3 ತಿಂಗಳು ಕೊಯನಾಡು ಶಾಲೆ ಮುಚ್ಚಲು ನಿರ್ಧಾರ : ಮಕ್ಕಳಿಗೆ ಸಂಪಾಜೆ ಶಾಲೆಯಲ್ಲಿ ಶಿಕ್ಷಣ
ಭಾರೀ ಮಳೆಯ ಪರಿಣಾಮ ಕೊಯನಾಡು ಶಾಲೆಯ ಹಿಂಬದಿಯ ಬರೆ ಜರಿದು ಶಾಲೆಯ ಮೇಲೆ ಬೀಳುತ್ತಿದ್ದು, ಮಳೆಗಾಲ ಮುಗಿಯುವ ತನಕ ಶಾಲೆಯನ್ನು ಮುಚ್ಚಲು ಆದೇಶ ಮಾಡಲಾಗಿದ್ದು, ನಾಳೆಯಿಂದ ಕೊಯನಾಡು ಶಾಲೆ ಮಕ್ಕಳಿಗೆ ಪಕ್ಕದ ಸಂಪಾಜೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಕೊಡಿಸಲು ಇಲಾಖೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಕೊಯನಾಡು ಶಾಲೆಯ ಹಿಂಬದಿ ದೊಡ್ಡ ಗಾತ್ರದ ಬರೆ ಇದ್ದು, ಕಳೆದ ವರ್ಷವೇ ಇದು ಜರಿದು ಶಾಲೆಯ ಮೇಲೆ ಬಿದ್ದಿತ್ತು. ಈ ಬಾರಿ ಮಳೆ ಆರಂಭದಲ್ಲೇ ಬರೆ ಜರಿದು ಶಾಲೆಯ ಮೇಲೆ ಬಿದ್ದಿತ್ತು. ಇದೀಗ ಮತ್ತಷ್ಟು ಜರಿದಿದ್ದು, ಅಲ್ಲಿ ಮಕ್ಕಳು ಕುಳಿತುಕೊಳ್ಳುವುದು ಅಪಾಯವೆಂದರಿತ ಇಲಾಖೆ, ಇದೀಗ ಮುಂದಿನ ಮೂರು ತಿಂಗಳು ಶಾಲೆ ಮುಚ್ಚಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಅಲ್ಲಿಯವರೆಗೆ ಕೊಯನಾಡು ಶಾಲೆಯಲ್ಲಿ ಈಗ ಇರುವ ಮಕ್ಕಳಿಗೆ ಪಕ್ಕದ ಸಂಪಾಜೆ ಶಾಲೆಯಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.