ಮಡಿಕೇರಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧದ ಪರಿಣಾಮ

0

ಸಂಪಾಜೆ ಚೆಕ್ ಪೋಸ್ಟ್ ಬಳಿ ಸರತಿ ಸಾಲಿನಲ್ಲಿ ನಿಂತಿರುವ ವಾಹನಗಳು

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡಿನ ಕರ್ತೋಜಿ ಬಳಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಕಾರಣ ಇಂದು ರಾತ್ರಿ 8 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯ ವರೆಗೆ ಸಂಪಾಜೆ – ಮಡಿಕೇರಿ ಮಧ್ಯೆ ವಾಹನ ಓಡಾಟವನ್ನು ಕೊಡಗು ಜಿಲ್ಲಾಡಳಿತ ಬಂದ್ ಮಾಡಿಸಿರುವ ಕಾರಣ ಸಂಪಾಜೆ ಚೆಕ್ ಪೋಸ್ಟ್ ಬಳಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿವೆ.

ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ್ ರವರ ಆದೇಶದ ಮೇರೆಗೆ ಸಂಪಾಜೆ ಗೇಟನ್ನು ಪೋಲೀಸರು ಬಂದ್ ಮಾಡಿ ಯಾವುದೇ ವಾಹನ ಮಡಿಕೇರಿ ಕಡೆಗೆ ಹೋಗದಂತೆ ತಡೆಯುತ್ತಿದ್ದಾರೆ.


ಮಡಿಕೇರಿಯ ಟೋಲ್ ಗೇಟ್ ನಲ್ಲಿ ಕೂಡ ಬ್ಯಾರಿಕೇಡ್ ಗಳನ್ನು ಇರಿಸಿ ಇದೇ ರೀತಿ ಸಂಪಾಜೆ ಕಡೆಗೆ ಬರುವ ವಾಹನಗಳನ್ನು ತಡೆಯಲಾಗುತ್ತಿದೆ.

ಇಂದು ಸಂಜೆಯ ವೇಳೆಗೆ ಈ ನಿಷೇಧ ಘೋಷಣೆಯಾದುದರಿಂದ ವಿಷಯ ತಿಳಿಯದ ಲಾರಿ, ಬಸ್, ಕಾರು ಮತ್ತಿತರ ವಾಹನಗಳವರು ಬಂದು ಸಂಪಾಜೆ ಗೇಟಲ್ಲಿ ತಡೆಹಿಡಿಯಲ್ಪಟ್ಟಿದ್ದಾರೆ. ಸುಮಾರು ಮೂವತ್ತರಷ್ಟು ಲಾರಿಗಳು, ಇಪ್ಪತ್ತರಷ್ಟು ಕಾರುಗಳು, ಹದಿನೈದಕ್ಕಿಂತ ಹೆಚ್ಚು ಸರಕಾರಿ ಮತ್ತು ಖಾಸಗಿ ಬಸ್ಸುಗಳು ಗೇಟಿನ ಬಳಿ ನಿಂತಿವೆ.

ಶಿರಾಡಿ ಘಾಟಿ ಕೂಡ ಸಂಚಾರಕ್ಕೆ ಬಂದ್ ಆಗಿರುವುದರಿಂದ ಮೈಸೂರು ಬೆಂಗಳೂರು ಕಡೆಗೆ ಹೋಗಬೇಕಾದವರು ಚಾರ್ಮಾಡಿ, ಮೂಡಿಗೆರೆಗಾಗಿ ಹೋಗಬೇಕಷ್ಟೆ. ಅಲ್ಲದಿದ್ದರೆ ನಾಳೆ ಬೆಳಿಗ್ಗೆ ಆರು ಗಂಟೆಯ ವರೆಗೆ ಕಾಯಬೇಕಾಗುತ್ತದೆ.