತಲುಪುತ್ತಿದ್ದಂತೆ ಆಟೋ ಚಾಲಕ ಎಲ್ಲಿ’ ಎಂದು ಕೇಳಿದಾಗ, ಸ್ಮಶಾನದ ಕಡೆ ದಾರಿ ತೋರಿಸಿದ ಆ ವ್ಯಕ್ತಿ ನೀವು ಇಲ್ಲಿ ಇರಿ ನಾನು ಕರೆದುಕೊಂಡು ಬರುತ್ತೇನೆಂದು ರಿಕ್ಷಾ ಇಳಿದು ಸ್ಮಶಾನದತ್ತ ಹೋದನೆನ್ನಲಾಗಿದೆ.

ಕೆಲ ಹೊತ್ತು ಅಲ್ಲೇ ನಿಂತ ಅಟೋ ಚಾಲಕ, ಹೋದ ವ್ಯಕ್ತಿ ಬಾರದಿದ್ದಾಗ ವಾಪಾಸ್ಸು ಸುಳ್ಯಕ್ಕೆ ಬಂದು ತನ್ನ ಸ್ನೇಹಿತರಿಗೆ ನಡೆದ ವಿಚಾರ ತಿಳಿಸಿದರೆಂದು ತಿಳಿದು ಬಂದಿದೆ.


ಸಂಜೆಯ ವೇಳೆಗೆ ಅಟೋ ಬಾಡಿಗೆ ಮಾಡಿದ ವ್ಯಕ್ತಿ ಸುಳ್ಯದ ಮುಖ್ಯ ರಸ್ತೆಯಲ್ಲಿ ಕೈಯಲ್ಲೊಂದು ಬಾಚಣಿಕೆ ಹಿಡಿದು ನಡೆದುಕೊಂಡು ಬರುತ್ತಿದ್ದನೆಂದೂ, ಆತ ಮಾನಸಿಕ ಅಸ್ವಸ್ಥರಾಗಿರಬೇಕೆಂದು ಆಡಿಕೊಳ್ಳ ತೊಡಗಿದರು.